MEKEDATU : ಜಲ ಸಮಾವೇಶದಲ್ಲಿ ರಾಜ್ಯದ 4 ಬೇಡಿಕೆ: ಮೇಕೆದಾಟು ಸಮ್ಮತಿಗೆ ಚಲುವರಾಯಸ್ವಾಮಿ ಪಟ್ಟು

ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್ ಗೆ ತಕ್ಷಣ ಅನುಮೋದನೆ ನೀಡಬೇಕು ಎಂದು ರಾಷ್ಟ್ರೀಯ ಜಲ ಸಮಾವೇಶದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಜಲ ಇಲಾಖಾ ಸಮಾವೇಶ-2026ರಲ್ಲಿ ಕರ್ನಾಟಕ ನಿಯೋಗದ ನೇತೃತ್ವ ವಹಿಸಿದ್ದ ಜಲಸಂಪನ್ಮೂಲ ಸಚಿವರು ಈ ಆಗ್ರಹ ಮಾಡಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರಿನ ಭದ್ರತೆಗೆ ಹಾಗೂ ಬರಗಾಲದ ಸಂದರ್ಭದಲ್ಲಿ ನೀರಿನ ಸಮರ್ಪಕ ನಿರ್ವಹಣೆಗೆ ಮೇಕೆದಾಟು ಸಮತೋಲನ ಜಲಾಶಯ ಅನಿವಾರ್ಯವಾಗಿದ್ದು, ಕೇಂದ್ರ ಜಲ ಆಯೋಗ ಪರಿಷ್ಕೃತ ಡಿಪಿಆರ್ ಗೆ ವಿಳಂಬವಿಲ್ಲದೆ ಒಪ್ಪಿಗೆ ನೀಡಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ಕೇಂದ್ರದ ಗಮನ ಸೆಳೆದಿದ್ದಾರೆ.

ಇದೇ ವೇದಿಕೆಯಲ್ಲಿ ರಾಜ್ಯದ ಇನ್ನೂ ಮೂರು ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆಯೂ ಸಚಿವರು ಪ್ರಸ್ತಾಪಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಪಾಲಿಗೆ ಬಂದಿರುವ 130 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2ರ ಅಂತಿಮ ತೀರ್ಪನ್ನು ಕೇಂದ್ರ ಶೀಘ್ರ ಗೆಜೆಟ್ ಅಧಿಸೂಚನೆ ಮಾಡಬೇಕು ಎಂದು ಕೇಳಿದರು. ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿಗಾಗಿ ರೂಪಿಸಲಾದ ಮಹದಾಯಿ ಕಣಿವೆಯ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಬಾಕಿ ಇರುವ ಅರಣ್ಯ ಮತ್ತು ವನ್ಯಜೀವಿ ಮಂಡಳಿಯ ಅನುಮೋದನೆಗಳನ್ನು ತ್ವರಿತವಾಗಿ ನೀಡುವಂತೆ ಮನವಿ ಮಾಡಿದರು.

ಇನ್ನು ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ 5,300 ಕೋಟಿ ರೂಪಾಯಿ ನೆರವಿನ ಪರಿಷ್ಕೃತ ಅಂದಾಜಿಗೆ ಸಾರ್ವಜನಿಕ ಹೂಡಿಕೆ ಮಂಡಳಿಯ ಶಿಫಾರಸು ಪೂರ್ಣಗೊಳಿಸಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಯೋಜನೆಗಳ ವಿಳಂಬ ತಪ್ಪಿಸಲು ರಾಜ್ಯ ಜಾರಿಗೆ ತಂದಿರುವ ಯುಕೆಪಿ-3 ಮಾದರಿಯ ಒಪ್ಪಿಗೆ ಪರಿಹಾರ ದರ, ಲೋಕ ಅದಾಲತ್ ಮೂಲಕ ಭೂಸ್ವಾಧೀನ ವಿವಾದ ಇತ್ಯರ್ಥ, ಅಂದಾಜು ಪರಿಶೀಲನಾ ಸಮಿತಿ ರಚನೆ, ಕೆಪಿಪಿಪಿ ಮೂಲಕ ಪಾರದರ್ಶಕ ಇ-ಟೆಂಡರ್ ಮತ್ತು ಪೈಪ್ಡ್ ನೀರಾವರಿ ಪದ್ಧತಿಗಳನ್ನು ಸಮಾವೇಶದಲ್ಲಿ ಮಂಡಿಸಲಾಯಿತು. ನೀರಿಗೆ ಗಡಿಗಳಿಲ್ಲ, ಜಲ ಸಂರಕ್ಷಣೆ ಎಲ್ಲರ ಸಾಮೂಹಿಕ ರಾಷ್ಟ್ರೀಯ ಜವಾಬ್ದಾರಿ ಎಂದು ಸಚಿವರು ಹೇಳಿದರು. ಮೊದಲ ಅಧಿವೇಶನದಲ್ಲಿ ಎಲ್ಲ ರಾಜ್ಯಗಳ ಜಲಸಂಪನ್ಮೂಲ ಸಚಿವರು, ಕಾರ್ಯದರ್ಶಿಗಳ ಜೊತೆ ಜಲಸಂರಕ್ಷಣೆ, ಮಳೆನೀರು ಕೊಯ್ಲು ಮತ್ತು ಕುಡಿಯುವ ನೀರಿನ ಸುಸ್ಥಿರತೆ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರೊಂದಿಗೆ ಚರ್ಚೆ ನಡೆಸಲಾಯಿತು. ಸಚಿವ ಈಶ್ವರ ಖಂಡ್ರೆ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ಮೇಕೆದಾಟು ವಿಚಾರ ಕೇವಲ ತಾಂತ್ರಿಕ ಅನುಮೋದನೆಯ ಪ್ರಶ್ನೆಯಾಗಿ ಉಳಿದಿಲ್ಲ, ಅದು ರಾಜಕೀಯ ಮತ್ತು ಅಂತರರಾಜ್ಯ ಸಂಬಂಧಗಳ ಸೂಕ್ಷ್ಮ ವಿಷಯವಾಗಿದೆ. ಬೆಂಗಳೂರಿನ ಜನಸಂಖ್ಯೆ ಮತ್ತು ನೀರಿನ ಬೇಡಿಕೆ ಪ್ರತಿವರ್ಷ ಹೆಚ್ಚುತ್ತಿದ್ದು, ಕಳೆದ ಬೇಸಿಗೆಯಲ್ಲಿ ಎದುರಾದ ಜಲ ಬಿಕ್ಕಟ್ಟು ಈ ಯೋಜನೆಯ ಅಗತ್ಯವನ್ನು ಮತ್ತಷ್ಟು ಒತ್ತಿ ಹೇಳಿದೆ. ಆದರೆ ತಮಿಳುನಾಡಿನ ವಿರೋಧ ಮತ್ತು ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ ತಟಸ್ಥ ನಿಲುವು ತಳೆಯುತ್ತಿದೆ. ಡಿಪಿಆರ್ ಅನುಮೋದನೆ ತಾಂತ್ರಿಕ ಪ್ರಕ್ರಿಯೆಯಾದರೂ, ಅದಕ್ಕೆ ರಾಜಕೀಯ ಇಚ್ಛಾಶಕ್ತಿಯ ಬೆಂಬಲ ಬೇಕು. ಕೃಷ್ಣಾ ಮೇಲ್ದಂಡೆ ವಿಷಯದಲ್ಲೂ ಇದೇ ರೀತಿಯ ವಿಳಂಬವಿದೆ. ನ್ಯಾಯಾಧಿಕರಣದ ತೀರ್ಪು ಬಂದು ವರ್ಷಗಳೇ ಕಳೆದರೂ ಗೆಜೆಟ್ ಅಧಿಸೂಚನೆ ಆಗದ ಕಾರಣ 130 ಟಿಎಂಸಿ ನೀರನ್ನು ಬಳಸಿಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಅನ್ಯಾಯವಾಗುತ್ತಿದೆ. ಕಳಸಾ-ಬಂಡೂರಿ ಯೋಜನೆ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿದೆ.

ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದ ಕಾರಣಕ್ಕೆ ಅರಣ್ಯ ಮತ್ತು ವನ್ಯಜೀವಿ ಅನುಮೋದನೆ ವಿಳಂಬವಾಗುತ್ತಿದೆ. ಭದ್ರಾ ಮೇಲ್ದಂಡೆಗೆ ಕೇಂದ್ರದ ನೆರವಿನ ಘೋಷಣೆ ರಾಜಕೀಯ ಪ್ರಚಾರಕ್ಕೆ ಸೀಮಿತವಾಗಿದ್ದು, ಹಣ ಬಿಡುಗಡೆ ಮತ್ತು ಪಿಐಬಿ ಶಿಫಾರಸು ಇನ್ನೂ ಪೂರ್ಣಗೊಂಡಿಲ್ಲ. ಈ ನಾಲ್ಕು ಯೋಜನೆಗಳು ಕೇಂದ್ರ-ರಾಜ್ಯ ಜಲ ಸಹಕಾರದ ಪರೀಕ್ಷಾ ಕೇಂದ್ರಗಳಾಗಿವೆ. ಕರ್ನಾಟಕ ತನ್ನ ಕಡೆಯಿಂದ ಸುಧಾರಣೆಗಳನ್ನು ತೋರಿಸುತ್ತಿದೆ, ಆದರೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ಬಾರದಿದ್ದರೆ ಯೋಜನೆಗಳು ಕಾಗದದ ಮೇಲೆಯೇ ಉಳಿಯುವ ಅಪಾಯವಿದೆ.