Photo Credits: @thenameisyash (Instagram)
ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದವರ ನಿವೃತ್ತಿ ಯೋಜನೆ ಹೆಚ್ಚಾಗಿ ರಾಜಕೀಯವೇ ಆಗಿರುತ್ತದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಟರು ರಾಜಕೀಯಕ್ಕೆ ಬರುವುದು ಬಹಳ ವರ್ಷಗಳಿಂದ ಬೆಳೆದು ಬಂದಿರುವ ಸಾಮಾನ್ಯ ಸಂಪ್ರದಾಯ. ಇತ್ತೀಚೆಗೆ ತಮಿಳು ನಟ ವಿಜಯ್ ರಾಜಕೀಯ ಪ್ರವೇಶಿಸಿರುವುದು ದಕ್ಷಿಣದ ಹಲವು ಸ್ಟಾರ್ ನಟರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
‘ಆಪ್ ಕೀ ಅದಾಲತ್’ ಶೋನಲ್ಲಿ ಅಭಿಮಾನಿಯ ಪ್ರಶ್ನೆಗೆ ಯಶ್ ನೀಡಿದ ಚಾಣಾಕ್ಷ ಉತ್ತರ…
ಇತ್ತೀಚೆಗೆ ‘ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್ ಅವರಿಗೆ ಪ್ರೇಕ್ಷಕರೊಬ್ಬರು ಕುತೂಹಲಕಾರಿ ಪ್ರಶ್ನೆ ಕೇಳಿದ್ದರು. “ವಿಜಯ್ ರಾಜಕೀಯಕ್ಕೆ ಬಂದಿದ್ದಾರೆ, ನಿಮಗೂ ದೊಡ್ಡ ಫ್ಯಾನ್ ಬೇಸ್ ಇದೆ, ನೀವೂ ಸಿಎಂ ಆಗುವ ಆಸೆ ಹೊಂದಿದ್ದೀರಾ?” ಎಂದಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ರಾಕಿಂಗ್ ಸ್ಟಾರ್ ಯಶ್, ರಾಜಕೀಯ ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸದೆ ಭವಿಷ್ಯದ ಸುಳಿವು ಕೊಟ್ಟಿದ್ದಾರೆ. “ಸದ್ಯಕ್ಕೆ ನಾನು ನಟನಾಗಿ ಸಾಧಿಸುವುದು ತುಂಬಾ ಇದೆ, ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ಯುವ ಗುರಿ ನನ್ನದಾಗಿದೆ” ಎಂದಿದ್ದಾರೆ. ಚಿತ್ರರಂಗದಲ್ಲಿ ತಮ್ಮ ಮೇಲಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸಿದ ನಂತರವೇ ಮುಂದಿನ ಯೋಚನೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
“ಅಗತ್ಯವಿದ್ದರೆ ಭವಿಷ್ಯದಲ್ಲಿ ರಾಜಕೀಯಕ್ಕೆ ಬರುವೆ”: ಯಶ್ ಬೋಲ್ಡ್ ಹೇಳಿಕೆ…
ರಾಜಕೀಯದ ಬಗ್ಗೆ ತಮಗೆ ಯಾವುದೇ ರೀತಿಯ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳಿಲ್ಲ ಎಂದು ಯಶ್ ಮುಕ್ತವಾಗಿ ಹೇಳಿದ್ದಾರೆ. “ಪ್ರಜೆಗಳ ಪರವಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಜನಸೇವೆ ಮಾಡುವುದೇ ನಿಜವಾದ ರಾಜಕೀಯ” ಎಂದು ವಿವರಿಸಿದ್ದಾರೆ. “ಮುಂದೆ ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಹಾಗೂ ಅವಕಾಶ ಸಿಕ್ಕರೆ ಖಂಡಿತ ರಾಜಕೀಯಕ್ಕೆ ಬರಬಹುದು” ಎಂದು ಸುಳಿವು ನೀಡಿದ್ದಾರೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ತಮಗೆ ರಾಜಕೀಯದ ಅವಶ್ಯಕತೆ ಇಲ್ಲ ಹಾಗೂ ನಟನಾಗಿ ಮಾಡುವ ಕೆಲಸ ಬಾಕಿ ಇದೆ ಎಂದಿದ್ದಾರೆ. ಯಶ್ ನೀಡಿರುವ ಈ ರೋಚಕ ಹೇಳಿಕೆ ಅವರ ಅಪಾರ ಅಭಿಮಾನಿ ಬಳಗದಲ್ಲಿ ಹೊಸ ನಿರೀಕ್ಷೆ ಮತ್ತು ಸಂಚಲನ ಮೂಡಿಸಿದೆ.
15 ವರ್ಷಗಳ ನಂತರ ಯಶ್ ಪೊಲಿಟಿಕಲ್ ಎಂಟ್ರಿ? ಸ್ಯಾಂಡಲ್‌ವುಡ್ ಲೆಕ್ಕಾಚಾರ…
ಪ್ರಸ್ತುತ 40 ವರ್ಷ ವಯಸ್ಸಿನ ಯಶ್ ಅವರಿಗೆ ಮುಂದಿನ 10 ರಿಂದ 15 ವರ್ಷಗಳ ಕಾಲ ಸಿನಿಮಾ ಮಾರುಕಟ್ಟೆ ಭದ್ರವಾಗಿದೆ. ಚಿತ್ರರಂಗದಿಂದ ನಿವೃತ್ತಿ ಪಡೆಯುವ ಹಂತದಲ್ಲಿ ಅವರು ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡುವ ಸಾಧ್ಯತೆಯನ್ನು ತಳ್ಳಾಕುವಂತಿಲ್ಲ. ಕರ್ನಾಟಕದಲ್ಲಿ ಅಂಬರೀಶ್, ಜಗ್ಗೇಶ್, ಉಮಾಶ್ರೀ ಅವರಂತಹ ನಟರು ರಾಜಕೀಯಕ್ಕೆ ಬಂದು ಸಚಿವರಾಗಿ ಕೆಲಸ ಮಾಡಿದ್ದಾರೆ. ಆದರೆ ತಮಿಳುನಾಡು ಅಥವಾ ಆಂಧ್ರಪ್ರದೇಶದಂತೆ ಕರ್ನಾಟಕದಲ್ಲಿ ನಟರು ಪೂರ್ಣಪ್ರಮಾಣದಲ್ಲಿ ಮುಖ್ಯಮಂತ್ರಿಯಾದ ಉದಾಹರಣೆ ಇಲ್ಲ. ಮುಂದಿನ ದಿನಗಳಲ್ಲಿ ಯಶ್ ರಾಜಕೀಯಕ್ಕೆ ಪ್ರವೇಶಿಸುವಾಗ ಸ್ಯಾಂಡಲ್‌ವುಡ್ ರಾಜಕೀಯ ಚಿತ್ರಣ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.




