ಅಣ್ಣಾವ್ರಿಗೆ ತಾಯಿಯಾಗಿ ನಟಿಸಿದ್ದ ‘ಸಾಹುಕಾರ್‌’ ಜಾನಕಿ ಆರೋಗ್ಯದಲ್ಲಿ ಏರುಪೇರು; ಐಸಿಯುನಲ್ಲಿ ಚಿಕಿತ್ಸೆ

Veteran actress sowcar Janaki in ICU she admitted to Chennai Hospital

ಬಹುಭಾಷಾ ನಟಿ ಸಾಹುಕಾರ್ ಜಾನಕಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಸಂಬಂಧ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯದಲ್ಲಿ ದಿಢೀರನೇ ಏರುಪೇರಾಗಿದ್ದರಿಂದ ಅವರನ್ನು ತೀವ್ರ ನಿಗಾ ಘಟಕ (ICU)ಗೆ ಶಿಫ್ಟ್ ಮಾಡಿ ಚಿಕಿತ್ಸೆಯನ್ನಯ ನೀಡಲಾಗುತ್ತಿದೆ. 95 ವರ್ಷದ ಹಿರಿಯ ನಟಿ ಸಾಹುಕಾರ್ ಜಾನಕಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಇತ್ತೀಚೆಗೆ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಚೆನ್ನೈನ ಆಳ್ವಾರ್‌ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಾಹುಕಾರ್ ಜಾನಕಿ ಸುಮಾರು 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಯಲ್ಲಿಯೂ ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಐಸಿಯುನಲ್ಲಿ ವೈದ್ಯರ ತಂಡ ಸಾಹುಕಾರ್ ಜಾನಕಿಯವರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಭಾರತೀಯ ಚಿತ್ರರಂಗ ಹಾಗೂ ಅವರ ಅಭಿಮಾನಿಗಳು ಸಾಹುಕಾರ್ ಜಾನಕಿ ಬಹುಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ತಮಿಳು ಚಿತ್ರರಂಗದ ನಡಿಗರ್ ಸಂಗಮ್ ಅಧ್ಯಕ್ಷ ನಾಸರ್, ನಟರಾದ ಸೌಂದರರಾಜ ಹಾಗೂ ಹೇಮಚಂದ್ರನ್ ಆಸ್ಪತ್ರೆಗೆ ತೆರಳಿ ಹಿರಿಯ ನಟಿಯ ಆರೋಗ್ಯವನ್ನು ವಿಚಾರಿಸಿದ್ದಾರೆ.

‘ಸಾಹುಕಾರ್’ ಜಾನಕಿ 1950ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಎಲ್.ವಿ.ಪ್ರಸಾದ್ ನಿರ್ದೇಶಿಸಿದ್ದ ‘ಸಾಹುಕಾರ್’ ಇವರು ನಟಿಸಿದ ಮೊದಲ ಸಿನಿಮಾ. ಈ ತೆಲುಗು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಬಳಿಕ ‘ವಲಯಾಪತಿ’ ಎಂಬ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಹಾಗೇ 1954ರಲ್ಲಿ ‘ದೇವರಕನ್ನಿಕಾ’ ಎಂಬ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸ್ಯಾಂಡಲ್‌ವುಡ್‌ನ ನಿರ್ದೇಶಕನ ಸಿನಿಮಾದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶ ಮಾಡುವ ಅವಕಾಶ ಸಿಕ್ಕಿತ್ತು. ಲೆಜೆಂಡರಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಲಯಾಳಂ ಸಿನಿಮಾ ‘ಸ್ಕೂಲ್ ಮಾಸ್ಟರ್’ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ದಕ್ಷಿಣ ಭಾರತದ ದಿಗ್ಗಜರೊಂದಿಗೆ ನಟಿಸಿದ ಹೆಗ್ಗಳಿಕೆ ಇವರದ್ದು.

ದಕ್ಷಿಣ ಭಾರತದ ದಿಗ್ಗಜರಾದ ಡಾ.ರಾಜ್‌ಕುಮಾರ್, ಎನ್‌ಟಿಆರ್, ಎಎನ್‌ಆರ್, ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಅಂತಹ ಮೇರು ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಅಭಿನಯವನ್ನು ಮೆಚ್ಚಿ ಅಭಿಮಾನಿಗಳು ‘ಸಾಹುಕಾರ್’ ಜಾನಕಿ ಅಂತಲೇ ಇಂದಿಗೂ ಗುರುತಿಸುತ್ತಾರೆ. ಹಾಗೇ ಇವರ ಕಲಾ ಸೇವೆಗೆ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

2022ರಲ್ಲಿ ಕೇಂದ್ರ ಸರ್ಕಾರ ಇವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ಯನ್ನು ನೀಡಿ ಗೌರವಿಸಲಾಗಿದೆ. ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಸಿನಿಮಾ ಅಷ್ಟೇ ಅಲ್ಲದೇ ಕಿರುತೆರೆಯಲ್ಲಿಯೂ ಜಾನಕಿ ನಟಿಸಿದ್ದಾರೆ. 1991ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ಊರಾರಿಂದ ರಹಸ್ಯಮ್’ ಇವರ ಮೊದಲ ಧಾರಾವಾಹಿ. ಹಾಗೇ ಸುಹಾಸಿನಿ ನಿರ್ದೇಶಿಸಿದ್ದ ‘ಪೆಣ್’ ಎಂಬ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಇಳಿ ವಯಸ್ಸಿನಲ್ಲಿಯೂ ನಟಿಸುವುದನ್ನು ನಿಲ್ಲಿಸಿರಲಿಲ್ಲ. 2023ರ ತೆಲುಗು ರೊಮ್ಯಾಂಟಿಕ್ ಡ್ರಾಮಾ ‘ಅನ್ನಿ ಮಂಚಿ ಶಕುನಮುಲೇ’ ಚಿತ್ರದಲ್ಲಿಯೂ ನಟಿಸಿದ್ದರು.