YASH FILM CAREER: ಕನ್ನಡ ಚಿತ್ರರಂಗವನ್ನು ಕಡೆಗಣಿಸಿದವರಿಗೆ ಯಶ್ ಕೌಂಟರ್; ‘ಕೆಜಿಎಫ್’ ಹಿಂದಿನ ಅಸಲಿ ಶ್ರಮ ಬಿಚ್ಚಿಟ್ಟ ಸೂಪರ್ ಸ್ಟಾರ್…

ಪ್ರಸಿದ್ಧ 'ಆಪ್ ಕಿ ಅದಾಲತ್' ಶೋನಲ್ಲಿ ಭಾಗವಹಿಸಿದ್ದ ಯಶ್...

Photo Credits: @thenameisyash (Instagram)

‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟ ಯಶ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರಸಿದ್ಧ ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಸಿನಿಮಾ ಪಯಣದ ಕಷ್ಟದ ದಿನಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ನಾನು ಒಂದೇ ರಾತ್ರಿಗೆ ಸೂಪರ್ ಸ್ಟಾರ್ ಆದವನಲ್ಲ, ಕಷ್ಟಪಟ್ಟು ಹಂತ ಹಂತವಾಗಿ ಬೆಳೆದವನು ಎಂದು ಯಶ್ ಹೇಳಿದ್ದಾರೆ.

‘ಆಪ್ ಕಿ ಅದಾಲತ್’ನಲ್ಲಿ ಟ್ರಿಕ್ಕಿ ಪ್ರಶ್ನೆ: ಸೀರಿಯಲ್‌ನಿಂದ ಕೆಜಿಎಫ್‌ವರೆಗಿನ ಯಶ್ ಪಯಣ…

ಕರ್ನಾಟಕದ ಜನರಿಗೆ ಯಶ್ ಬೆಳೆದು ಬಂದ ಒಂದೊಂದು ಹೆಜ್ಜೆಯೂ ಬಹಳ ಹತ್ತಿರದಿಂದ ತಿಳಿದಿದೆ. ಆದರೆ ‘ಆಪ್ ಕಿ ಅದಾಲತ್’ ಶೋನಲ್ಲಿ ಯಶ್ ಅವರಿಗೆ ಪ್ರೇಕ್ಷಕರಿಂದ ತೀರಾ ಟ್ರಿಕ್ಕಿ ಪ್ರಶ್ನೆಯೊಂದು ಎದುರಾಯಿತು. “ರಾತ್ರೋರಾತ್ರಿ ಸೂಪರ್ ಸ್ಟಾರ್ ಆದಾಗ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ರಿಯಾಕ್ಷನ್ ಹೇಗಿತ್ತು?” ಎಂದು ಪ್ರೇಕ್ಷಕರೊಬ್ಬರು ಕೇಳಿದರು. ಸಣ್ಣ ಧಾರಾವಾಹಿಗಳಿಂದ ಬಣ್ಣದ ಪಯಣ ಆರಂಭಿಸಿದ ಯಶ್, ಬಳಿಕ ಪೋಷಕ ನಟನಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ನಂತರ ‘ರಾಜಾಹುಲಿ’ ಹಾಗೂ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಸಿನಿಮಾಗಳ ಮೂಲಕ ಮಾಸ್ ಹೀರೋ ಆಗಿ ಹೊರಹೊಮ್ಮಿದರು.

“ನಾನು ರಾತ್ರೋರಾತ್ರಿ ಸ್ಟಾರ್ ಆದವನಲ್ಲ”: ಬಾಲಿವುಡ್‌ಗೆ ಯಶ್ ನೀಡಿದ ಖಡಕ್ ಉತ್ತರ…

ಪ್ರೇಕ್ಷಕಿ ನಂದಿನಿ ಕೇಳಿದ ಪ್ರಶ್ನೆಗೆ ಯಶ್ ಸಂಪೂರ್ಣ ಬಾಲಿವುಡ್‌ಗೆ ಅರ್ಥವಾಗುವಂತೆ ಖಡಕ್ ಉತ್ತರ ನೀಡಿದ್ದಾರೆ. “ದೇಶದ ಜನ ನನ್ನನ್ನು ಕೆಜಿಎಫ್ ಸಿನಿಮಾದಿಂದ ಗುರುತಿಸಬಹುದು, ಆದರೆ ನಾನು ರಾತ್ರೋರಾತ್ರಿ ಸ್ಟಾರ್ ಆದವನಲ್ಲ” ಎಂದರು. “ಕರ್ನಾಟಕದಲ್ಲಿ ನಾನು ಒಂದೊಂದೇ ಹೆಜ್ಜೆ ಇಟ್ಟು, ಹಲವು ಹಿಟ್ ಸಿನಿಮಾಗಳನ್ನು ನೀಡಿ ಇಲ್ಲಿಯವರೆಗೆ ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದರು. ಕಷ್ಟಪಟ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರಿಂದಲೇ ತಮ್ಮ ಸಂಭಾವನೆ ಮತ್ತು ಜನಪ್ರಿಯತೆ ಹೆಚ್ಚಾಯಿತು ಎಂದು ಯಶ್ ತಿಳಿಸಿದ್ದಾರೆ. ತಮ್ಮಲ್ಲಿದ್ದ ಸಾಮರ್ಥ್ಯ ಮತ್ತು ನಂಬಿಕೆಯಿಂದಲೇ ಇಂದು ಈ ಎತ್ತರಕ್ಕೆ ಬೆಳೆದು ನಿಂತಿರುವುದಾಗಿ ರಾಕಿಂಗ್ ಸ್ಟಾರ್ ಹೆಮ್ಮೆಯಿಂದ ಹೇಳಿದ್ದಾರೆ.

ಕನ್ನಡ ಇಂಡಸ್ಟ್ರಿ ಬೆಳೆಸಿದ ಕೆಜಿಎಫ್ ಕನಸು: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದು ಬೀಗಿದ ನಟ…

ಆರಂಭದಲ್ಲಿ ‘ಕೆಜಿಎಫ್’ ಒಂದು ಸಣ್ಣ ಮಟ್ಟದ ಸಿನಿಮಾವಾಗಿ ಮಾತ್ರ ರೂಪುಗೊಳ್ಳುತ್ತಿತ್ತು. ಆದರೆ ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ಯಶ್ ಅವರ ಕನಸಾಗಿತ್ತು. ಕನ್ನಡ ಇಂಡಸ್ಟ್ರಿಯನ್ನು ಚಿಕ್ಕದು ಎಂದು ಕಡೆಗಣಿಸುತ್ತಿದ್ದ ದಿನಗಳಲ್ಲಿ ಇಡೀ ತಂಡವನ್ನು ಪ್ಯಾನ್ ಇಂಡಿಯಾ ಮಾಡಲು ಒಪ್ಪಿಸಿದರು. ಮೊದಲಿಗೆ ಯಾರಿಗೂ ಅಷ್ಟಾಗಿ ವಿಶ್ವಾಸವಿಲ್ಲದಿದ್ದರೂ, ಕೆಜಿಎಫ್ ರಿಲೀಸ್ ಆದ ಮೇಲೆ ಇಡೀ ಭಾರತವೇ ಕನ್ನಡದ ಕಡೆ ತಿರುಗಿ ನೋಡಿತು. ಈ ಮೂಲಕ ಯಶ್ ತಮ್ಮ ಕನಸನ್ನು ನನಸು ಮಾಡಿಕೊಂಡು ಜಾಗತಿಕ ಮಟ್ಟದಲ್ಲಿ ಕನ್ನಡದ ಬಾವುಟ ಹಾರಿಸಿದ್ದಾರೆ.