Toxic Advance Booking: ಇಂದಿನಿಂದ ‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್ ಓಪನ್; ಟಿಕೆಟ್ ಬೆಲೆ ಎಷ್ಟು ಗೊತ್ತೇ?

Yash Toxic movie Advance Booking open here is worldwide movie release plan details

ರಾಕಿಂಗ್ ಸ್ಟಾರ್‌ ಯಶ್ ಸಿನಿಮಾ ‘ಟಾಕ್ಸಿಕ್’ ರಿಲೀಸ್‌ಗೆ ಇನ್ನು ಐದು ದಿನಗಳು ಬಾಕಿ ಉಳಿದಿವೆ. ‘ಕೆಜಿಎಫ್ 2’ ಅಂತಹ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾ ಕೊಟ್ಟ ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಅದರಲ್ಲೂ ಎರಡು ಬಾರಿ ರಿಲೀಸ್ ಡೇಟ್ ಮುಂದೂಡಿದ ಬಳಿಕ ಆಗಸ್ಟ್ 26ಕ್ಕೆ ಕೊನೆಗೂ ಬಿಡುಗಡೆಯಾಗುತ್ತಿದೆ. ಈಗಾಗಲೇ ಯಶ್ ಹಾಗೂ ಅವರ ತಂಡ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

‘ಟಾಕ್ಸಿಕ್’ ರಿಲೀಸ್ ಬಗ್ಗೆ ಸಿನಿಮಾ ಮಂದಿಯಲ್ಲಿ ಒಂದು ಕೂತೂಹಲವಿದೆ. ‘ಕೆಜಿಎಫ್’ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದ ಯಶ್ ಈ ಬಾರಿ ಗ್ಲೋಬಲ್ ಸ್ಟಾರ್ ಆಗುವ ನಿರೀಕ್ಷೆಯಿದೆ. ಅದಕ್ಕೆ ಕಾರಣ ‘ಟಾಕ್ಸಿಕ್’ ಅನ್ನು ಇಂಗ್ಲಿಷ್‌ನಲ್ಲಿಯೂ ಶೂಟ್ ಮಾಡಿರೋದು ಕಾರಣ. ಹೀಗಾಗಿ ಸಿನಿಮಾ ಮಂದಿ ಯಶ್ ನಡೆಯನ್ನು ಗಮನಿಸುತ್ತಿದ್ದಾರೆ. ಸಿನಿಮಾ ಟ್ರೈಲರ್, ಟೀಸರ್ ಕೂಡ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತೆಯೇ ಇದೆ.

ಇಷ್ಟೆಲ್ಲ ಕುತೂಹಲಗಳ ಮಧ್ಯೆ ‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್ ಇಂದಿನಿಂದ (ಆಗಸ್ಟ್ 21) ಓಪನ್ ಆಗಿದೆ. ‘ಬುಕ್ ಮೈ ಶೋ’ ಸೇರಿದಂತೆ ಹಲವು ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ. ಸುಮಾರು ನಾಲ್ಕು ವರ್ಷಗಳಿಂದ ಕಾದು ಕೂತಿದ್ದ ಅಭಿಮಾನಿಗಳು ಟಿಕೆಟ್‌ಗಳನ್ನು ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದಾರೆ. ಹಾಗಿದ್ದರೆ, ಎಷ್ಟು ಸ್ಟ್ರೀನ್‌ಗಳಲ್ಲಿ ರಿಲೀಸ್ ಆಗುತ್ತೆ? ಟಿಕೆಟ್ ದರ ಎಷ್ಟು? ಪ್ರತಿಕ್ರಿಯೆ ಹೇಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

‘ಟಾಕ್ಸಿಕ್’ ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್?

ರಾಕಿಂಗ್ ಸ್ಟಾರ್ ‘ಟಾಕ್ಸಿಕ್’ ಆರು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಎನ್‌ಡಿಟಿವಿ ವರದಿ ಮಾಡಿದಂತೆ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಸುಮಾರು 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡುವ ಟಾರ್ಗೆಟ್ ಇಟ್ಟುಕೊಂಡಿದೆ. ಇದು ಕನ್ನಡ ಚಿತ್ರರಂಗದ ಬಿಗ್ಗೆಸ್ಟ್ ಟಾರ್ಗೆಟ್ ಆಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಟಿಕೆಟ್ ದರ ಹೇಗಿದೆ?

‘ಟಾಕ್ಸಿಕ್’ ಬಿಗ್ ಬಜೆಟ್ ಸಿನಿಮಾ ಆಗಿದ್ದರಿಂದ ಮೊದಲ ದಿನದ ಟಿಕೆಟ್ ಬೆಲೆ ದುಬಾರಿ ಆಗಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ, ಅಡ್ವಾನ್ಸ್ ಬುಕಿಂಗ್ ಓಪನ್ ಆದ ಬಳಿಕ ಆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಸದ್ಯ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಹಾಗೂ ಕೆಲವೇ ಕೆಲವು ಸಿಂಗಲ್ ಸ್ಕ್ರೀನ್‌ಗಳಿಗೆ ಟಿಕೆಟ್ ಬುಕಿಂಗ್ ಓಪನ್ ಆಗಿದೆ. 1900 ರೂಪಾಯಿಯಿಂದ 250 ರೂಪಾಯಿವರೆಗೂ ‘ಟಾಕ್ಸಿಕ್’ ದರವನ್ನು ಇಡಲಾಗಿದೆ.

ಹೇಗಿದೆ ರೆಸ್ಪಾನ್ಸ್?

‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಲ್ಟಿಪ್ಲೆಕ್ಸ್‌ನ ಬಹುತೇಕ ಸ್ಕ್ರೀನ್‌ಗಳು ಫಾಸ್ಟ್‌ಫಿಲ್ಲಿಂಗ್ ಆಗುತ್ತಿವೆ. ಅಂದ್ಹಾಗೆ, ಇನ್ನೂ ಫ್ಯಾನ್ಸ್ ಶೋ ಬುಕಿಂಗ್ ಓಪನ್ ಆಗಿಲ್ಲ. ಸಿನಿಮಾ ರಿಲೀಸ್‌ ಎರಡು ದಿನಗಳು ಇರುವಾಗ ಫ್ಯಾನ್ಸ್‌ ಶೋ ಬುಕಿಂಗ್ ಓಪನ್ ಮಾಡುವ ನಿರೀಕ್ಷೆಯಿದೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರ, ಬೊಮ್ಮನಹಳ್ಳಿಯ ಶ್ರೀಕೃಷ್ಣ, ಬಾಲಾಜಿ, ಸಿದ್ದೇಶ್ವರ, ವೈಷ್ಣವಿ ಮತ್ತು ವೈಭವಿ, ಚಂದ್ರೋದಯ, ಮುರಳಿ, ಯಲಹಂಕದ ಪ್ರಕಾಶ್ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಆರಂಭ ಆಗುತ್ತವೆ. ಹಾಗೇ ಬೆಂಗಳೂರಿನ ಗೋವರ್ಧನ್ ಚಿತ್ರಮಂದಿರ ಬೆಳಗ್ಗೆ 5.50ಕ್ಕೆ ಮೊದಲ ಶೋ ಆರಂಭ ಆಗಲಿದೆ.