CJP : ಸಿಜೆಪಿಯಲ್ಲಿ ಒಡಕು – ದೀಪ್ಕೆ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರಿಂದ ಸಿಜೆಪಿ-ಡೆಮಾಕ್ರಟಿಕ್ ಘೋಷಣೆ

ದೆಹಲಿ ಮೂಲದ ಕಾಕ್ರೋಚ್ ಜನತಾ ಪಾರ್ಟಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷವು ತನ್ನ ಹುಟ್ಟಿಗೆ ಕಾರಣವಾದ ವಿದ್ಯಾರ್ಥಿ ಹೋರಾಟದ ಉದ್ದೇಶಗಳನ್ನೇ ಮರೆತಿದೆ ಎಂದು ಆರೋಪಿಸಿ, ಪಕ್ಷದ ಕಾರ್ಯಕರ್ತ ಮನೀಶ್ ಬ್ರಹ್ಮಭಟ್ ಅವರು ಹೊಸ ಬಣವನ್ನು ಕಟ್ಟಿದ್ದಾರೆ. ಅವರು ತಮ್ಮ ಬಣಕ್ಕೆ ಕಾಕ್ರೋಚ್ ಜನತಾ ಪಾರ್ಟಿ-ಡೆಮಾಕ್ರಟಿಕ್ ಎಂದು ಹೆಸರಿಟ್ಟಿದ್ದಾರೆ.

ಬ್ರಹ್ಮಭಟ್ ಅವರ ಪ್ರಕಾರ ಈಗಿನ ಸಿಜೆಪಿ ಕೆಲವೇ ವ್ಯಕ್ತಿಗಳ ಹಿಡಿತಕ್ಕೆ ಸಿಲುಕಿದೆ. ಅದು ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದೆ. ಹೋರಾಟವನ್ನು ಕಟ್ಟಿ ಬೆಳೆಸಿದ ಮೂಲ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬುದು ಅವರ ಪ್ರಮುಖ ಆರೋಪ.

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ದೊಡ್ಡ ವಿದ್ಯಾರ್ಥಿ ಪ್ರತಿಭಟನೆಯಿಂದಾಗಿ ಸಿಜೆಪಿ ಸಂಘಟನೆ ಬೆಳಕಿಗೆ ಬಂದಿತ್ತು. ಆದರೆ ಇತ್ತೀಚೆಗೆ ರಚಿಸಲಾದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಸಂಬಂಧಿಸಿದ ಎಂಟು ಜನರಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ. ಶಿವಸೇನೆ, ಸಮಾಜವಾದಿ ಪಕ್ಷ, ಆರ್ ಜೆ ಡಿ, ಬಿಜೆಪಿ, ಕಾಂಗ್ರೆಸ್ ಹಿನ್ನೆಲೆಯಿಂದ ಬಂದ ಸ್ವಯಂಸೇವಕರನ್ನು ಕಡೆಗಣಿಸಲಾಗಿದೆ. ಜೊತೆಗೆ ಮಹಿಳೆಯರು, ಮುಸ್ಲಿಂ ಸಮುದಾಯ, ಸಿಖ್ ಸಮುದಾಯ ಮತ್ತು ನಿಜವಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅವಕಾಶವನ್ನೇ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೋರಾಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಸುಮಾರು 450 ಸಂಯೋಜಕರನ್ನು ನಿರ್ಲಕ್ಷಿಸಿದ್ದನ್ನು ಖಂಡಿಸಿ ಬ್ರಹ್ಮಭಟ್ ಮತ್ತು ರಾಹುಲ್ ಪಾಂಡೆ ಅವರು ಆಗಸ್ಟ್ ತಿಂಗಳಲ್ಲಿ ಛತ್ರಪತಿ ಸಂಭಾಜಿನಗರದಲ್ಲಿರುವ ದೀಪ್ಕೆ ಅವರ ಮನೆ ಮುಂದೆ ಧರಣಿ ಕೂಡ ನಡೆಸಿದ್ದರು.

ಈಗ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೊಸ ಕಾರ್ಯಕಾರಿಣಿಯನ್ನು ರಚಿಸಿ, ಪ್ರತಿಭೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವುದೇ ತಮ್ಮ ಹೊಸ ಪಕ್ಷದ ಮುಖ್ಯ ಗುರಿ ಎಂದು ಬ್ರಹ್ಮಭಟ್ ಹೇಳಿದ್ದಾರೆ.