CHIKKANNA RECEPTION: ಮೈಸೂರಿನಲ್ಲಿ ಅದ್ಧೂರಿ ರಿಸೆಪ್ಷನ್; ಕಣ್ಣುಕೋರೈಸಿದ ಚಿಕ್ಕಣ್ಣ-ಪಾವನಾ ಜೋಡಿ

ಮೈಸೂರಿನಲ್ಲಿ ಅದ್ಧೂರಿ ರಿಸೆಪ್ಷನ್

Photo Credits: @chittaramedia (Instagram)

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ನಟ ಚಿಕ್ಕಣ್ಣ ಮತ್ತು ಪಾವನಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಂಪೂರ್ಣವಾಗಿ ಸಜ್ಜಾಗಿದೆ.

ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ನಡೆದ ಅದ್ಧೂರಿ ಆರತಕ್ಷತೆ ಸಮಾರಂಭದಲ್ಲಿ ನವಜೋಡಿ ಕಣ್ಣುಕೋರೈಸುವಂತೆ ಮಿಂಚಿದ್ದಾರೆ.

ಸಿನಿಮಾರಂಗದ ಗಣ್ಯರು, ಆಪ್ತರು ಹಾಗೂ ಕುಟುಂಬಸ್ಥರು ಈ ವೈಭವದ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವವಧು-ವರರಿಗೆ ಹೃತ್ಪೂರ್ವಕ ಶುಭಕೋರಿದ್ದಾರೆ.

ಇಂದು ಶ್ರೀರಂಗಪಟ್ಟಣದ ಹುಡುಗಿ ಪಾವನಾ ಜೊತೆ ಚಿಕ್ಕಣ್ಣ ಮದುವೆ

ಭಾನುವಾರ (ಆಗಸ್ಟ್ 30) ಮಂಗಲಕರ ಶುಭ ಮುಹೂರ್ತದಲ್ಲಿ ನಟ ಚಿಕ್ಕಣ್ಣ ಅವರು ಶ್ರೀರಂಗಪಟ್ಟಣದ ಮಹದೇವಪುರದ ಹುಡುಗಿ ಪಾವನಾ ಅವರ ಕೈ ಹಿಡಿಯಲಿದ್ದಾರೆ.

ಮೈಸೂರಿನಲ್ಲಿ ನಡೆಯುತ್ತಿರುವ ಮದುವೆ ಶಾಸ್ತ್ರಗಳಲ್ಲಿ ನವಜೋಡಿ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದು, ಫೋಟೋಗಳು ವೈರಲ್ ಆಗುತ್ತಿವೆ. ಇಡೀ ಕುಟುಂಬದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಧಾರಾ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.

ಚಿಕ್ಕಣ್ಣ ಕಷ್ಟದಿಂದ ಬೆಳೆದ ನಟ: ಹಿರಿಯ ನಟ ರಂಗಾಯಣ ರಘು

ಚಿಕ್ಕಣ್ಣ-ಪಾವನಾ ಆರತಕ್ಷತೆ ಕಾರ್ಯಕ್ರಮಕ್ಕೆ ಹಿರಿಯ ನಟ ರಂಗಾಯಣ ರಘು ಆಗಮಿಸಿ ಶುಭಹಾರೈಸಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಚಿಕ್ಕಣ್ಣ ಕಷ್ಟದಿಂದ ಮೇಲೆ ಬಂದ ಅದ್ಭುತ ನಟ. ಇಡೀ ರಾಜ್ಯಕ್ಕೆ ಗೊತ್ತಾಗುವಂತೆ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾನೆ” ಎಂದಿದ್ದಾರೆ.

ಚಿಕ್ಕಣ್ಣ ಹಾಗೂ ಅವರ ಧರ್ಮಪತ್ನಿ ಇಬ್ಬರಿಗೂ ಒಳಿತಾಗಲಿ, ಸಂಸಾರ ಜೀವನ ಸುಖಮಯವಾಗಿರಲಿ ಎಂದು ಆಶೀರ್ವದಿಸಿದ್ದಾರೆ. ಹಿರಿಯ ಕಲಾವಿದರ ಆಗಮನದಿಂದ ಮದುವೆ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಚಿಕ್ಕಣ್ಣ ಮುಂದಿನ ಸಿನಿಮಾಗಳಿಗೂ ಶುಭವಾಗಲಿ: ನಿರ್ಮಾಪಕ ಸಂದೇಶ್

ಇದೇ ವೇಳೆ ನವಜೋಡಿಗೆ ಶುಭಕೋರಿದ ಪ್ರಸಿದ್ಧ ನಿರ್ಮಾಪಕ ಸಂದೇಶ್, “ನಮ್ಮ ‘ಒಡೆಯ’ ಚಿತ್ರದಲ್ಲಿ ಚಿಕ್ಕಣ್ಣ ನಟಿಸಿದ್ದರು, ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಮೈಸೂರಿನವರೇ ಆದ ಚಿಕ್ಕಣ್ಣ ಮದುವೆಯಾಗುತ್ತಿರುವುದು ವೈಯಕ್ತಿಕವಾಗಿ ತುಂಬಾ ಖುಷಿ ತಂದಿದೆ” ಎಂದಿದ್ದಾರೆ.

ಚಿಕ್ಕಣ್ಣ ಅವರ ಮುಂದಿನ ಎಲ್ಲಾ ಸಿನಿಮಾಗಳಿಗೂ ಮತ್ತು ಹೊಸ ಜೀವನಕ್ಕೂ ಶುಭವಾಗಲಿ ಎಂದು ಹಾರೈಸಿದ್ದಾರೆ. ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಹಾಗೂ ತಾಂತ್ರಿಕ ವರ್ಗದವರು ಆಗಮಿಸಿ ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ.