ಜೈಲಿನಲ್ಲಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಮೊಬೈಲ್ ಬಳಸುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅದಕ್ಕೆ ಮುಂಚೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ, ನಟ ದರ್ಶನ್ (Darshan Thoogudeepa) ರಜಾರೋಷವಾಗಿ ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಾ ಕುಳಿತಿರುವ ಚಿತ್ರ ವೈರಲ್ ಆಗಿತ್ತು. ಅದಾದ ಬಳಿಕ ಜೈಲಿನಲ್ಲಿ ಖೈದಿಗಳು ಎಣ್ಣೆ ಪಾರ್ಟಿ ಮಾಡುತ್ತಾ, ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಅದಕ್ಕೆ ಮುಂಚೆ ಭಯೋತ್ಪಾದನಾ ಚಟುವಟಿಕೆಯ ಗುಮಾನಿ ಮೇಲೆ ಬಂಧಿಸಲಾಗಿರುವ ಆರೋಪಿಯ ಬಳಿ ಮೊಬೈಲ್ ಫೋನು ಪತ್ತೆ ಆಗಿತ್ತು. ಇದು ಪದೇ ಪದೇ ಆಗುತ್ತಲೇ ಇರುತ್ತದೆ. ಅಧಿಕಾರಿಗಳು ದಾಳಿ ನಡೆಸುತ್ತಲೇ ಇರುತ್ತಾರೆ ಆದರೂ ಸಹ ಜೈಲು ವ್ಯವಸ್ಥೆ ಬದಲಾವಣೆ ಆಗುವುದಿಲ್ಲ. ಇದಕ್ಕೆ ಕಾರಣ ಏನೆಂದು ಮಾಜಿ ಖೈದಿಯೊಬ್ಬರು ವಿಡಿಯೋ ಒಂದರಲ್ಲಿ ತಿಳಿಸಿದ್ದಾರೆ.
ಜೈಲಿನಲ್ಲಿ ಸಿಗರೇಟು, ಮದ್ಯ, ಮೊಬೈಲು ಇನ್ನಿತರೆಗಳು ಸಿಗುವುದು ಗುಟ್ಟೇನೂ ಅಲ್ಲ. ಈ ಕುರಿತು ಹಲವು ಫೋಟೊ, ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಮಾಧ್ಯಮಗಳಲ್ಲಿ ಹಲವಾರು ಬಾರಿ ವರದಿ ಸಹ ಆಗಿವೆ. ಆದರೂ ಸಹ ಇವೆಲ್ಲ ಕಡಿಮೆ ಆಗಿಲ್ಲ. ಇದಕ್ಕೆ ಕಾರಣ ಇದೆ. ಈಗಾಗಲೇ ಜೈಲಿನ ರುಚಿ ನೋಡಿ ಬಂದ ವ್ಯಕ್ತಿಯೊಬ್ಬರು ಹೇಳಿರುವಂತೆ, ‘ಜೈಲಿಗೆ ‘ಸರಬರಾಜು’ ನಿಂತಿತು ಎಂದರೆ ಅದು ಪೊಲೀಸರಿಗೆ ಕಷ್ಟ. ಜೈಲಿಗೆ ಸೇರುತ್ತಿರುವ ಈ ಮದ್ಯ, ಸಿಗರೇಟುಗಳ ಸರಬರಾಜು ನಿಂತಿತೆಂದರೆ ಖೈದಿಗಳು ತಮ್ಮ-ತಮ್ಮಲ್ಲೇ ಜಗಳ ಮಾಡಿಕೊಂಡು, ಗೋಡೆಗಳನ್ನು ಒಡೆದು ಬೇಕಾದರೆ ಹೊರಗೆ ಬಂದು ಬಿಡುತ್ತಾರೆ. ಅಷ್ಟು ನಶೆಗೆ ದಾಸರಾಗಿಬಿಟ್ಟಿರುತ್ತಾರೆ ಅವರು’ ಎಂದಿದ್ದಾರೆ ಆ ಮಾಜಿ ಖೈದಿ.
ಪೊಲೀಸರ ಸುರಕ್ಷತೆಯಿಂದಲೂ ಈ ‘ಸರಬರಾಜು’ ಬಲು ಮುಖ್ಯ ಎನ್ನುವ ಮಾಜಿ ಖೈದಿ, ವಸ್ತುಗಳು ಒಳಗೆ ಹೋಗದಿದ್ದರೆ, ಖೈದಿಗಳು ಪರಸ್ಪರ ಹೊಡೆದಾಡಿಕೊಂಡು ನ್ಯಾಯಾಧೀಶರ ಮುಂದೆ ಪೊಲೀಸರ ಹೆಸರು ಹೇಳಿ ಬಿಡುತ್ತಾರೆ. ಇಲ್ಲವೇ ಪೊಲೀಸರ ವಿರುದ್ಧವೇ ತಿರುಗಿ ಬಿದ್ದು, ಜೈಲನ್ನು ರಣರಂಗ ಮಾಡಿಬಿಡುತ್ತಾರೆ. ಅಲ್ಲಿರುವ ಖೈದಿಗಳ ಸಂಖ್ಯೆಯ ಆಧಾರದಲ್ಲಿ ಪೊಲೀಸರ ಸಂಖ್ಯೆ ಬಹಳ ಕಡಿಮೆ ಇರುತ್ತದೆ’ ಎಂದು ಅನುಭವದ ಮಾತು ಹೇಳುತ್ತಾರೆ.
ಮಂಟಪದಲ್ಲಿ ವಿಜಯಲಕ್ಷ್ಮೀ ದರ್ಶನ್ ಕಾಣುತ್ತಿದ್ದಂತೆ ಜೈಕಾರ; ದರ್ಶನ್ ಪತ್ನಿ ಹೇಳಿದ ಮಾತು ಕೇಳಿ ಶಾಕ್ ಆದ ಫ್ಯಾನ್ಸ್…
ಅಲೋಕ್ ಕುಮಾರ್ ಅಂಥಹಾ ಹಲವಾರು ನಿಷ್ಠಾವಂತ, ಶಿಸ್ತಿನ ಅಧಿಕಾರಿಗಳು ಬರಬಹುದು ಆದರೆ ಜೈಲಿನ ವ್ಯವಸ್ಥೆಯನ್ನು ಸರಿ ಮಾಡುವುದು ಬಹುತೇಕ ಅಸಾಧ್ಯ. ಹಿಂದಿಯ ಪಾಡ್ಕಾಸ್ಟ್ ಒಂದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಹ ಇದೇ ಮಾತುಗಳನ್ನು ಹೇಳಿದ್ದರು. ಜೈಲುಗಳಲ್ಲಿ ಖೈದಿಗಳು ಬಂಧನದಲ್ಲಿರುವುದಿಲ್ಲ, ಅವರನ್ನು ಕಾಯುವವರೇ ಬಂಧನದಲ್ಲಿರುತ್ತಾರೆ ಎಂದು. ಜೈಲು ಖೈದಿಗಳು ಮಹಾನ್ ಮೊಂಡರು, ಅವರನ್ನು ಹದ್ದುಬಸ್ತಿನಲ್ಲಿಡುವುದು ಅಧಿಕಾರಿಗಳಿಗೆ ಸುಲಭದ ಕೆಲಸವಲ್ಲ. ಹಾಗಾಗಿ ಈ ‘ಸರಬರಾಜ’ನ್ನು ಅವರು ಸಹ ಜಾಣತನದಿಂದ ಬಳಸುತ್ತಾರೆ ಎನ್ನುತ್ತಾರೆ ಮಾಜಿ ಖೈದಿ. ಒಟ್ಟಾರೆ ಈ ಜೈಲು ವ್ಯವಸ್ಥೆ ಸುಧಾರಣೆ ಎಂಬುದು ಸುಲಭ ಸಾಧ್ಯವಲ್ಲ.




