HD KUMARASWAMY: ಜನರೇ ಗೂಟ ಕಿತ್ತು ಕಳುಹಿಸುತ್ತಾರೆ – ಡಿಕೆ ಹೇಳಿಕೆಗೆ ಹೆಚ್.ಡಿ.ಕೆ ಟಾಂಗ್

ಮುಂದಿನ ಏಳುವರೆ ವರ್ಷ ನಾನೇ ಇಲ್ಲೇ ಗಟ್ಟಿಯಾಗಿ ಬೇರೂರಿರುತ್ತೇನೆ ಎಂದು ಹೇಳಿಕೊಳ್ಳುವವರಿಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. 2028ರ ವಿಧಾನಸಭಾ ಚುನಾವಣೆ ಬಂದಾಗ ಯಾರ ಗೂಟ ಎಷ್ಟು ಭದ್ರವಾಗಿದೆ ಎಂಬುದು ತಿಳಿಯುತ್ತದೆ, ಜನರೇ ಅದನ್ನು ಕಿತ್ತು ಬಿಸಾಕುತ್ತಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು ತಾವು ಖಂಡಿತವಾಗಿಯೂ ರಾಜ್ಯಕ್ಕೆ ಹಿಂತಿರುಗುವುದು 2028ರ ಚುನಾವಣೆಯ ಸಂದರ್ಭದಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ. ಎಚ್.ಡಿ. ದೇವೇಗೌಡರ ಕುಟುಂಬದ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಆಡಿದ ಎಲ್ಲ ಮಾತುಗಳನ್ನು ತಾಳ್ಮೆಯಿಂದ ಸಹಿಸಿಕೊಂಡಿದ್ದೇವೆ, ನಾವು ಯಾರಿಗೂ ಬೆದರಿಕೆ ಹಾಕಿಲ್ಲ, ರಾಜ್ಯದ ಆಸ್ತಿ ಉಳಿಸುವುದಕ್ಕಾಗಿ ರಾಜಿ ಇಲ್ಲದೆ ನಡೆಸುತ್ತಿರುವ ಹೋರಾಟವನ್ನು ಬೆದರಿಕೆ ಎಂದು ಚಿತ್ರಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಇನ್ನೂ ಕೆಪಿಎಸ್‌ಸಿ ವಿಚಾರದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ಅಕ್ರಮಗಳ ಬಗ್ಗೆ ದಾಖಲೆಗಳ ರಾಶಿಯನ್ನೇ ತಾವು ಕಾಯ್ದಿರಿಸಿಕೊಂಡಿದ್ದೇನೆ, ಹಿಂದೆ ಕೆಪಿಎಸ್‌ಸಿ ಅಧ್ಯಕ್ಷರೊಬ್ಬರನ್ನು 53 ದಿನ ಜೈಲಿನಲ್ಲಿಟ್ಟರೂ ಅವರ ವಿರುದ್ಧ ಸೂಕ್ತ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ನೀಡಲು ಸರ್ಕಾರ ವಿಫಲವಾಗಿದೆ ಎಂಬ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಏಳುವರೆ ವರ್ಷದ ಹೇಳಿಕೆ ಕೇವಲ ಆತ್ಮವಿಶ್ವಾಸದ ಮಾತಲ್ಲ, ಕಾಂಗ್ರೆಸ್ ಒಳಗಿನ ಅಧಿಕಾರದ ಪೈಪೋಟಿಯ ಸಂಕೇತವಾಗಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬಣಗಳ ನಡುವಿನ ಶೀತಲ ಸಮರ ತೆರೆಮರೆಯಲ್ಲಿ ನಡೆಯುತ್ತಿರುವಾಗ, ತಾನೇ ದೀರ್ಘಕಾಲ ಅನಿವಾರ್ಯ ನಾಯಕ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನ ಇದಾಗಿದೆ. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಅವರು ಜನಾದೇಶವೇ ಅಂತಿಮ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾರನೇ ನಿರ್ಣಾಯಕ ಎಂಬ ಅಂಶವನ್ನು ಮುಂದಿಟ್ಟಿದ್ದಾರೆ. ಗೂಟದಂತಹ ಪದಗಳು ರಾಜಕೀಯದಲ್ಲಿ ಶಾಶ್ವತತೆ ಇಲ್ಲ ಎಂಬುದನ್ನು ನೆನಪಿಸುವ ರೂಪಕಗಳಾಗುತ್ತವೆ.

ಇನ್ನು ಕುಮಾರಸ್ವಾಮಿ 2028ಕ್ಕೆ ರಾಜ್ಯಕ್ಕೆ ವಾಪಸ್ ಬರುತ್ತೇನೆ ಎನ್ನುವುದು ಜೆಡಿಎಸ್ ನ ಭವಿಷ್ಯದ ಕಾರ್ಯತಂತ್ರಕ್ಕೆ ಸಂಬಂಧಿಸಿದೆ. ಕೇಂದ್ರದಲ್ಲಿ ಬಿಜೆಪಿ ಜೊತೆ ಮೈತ್ರಿಯಲ್ಲಿ ಅಧಿಕಾರದಲ್ಲಿದ್ದರೂ ರಾಜ್ಯದಲ್ಲಿ ಪಕ್ಷದ ನೆಲೆ ಸಡಿಲವಾಗುತ್ತಿರುವುದನ್ನು ಅವರು ಅರಿತಿದ್ದಾರೆ. ಹಳೇ ಮೈಸೂರು ಭಾಗದ ಒಕ್ಕಲಿಗ ಮತಬ್ಯಾಂಕ್, ರೈತಪರ ಹೋರಾಟ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧದ ಭೂ ಹಗರಣಗಳ ಆರೋಪಗಳನ್ನು ಮುಂದಿಟ್ಟುಕೊಂಡು ಮರು ಸಂಘಟನೆಗೆ ಇದು ಸಿದ್ಧತೆಯಾಗಿದೆ. ರಾಜ್ಯದ ಆಸ್ತಿ ಉಳಿಸುವ ಹೋರಾಟ ಎಂಬ ಅವರ ಮಾತು ಮುಡಾ ಸೇರಿದಂತೆ ಇತ್ತೀಚಿನ ಆರೋಪಗಳನ್ನು ಗುರಿಯಾಗಿಸಿಕೊಂಡಿದೆ.

ಕೆಪಿಎಸ್‌ಸಿ ವಿಷಯವನ್ನು ಪ್ರಸ್ತಾಪಿಸಿ ಪ್ರಿಯಾಂಕ್ ಖರ್ಗೆ ವಿರುದ್ಧ ದಾಖಲೆಗಳ ಕುಂಡಲಿ ಇದೆ ಎನ್ನುವುದು ನೇಮಕಾತಿ ಅಕ್ರಮವನ್ನು ಮುಂದಿನ ಚುನಾವಣೆಗೆ ಅಸ್ತ್ರವನ್ನಾಗಿ ಮಾಡುವ ಸೂಚನೆಯಾಗಿದೆ. ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಸರ್ಕಾರದ ತನಿಖಾ ವೈಫಲ್ಯವನ್ನು ಎತ್ತಿ ತೋರಿಸುವುದು, ಸರ್ಕಾರದ ವಿಶ್ವಾಸಾರ್ಹತೆಗೆ ಪ್ರಶ್ನೆ ಹಾಕುವ ತಂತ್ರವಾಗಿದೆ. ಒಟ್ಟಾರೆ ಈ ಹೇಳಿಕೆಗಳ ಸಮರ 2028ರ ಚುನಾವಣೆಯ ದಿಕ್ಸೂಚಿಯಾಗಿದ್ದು, ಅಧಿಕಾರ ಶಾಶ್ವತವಲ್ಲ, ಜನರ ತೀರ್ಪೇ ಅಂತಿಮ ಎಂಬ ಸಂದೇಶವನ್ನು ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಮುನ್ನೆಲೆಗೆ ತಂದಿದೆ.