Photo Credits: @tnitkannada (Instagram)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆ ನಡೆಯಲಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಕುರಿತು ಇಂದು ಕೋರ್ಟ್ ಆದೇಶ ಹೊರಡಿಸುವ ಸಾಧ್ಯತೆಯಿದೆ.
ಈ ಆದೇಶಕ್ಕೂ ಮುನ್ನ ಆರೋಪಿ ಪ್ರದೋಷ್ ಕುರಿತು ಕೋರ್ಟ್ ಕೇಳಿದ್ದ ಪ್ರಮುಖ ವರದಿಯನ್ನು ಜೈಲು ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಅಧಿಕಾರಿಗಳು ನೀಡುವ ವರದಿಯ ಆಧಾರದ ಮೇಲೆಯೇ ಮುಂದಿನ ನಿರ್ಧಾರ ಹೊರಬೀಳಲಿದೆ.
ಜೈಲಿನಲ್ಲಿ ಪ್ರದೋಷ್ ಅವರ ನಡವಳಿಕೆ ಹೇಗಿದೆ ಎಂಬುದರ ಕುರಿತು ವರದಿ ನೀಡುವಂತೆ ಕೋರ್ಟ್ ಸೂಚಿಸಿತ್ತು. ಈ ವರದಿ ಸಲ್ಲಿಕೆಯಾದ ಬಳಿಕವೇ ಮಾಫಿ ಸಾಕ್ಷಿ ಅರ್ಜಿಯ ಭವಿಷ್ಯ ನಿರ್ಧಾರವಾಗಲಿದೆ.
ಪ್ರದೋಷ್ ಜೈಲಿನ ನಡವಳಿಕೆ ವರದಿ ಸಲ್ಲಿಕೆ…
ನ್ಯಾಯಮೂರ್ತಿ ಸುಜಾತ ಮಡಿವಾಳಪ್ಪ ಸಂಬ್ರಾಣಿ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ಆದೇಶ ನೀಡಲಿದೆ. ಈ ಹಿಂದೆ ಪ್ರದೋಷ್ ಅವರ ಅಪರಾಧ ಹಿನ್ನೆಲೆ ಮತ್ತು ಪ್ರಕರಣದಲ್ಲಿ ಅವರ ಪಾತ್ರದ ಕುರಿತು ವರದಿ ಕೇಳಲಾಗಿತ್ತು.
ಅಷ್ಟೇ ಅಲ್ಲದೆ ಅವರ ವಿರುದ್ಧ ದಾಖಲಾಗಿರುವ ವಿವಿಧ ಸೆಕ್ಷನ್ಗಳ ವಿವರಗಳನ್ನು ಅಧಿಕಾರಿಗಳು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈಗ ಜೈಲಿನ ಒಳಗಿನ ನಡವಳಿಕೆಯ ವರದಿಯನ್ನು ಪರಿಶೀಲಿಸಿ ಮುಂದಿನ ಕಾನೂನು ಪ್ರಕ್ರಿಯೆಗೆ ಕೋರ್ಟ್ ಚಾಲನೆ ನೀಡಲಿದೆ.
ಮಾಫಿ ಸಾಕ್ಷಿ ಆದೇಶದ ಬಳಿಕ ಮುಂದಿನ ಹೆಜ್ಜೆ…
ಒಂದೊಮ್ಮೆ ಕೋರ್ಟ್ ಮಾಫಿ ಸಾಕ್ಷಿ ಅರ್ಜಿಯನ್ನು ಪುರಸ್ಕರಿಸಿದರೆ ಪ್ರದೋಷ್ ಅವರ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ತಕ್ಷಣ ಆರಂಭವಾಗಲಿದೆ. ಇದು ಪ್ರಕರಣದ ತನಿಖೆ ಮತ್ತು ವಿಚಾರಣೆಗೆ ಪ್ರಮುಖ ತಿರುವು ನೀಡುವ ನಿರೀಕ್ಷೆಯಿದೆ.
ಈ ಆದೇಶ ಹೊರಬಿದ್ದ ನಂತರ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಇತರ ಆರೋಪಿಗಳ ಕಾನೂನು ಹೋರಾಟದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಇಂದಿನ ಕೋರ್ಟ್ ಬೆಳವಣಿಗೆಯನ್ನು ಎಲ್ಲರೂ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ.
ಮತ್ತೊಬ್ಬ ಆರೋಪಿ ವಿನಯ್ ಅರ್ಜಿ ವಿಚಾರಣೆ…
ಇದೇ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ವಿನಯ್ ಅವರ ಅರ್ಜಿಯ ವಿಚಾರಣೆಯೂ ಇಂದು ಕೋರ್ಟ್ನಲ್ಲಿ ನಡೆಯುವ ಸಾದ್ಯತೆಯಿದೆ.
ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾ ಹಂತದಲ್ಲಿ ಇಂದಿನ ನ್ಯಾಯಾಲಯದ ಆದೇಶಗಳು ಅತ್ಯಂತ ನಿರ್ಣಾಯಕವೆನಿಸಿವೆ.




