ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮನೆ ಮುಂಭಾಗ ವಾಹನ ನಿಲ್ಲಿಸುವುದಕ್ಕೂ ತಿಂಗಳಿಗೆ 15 ಸಾವಿರ ರೂಪಾಯಿ ಪಾಸ್ ಶುಲ್ಕ ವಿಧಿಸುವ ಹೊಸ ನಿಯಮ ಜಾರಿಗೆ ತಂದಿರುವುದು ನಗರದಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನೆ ಮುಂದಿನ ವಾಹನಗಳಿಗೆ ಶುಲ್ಕ ವಿಧಿಸಬಾರದು ಎಂದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ರಾಮಲಿಂಗಾರೆಡ್ಡಿ ಅವರು ವಾರ್ಷಿಕ 15 ಸಾವಿರದಿಂದ 25 ಸಾವಿರದವರೆಗೆ ಶುಲ್ಕ ವಿಧಿಸುವ ಪ್ರಸ್ತಾವನೆ ಬಗ್ಗೆ ಜನರಲ್ಲಿ ಆತಂಕವಿದೆ ಎಂದು ಉಲ್ಲೇಖಿಸಿದ್ದಾರೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳದಿಂದ ಸಂಚಾರ ದಟ್ಟಣೆ ನಿಯಂತ್ರಣ ಅಗತ್ಯ ಎಂಬುದನ್ನು ಒಪ್ಪಿಕೊಂಡರೂ, ಈಗಾಗಲೇ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಜಿಎಸ್ ಟಿ ಮತ್ತು ಟೋಲ್ ದರ ಏರಿಕೆಯಿಂದ ಮಧ್ಯಮ ವರ್ಗದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಪಾರ್ಕಿಂಗ್ ಶುಲ್ಕ ಮತ್ತೊಂದು ಹೊರೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವಾಗುತ್ತಿರುವಾಗ ಇಂತಹ ಹೆಚ್ಚುವರಿ ಶುಲ್ಕ ಸರಿಯಲ್ಲ ಎಂದು ಹೇಳಿರುವ ಅವರು, ಬೆಂಗಳೂರಿನ ಶಾಸಕರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಿರ್ಧಾರದ ಹಿಂದಿನ ಪ್ರಮುಖ ಸಮಸ್ಯೆ ಎಂದರೆ ಬೆಂಗಳೂರಿನ ವಸತಿ ರಚನೆ. ಹೊಸ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯ ಮಾಡಲಾಗುತ್ತಿದೆಯಾದರೂ ಹಳೆಯ ಬಡಾವಣೆಗಳು, ಸಣ್ಣ ನಿವೇಶನದ ಮನೆಗಳು ಮತ್ತು ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವ ಬಹುತೇಕ ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಒಳಗೆ ವಾಹನ ನಿಲ್ಲಿಸಲು ಜಾಗವೇ ಇಲ್ಲ. ರಸ್ತೆ ಬದಿ ಪಾರ್ಕಿಂಗ್ ಅವರಿಗೆ ಅನಿವಾರ್ಯವಾಗಿದೆ. ಅಂತಹವರಿಗೆ ತಿಂಗಳಿಗೆ 15 ಸಾವಿರ ಶುಲ್ಕ ವಿಧಿಸುವುದು ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿ ಕಾಣುತ್ತದೆ.
ಸರ್ಕಾರದ ಉದ್ದೇಶ ಸಂಚಾರ ಸುವ್ಯವಸ್ಥೆ ಕಾಪಾಡುವುದಾದರೆ, ಮೊದಲು ಸಾರ್ವಜನಿಕ ಸಾರಿಗೆ ಬಲಪಡಿಸುವುದು, ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಿಸುವುದು ಮತ್ತು ವಸತಿ ಪ್ರದೇಶಗಳಿಗೆ ಪ್ರತ್ಯೇಕವಾದ ಕಡಿಮೆ ಶುಲ್ಕದ ಪಾಸ್ ವ್ಯವಸ್ಥೆ ಮಾಡುವುದು ಸೂಕ್ತ. ಏಕಾಏಕಿ ಹೆಚ್ಚಿನ ಶುಲ್ಕ ಹೇರಿದರೆ ಸರ್ಕಾರದ ಜನಪರ ಇಮೇಜ್ ಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಸಚಿವರೇ ಪತ್ರ ಬರೆದಿರುವುದು ಈ ವಿಚಾರದಲ್ಲಿ ಆಡಳಿತ ಪಕ್ಷದೊಳಗೂ ಒಮ್ಮತವಿಲ್ಲ ಎಂಬುದನ್ನು ತೋರಿಸುತ್ತದೆ.




