ಹುಂಬತನವೇ? ಆತ್ಮವಿಶ್ವಾಸವೇ? ಪ್ರದೀಪ್ ಈಶ್ವರ್ ಯಶಸ್ಸಿನ ಹಿಂದಿನ ಕಥೆ

Pradeep Eshwar

ಸಿಎಂ ಡಿಕೆ ಶಿವಕುಮಾರ್ ಅವರ ಹೆಸರು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು ಒಂದು ದಿನ ತಪ್ಪಬಹುದೇನೋ ಆದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೆಸರು ತಪ್ಪುವುದಿಲ್ಲ. ಪ್ರತಿದಿನ ಒಂದಲ್ಲ ಒಂದು ಹೇಳಿಕೆ ನೀಡಿ ಸದ್ದು-ಸುದ್ದಿ ಆಗುತ್ತಲೇ ಇರುತ್ತಾರೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್. ಎಚ್​​ಡಿ ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಶ್ರೀರಾಮುಲು, ಪ್ರತಾಪ್ ಸಿಂಹ ಕೊನೆಗೆ ಯಡಿಯೂರಪ್ಪ ಅವರನ್ನೂ ಬಿಡದೆ ತಮ್ಮದೇ ಶೈಲಿಯಲ್ಲಿ ಟೀಕಿಸುವ ನಿಂದಿಸುವ ಈಶ್ವರ್​​ಗೆ ರಾಜ್ಯ ರಾಜಕಾರಣದಲ್ಲಿ ಪ್ರತ್ಯೇಕ ಅಭಿಮಾನಿ ವರ್ಗವೇ ಸೃಷ್ಟಿ ಆದಂತಿದೆ. ‘ಮೊದಲ ಬಾರಿ ಶಾಸಕ ಆದವನಿಗೆ ಇದೆಲ್ಲ ಬೇಕಿತ್ತೆ, ತಗ್ಗಿ-ಬಗ್ಗಿ ನಡೆಯಬೇಕು’ ಎಂಬುದು ಹಲವು ಅನುಭವಿಗಳ ಅಭಿಪ್ರಾಯ, ಆದರೆ ಪ್ರದೀಪ್ ಈಶ್ವರ್​​ಗೆ ‘ತಗ್ಗಿ-ಬಗ್ಗಿ’ ನಡೆಯುವುದು ಬರದು. ಏಕೆಂದರೆ ಅವರು ಜೀವನದುದ್ದಕ್ಕೂ ಸವಾಲುಗಳನ್ನು ಖುದ್ದು ತಾವೇ ಮೈಮೇಲೆ ಎಳೆದುಕೊಂಡು ಎದುರಿಸಿಕೊಂಡು ಬಂದವರು.

ಚಿಕ್ಕಬಳ್ಳಾಪುರದ ಸಣ್ಣ ಹಳ್ಳಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪ್ರದೀಪ್ ಈಶ್ವರ್, ಇಂದು ಏರಿರುವ ಎತ್ತರ ಅವರನ್ನು ಹತ್ತಿರದಿಂದ ನೋಡಿದ ಹಲವರ ಹುಬ್ಬೇರುವಂತೆ ಮಾಡಿದೆ. ಅವರದ್ದು ಅಸಾಧಾರಣ ಬೆಳವಣಿಗೆ, ಯಾವ ಹಿನ್ನೆಲೆ ಇಲ್ಲದೆ, ಯಾವ ಗಾಡ್ ಫಾದರ್ ಇಲ್ಲದೆ ಕೇವಲ ಸ್ವಂತ ಶ್ರಮ ಮತ್ತು ಅಭೂತಪೂರ್ವ ಆತ್ಮವಿಶ್ವಾಸವೊಂದರಿಂದಲೇ ಅವರು ತಾವು ಈಗಿರುವ ಹಂತವನ್ನು ತಲುಪಿದ್ದಾರೆ. ಜೀವನದಲ್ಲಿ ಹಲವು ಬಾರಿ ‘ತಗ್ಗಿ-ಬಗ್ಗಿ’ ನಡೆಯಲೇಬೇಕಾದ ಸಮಯಗಳು ಪ್ರದೀಪ್​​ಗೆ ಎದುರಾಗಿದ್ದವು, ಆದರೆ ಎಂದಿಗೂ ‘ತಗ್ಗುವ-ಬಗ್ಗುವ’ ವ್ಯಕ್ತಿತ್ವದ ಆಯ್ಕೆಯನ್ನೇ ಮಾಡಿಕೊಳ್ಳಲಿಲ್ಲ ಅವರು. ಒಂದು ರೀತಿ ‘ತಗ್ಗೇದೆ ಲೇ’ (ಬಾಗೋದೆ ಇಲ್ಲ) ಆಟಿಟ್ಯೂಟ್ ಅವರದ್ದು. ಈ ಆಟಿಟ್ಯೂಡ್​ಗೆ ಕಾರಣವೇನು?

ಶಿಕ್ಷಣ ಕ್ಷೇತ್ರದಲ್ಲಿ ಪಯಣ‌

ಸಣ್ಣ ಕುಟುಂಬದಿಂದ ಬಂದ ಪ್ರದೀಪ್​​ ಜೀವನೋಪಾಯಕ್ಕೆ ಹಲವು ಕೆಲಸಗಳನ್ನು ಮಾಡಿದ್ದಾರೆ. ಆದರೆ ಅವರಿಗೆ ಹೆಸರು, ಗೌರವ ತಂದುಕೊಟ್ಟಿದ್ದು ಶಿಕ್ಷಕ ವೃತ್ತಿ. ಒಳ್ಳೆಯ ಮಾತುಗಾರ ಆಗಿದ್ದ ಪ್ರದೀಪ್​​ ಶಿಕ್ಷಕನಾಗಿ ಸಾಕಷ್ಟು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಸಮೀಪದ ವಿಜಯಪುರದಲ್ಲಿ ಸುಮಾರು ಮೂರು ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಿದ ಕೆಲವರು ಹೇಳುವಂತೆ ಪ್ರತಿ ಸಂಸ್ಥೆಯಲ್ಲೂ ವಿರೋಧಗಳನ್ನು ಕಟ್ಟಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ಅತ್ಯುತ್ಸಾಹ, ಆತ್ಮವಿಶ್ವಾಸ. ತಮ್ಮ ಅದ್ಭುತ ಮಾತುಗಾರಿಕೆಯಿಂದ ವಿದ್ಯಾರ್ಥಿಗಳೊಟ್ಟಿಗೆ ಗಾಢ ಬಂಧ ಸ್ಥಾಪಿಸಿಕೊಳ್ಳುತ್ತಿದ್ದ ಪ್ರದೀಪ್, ಹೋದಲ್ಲೆಲ್ಲ ವಿದ್ಯಾರ್ಥಿಗಳ ಅಚ್ಚು-ಮೆಚ್ಚು ಆಗಿಬಿಡುತ್ತಿದ್ದರು. ಶಾಲೆ-ಕಾಲೇಜುಗಳಲ್ಲಿ ಹೊಸ-ಹೊಸ ಪ್ರಯೋಗಳನ್ನು ಮಾಡಲು ಬಯಸುತ್ತಿದ್ದರು, ಇದು ಆಡಳಿತ ಮಂಡಳಿಯನ್ನು ಪೀಕಲಾಟಕ್ಕೆ ಸಿಲುಕಿಸುತ್ತಿತ್ತು. ಕೆಲ ಶಿಕ್ಷಣ ಸಂಸ್ಥೆಗಳು ಪ್ರದೀಪ್ ಅವರನ್ನು ಅವರ ಅತಿಯಾದ ಉತ್ಸಾಹದ ಕಾರಣಕ್ಕೆ ತಡೆದುಕೊಳ್ಳಲಾರದೆ ಹೊರಗೆ ಕಳಿಸಿದ್ದು ಸಹ ಇದೆ. ವಿಜಯಪುರದ ಶಿಕ್ಷಣ ಸಂಸ್ಥೆಯೊಂದರಲ್ಲಿ ತೀವ್ರ ಅವಮಾನವನ್ನು ಸಹ ಪ್ರದೀಪ್ ಎದುರಿಸಿದ್ದರು.

ವಿಜಯಪುರದಲ್ಲಿ ಆದ ಅವಮಾನ

ಇದೇ ವಿಜಯಪುರದಲ್ಲಿ ನಡೆದ ಮತ್ತೊಂದು ಘಟನೆ ನೆನಪಿಸಿಕೊಳ್ಳಲೇ ಬೇಕು. 2018ರಲ್ಲಿ ವಿಜಯಪುರ ಪಟ್ಟಣವನ್ನು ತಾಲ್ಲೂಕು ಮಾಡಬೇಕೆಂದು ಒತ್ತಾಯಿಸಿ ವಿಜಯಪುರ ತಾಲ್ಲೂಕು ಹೋರಾಟ ಸಮಿತಿಯು ಬಂದ್ ಆಚರಿಸಿತ್ತು. ಆದರೆ ಅದೇ ಸಮಯದಲ್ಲಿ ಈ ಬಂದ್​​ಗೆ ವಿರುದ್ಧವಾಗಿದ್ದ ಕೆಲವರು ಪ್ರದೀಪ್​​ ಅನ್ನು ಬಳಸಿಕೊಂಡು ಮಾಧ್ಯಮಗಳಲ್ಲಿ ಹೇಳಿಕೆ ಕೊಡಿಸಿದರು. ‘ಈ ಬಂದ್​​ಗೆ ಹಳ್ಳಿಗಳ ಬೆಂಬಲ ಇಲ್ಲ, ಬಂದ್​​​ ಸಫಲ ಆಗಿಲ್ಲ, ಬಂದ್ ನ್ಯಾಯಯುತ ಬೇಡಿಕೆ ಅಲ್ಲ’ ಎಂದು ಮಾಧ್ಯಮಗಳ ಮುಂದೆ ಪ್ರದೀಪ್ ಹೇಳಿದರು. ಬಂದ್​​ಗೆ ಕರೆ ಕೊಟ್ಟಿದ್ದ ಸಂಘಟನೆಗಳೆಲ್ಲ ಸೇರಿ ಪ್ರದೀಪ್​​ ಮೇಲೆ ಮುತ್ತಿಗೆ ಹಾಕಿದವು. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರದೀಪ್ ಆಶ್ರಯ ಪಡೆಯುವಂತಾಯ್ತು. ಇದೆಲ್ಲ ನಡೆದಾಗ ಪ್ರದೀಪ್ ಖಾಸಗಿ ಶಾಲೆ ಶಿಕ್ಷಕ ಅಷ್ಟೆ. ಪ್ರದೀಪ್​​ಗೆ ಅದೆಂಥ ಹುಂಬುತನ, ಉತ್ಸಾಹ ಇತ್ತೆಂಬುದಕ್ಕೆ ಆ ಘಟನೆ ಸಾಕ್ಷಿ. ಆದರೆ ಪ್ರದೀಪ್ ಇದನ್ನು ಅಷ್ಟಕ್ಕೆ ಬಿಡಲಿಲ್ಲ. ಹೋರಾಟಗಾರರ ಕೆಲ ತಿಂಗಳ ಹೋರಾಟ ತಣ್ಣಗಾಗುತ್ತಿದ್ದಂತೆ ತಾವು ವಿಜಯಪುರ ಸರ್ಕಲ್​​ನಲ್ಲಿ ಅಂಬೇಡ್ಕರ್ ಫೋಟೊ ಹಿಡಿದು ಪ್ರತಿಭಟನೆಗೆ ಕೂತರು. ಹೋರಾಟ ಸಮಿತಿಯಿಂದ ಆಗದ ಕೆಲಸವನ್ನು ತಾನು ಮಾಡಿ ತೋರಿಸುತ್ತೇನೆ ಎಂದರು. ಆಗಲೂ ಸಹ ಪೊಲೀಸರು ಬಂದು ಬಲವಂತದಿಂದ ಪ್ರದೀಪ್ ಅವರನ್ನು ಎತ್ತೊಯ್ಯಬೇಕಾಯ್ತು.

ಸುಧಾಕರ್‌ ವಿರುದ್ಧ ಚಳವಳಿ

ಆ ಘಟನೆ ಬಳಿಕ ಪ್ರದೀಪ್, ವಿಜಯಪುರದಿಂದ ಚಿಕ್ಕಬಳ್ಳಾಪುರದತ್ತ ಮರಳಿದರು. ಅಲ್ಲಿ ಸುಧಾಕರ್ ವಿರುದ್ಧ ಚಳವಳಿಯನ್ನೇ ಪ್ರಾರಂಭಿಸಿದರು. ಸಿನಿಮಾ ಶೈಲಿಯ ಡೈಲಾಗ್​​ಗಳನ್ನು ಸುಧಾಕರ್ ವಿರುದ್ಧ ಹರಿಬಿಟ್ಟರು. ಸುಧಾಕರ್ ಅಕ್ರಮ ಆಸ್ತಿಗಳನ್ನು ಬಹಿರಂಗ ಮಾಡುವುದಾಗಿ ಸವಾಲು ಹಾಕಿದರು. ಯಾವ ಯಾವುದೋ ದಾಖಲೆಗಳನ್ನೆಲ್ಲ ತಂದು ಬಿಡುಗಡೆ ಮಾಡಿದರು. ಇದೇ ಕಾರಣಕ್ಕೆ ಬಂಧನಕ್ಕೆ ಒಳಗಾಗಿ ಕೆಲ ಸಮಯ ಜೈಲಿನಲ್ಲಿ ಸಮಯ ಸಹ ಕಳೆದರು. ಸುಧಾಕರ್ ಎದುರಾಗಿದ್ದ ಆಗಿನ ಕೆಲ ಚಿಕ್ಕಬಳ್ಳಾಪುರ ಕಾಂಗ್ರೆಸ್ ಯುವನಾಯಕರು ಪ್ರದೀಪ್​​ಗೆ ಬೆಂಬಲವಾಗಿ ನಿಂತರು.

‘ಪರಿಶ್ರಮ’ದ ಹಾದಿ

ಅದಾದ ಬಳಿಕ ಬೆಂಗಳೂರಿಗೆ ತೆರಳಿ ಅಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಿದರು. ಕೆಲವು ಹೂಡಿಕೆದಾರರನ್ನು ಸಹ ಹುಡುಕಿ ತಂದರು. ಪರಿಶ್ರಮ ಕಟ್ಟಿದರು. ಅಲ್ಲಿಯೂ ಸಹ ಒಮ್ಮೆ ತಮ್ಮ ವಿದ್ಯಾರ್ಥಿನಿ ತನುಜಾ ಪರೀಕ್ಷೆ ತಪ್ಪಿಸಿಕೊಳ್ಳುತ್ತಾಳೆಂದಾಗ ಪತ್ರಕರ್ತ ವಿಶ್ವೇಶ್ವರ ಭಟ್ಟರ ನೆರವು ಪಡೆದು, ಅವರ ಮೂಲಕ ಆಗಿನ ಸಿಎಂ ಯಡಿಯೂರಪ್ಪ ಅವರ ನೆರವು ಪಡೆದು ವಿದ್ಯಾರ್ಥಿನಿ ಪರೀಕ್ಷೆ ಬರೆಯುವಂತೆ ಮಾಡಿದರು. ಅದು ರಾಜ್ಯದಾದ್ಯಂತ ಸುದ್ದಿ ಸಹ ಆಯ್ತು. ಇಲ್ಲೆಲ್ಲ, ಅವರ ಉತ್ಸಾಹ, ಸೋಲೊಪ್ಪಲು ತಯಾರಿಲ್ಲದ ಮನಸ್ಥಿತಿಯನ್ನು ಗಮನಿಸಬಹುದು. ಯಾವುದಕ್ಕೂ ಹಿಂಜರಿಯದ, ಪ್ರಯತ್ನಿಸದೇ ಬಿಡದ ಹಠದ ವ್ಯಕ್ತಿತ್ವ ಪ್ರದೀಪ್ ಅವರದ್ದು.

ಶಾಸಕ ಆಗಿದ್ದು ಹೇಗೆ?

ಪರಿಶ್ರಮ ತುಸು ಗಟ್ಟಿಯಾದ ಬಳಿಕ ಮತ್ತೆ ಚಿಕ್ಕಬಳ್ಳಾಪುರಕ್ಕೆ ಮರಳಿದರು. ಈ ಬಾರಿ ಶಾಸಕ ಸುಧಾಕರ್ ಜೊತೆಗೆ ವೇದಿಕೆ ಹಂಚಿಕೊಂಡರು, ಸುಧಾಕರ್ ಅವರನ್ನು ಕೆಲ ವೇದಿಕೆಗಳಲ್ಲಿ ಬಹುವಾಗಿ ಕೊಂಡಾಡಿದರು. ಅಭಿವೃದ್ಧಿಯ ಹರಿಕಾರ ಎಂದರು. ಆದರೆ ಅದಾದ ಕೆಲವೇ ತಿಂಗಳುಗಳಲ್ಲಿ ಚಿಕ್ಕಬಳ್ಳಾಪುರ ರಾಜಕೀಯ ಲೆಕ್ಕಾಚಾರ, ವಿಶೇಷವಾಗಿ ಚಿಕ್ಕಬಳ್ಳಾಪುರ ಕಾಂಗ್ರೆಸ್​​ನಲ್ಲಿ ಭಾರಿ ಬದಲಾವಣೆಗಳಾದವು. ಯಾರೂ ಊಹಿಸದ ರೀತಿ ಪ್ರದೀಪ್ ಅವರಿಗೆ ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್ ಟಿಕೆಟ್ ದೊರಕಿತು. ಚಿಂತಾಮಣಿ ಕ್ಷೇತ್ರದ ಡಾ ಎಂಸಿ ಸುಧಾಕರ್ ಅವರ ಬೆಂಬಲ ದೊರಕಿತು. ಚಿಕ್ಕಬಳ್ಳಾಪುರದಲ್ಲಿಯೂ ಸಹ ಸುಧಾಕರ್ ವಿರುದ್ಧ ಆಡಳಿತ ವಿರೋಧಿ ಅಲೆ ಜೋರಿತ್ತು. ಪ್ರದೀಪ್, ಇದನ್ನೇ ಬಂಡವಾಳ ಮಾಡಿಕೊಂಡರು, ತಮ್ಮ ವಾಕ್ಚಾತುರ್ಯ ಬಳಸಿ ಜನರಲ್ಲಿ ಭರವಸೆ ಮೂಡಿಸಿದರು. ಸುಧಾಕರ್ ಅವರನ್ನು ಸೋಲಿಸಿ ಯಾರೂ ಊಹಿಸದ ರೀತಿ ಶಾಸಕರಾದರು.

ಪ್ರದೀಪ್ ಈಶ್ವರ್ ಏನೂ ಅಲ್ಲದೇ ಇದ್ದಾಗ ಅವರನ್ನು ಇಂದಿರುವ ಸ್ಥಿತಿಗೆ ತಂದು ನಿಲ್ಲಿಸಿದ್ದು, ಅವರ ಅತಿಯಾದ ಆತ್ಮವಿಶ್ವಾಸ, ಸೋಲುವುದಿಲ್ಲ ಎಂಬ ಹುಂಬತನ, ಧೈರ್ಯ, ಭಿನ್ನವಾಗಿ ಏನಾದರೂ ಮಾಡುವ ಉತ್ಸಾಹ. ಶಾಸಕರಾದ ಮೇಲೂ ಅವರು ಅದನ್ನೇ ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಪ್ರತಿದಿನವೂ ಯಾರನ್ನಾದರೂ ಒಬ್ಬ ರಾಜಕೀಯ ವಿರೋಧಿಯನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ಮಾಡುತ್ತಿದ್ದಾರೆ. ಅವರ ಈ ಆತ್ಮವಿಶ್ವಾಸ ಮುಂದಿನ ಚುನಾವಣೆಯಲ್ಲೂ ಅವರಿಗೆ ಸಹಾಯ ಮಾಡುತ್ತದೆಯೇ ಕಾದು ನೋಡಬೇಕಿದೆ.