ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್‌ನಲ್ಲಿ ಬಂಡೆ ಎಂದೇ ಖ್ಯಾತರಾಗಿದ್ದವರು. ಈಗಲ್ಲ, ವರ್ಷಗಳ ಹಿಂದೆಯೇ ಅಮಿತ್ ಶಾ ಅಂಥ ಅಮಿತ್ ಶಾಗೆ ಸಡ್ಡು ಹೊಡೆದು ಸವಾಲು ಹಾಕಿ ಜಯಿಸಿಕೊಂಡು ಬಂದವರು. ಇಡಿ, ಸಿಬಿಐ, ಕೇಂದ್ರದ ನಾನಾ ರೀತಿಯ ಗುಂಡುಗಳನ್ನು ಗುರಾಣಿ ಇಲ್ಲದೆ ಎದುರಿಸಿ ಬಂದು ಈಗ ಸಿಎಂ ಆಗಿದ್ದಾರೆ. ಅದೇ ಕೇಂದ್ರ ನಾಯಕರ ಜೊತೆಗೆ ಕೂತು ಆಡಳಿತ ಚರ್ಚೆಗಳನ್ನು ಮಾಡುತ್ತಿದ್ದಾರೆ. ಸಿಎಂ ಆಗಬೇಕೆಂಬ ಹಲವು ವರ್ಷಗಳ ಕನಸನ್ನು ಸಂಯಮ, ತಾಳ್ಮೆಯಿಂದ ನನಸು ಮಾಡಿಕೊಂಡಿರುವ ಡಿಕೆಶಿ, ಈಗ ಸಿಎಂ ಆದ ಬಳಿಕ ಒಂಟಿ ಆಗಿದ್ದಾರೆ. ಎದೆಗೆ-ಎದೆಗೊಟ್ಟು ಸವಾಲು ಹಾಕುವ ನೇರಾ-ನೇರಾ ಯುದ್ಧದಲ್ಲಿ ಪರಿಣಿತಿ ಹೊಂದಿರುವ, ದಶಕಗಳಿಂಲೂ ಅಂಥಹಾ “ಗಂಡು” ರಾಜಕಾರಣ ಮಾಡುತ್ತಾ ಬಂದಿರುವ ಡಿಕೆಶಿಗೆ ತಮ್ಮದೇ ಪಕ್ಷದ ಒಳರಾಜಕೀಯದ ಹೊಡೆತಗಳು ಗೊಂದಲ ಮೂಡಿಸಿದಂತಿವೆ.
ಡಿಕೆ ಶಿವಕುಮಾರ್ ಸಿಎಂ ಆಗಿ ಎರಡು ತಿಂಗಳಾಗಿವೆ. ಆಡಳಿತಕ್ಕಿಂತಲೂ ತಮ್ಮ ಹೆಚ್ಚಿನ ಸಮಯವನ್ನು ಪಕ್ಷದ ಒಳರಾಜಕೀಯ ತಣಿಸುವುದಕ್ಕೇ ಹೆಚ್ಚು ಬಳಸಿದ್ದಾರೆ. ಸಂಪುಟ ವಿಸ್ತರಣೆ, ನಾಯಕರುಗಳ ಅಸಮಾಧಾನ, ಹೈಕಮಾಂಡ್ ಆದೇಶಗಳು, ಶಾಸಕರುಗಳ ಬಂಡಾಯ, ಖಾತೆ ಸಿಗದವರ ಅಸಂತೃಪ್ತಿ ಒಂದೆರಡಲ್ಲ. ಅದರಲ್ಲೂ ಡಿಕೆ ಶಿವಕುಮಾರ್ ಅವರಿಗೆ ಉತ್ತರ ಕರ್ನಾಟಕದ ಶಾಸಕರುಗಳು, ನಾಯಕರು ಬಹಳ ಹಾರ್ಡ್ ಟೈಂ ಅನ್ನೇ ನೀಡುತ್ತಿದ್ದಾರೆ. ಈ ಹಿಂದಿನ ಸರ್ಕಾರಗಳಲ್ಲಿ ಟ್ರಬಲ್ ಶೂಟರ್ ಆಗಿದ್ದ ಡಿಕೆ ಶಿವಕುಮಾರ್ ಅವರಿಗೆ ತಮ್ಮ ಸರ್ಕಾರದ ಟ್ರಬಲ್‌ಶೂಟ್ ಮಾಡಲು ಕಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಬಂಡಾಯದ ಸ್ವರಗಳು ಮತ್ತೆ ಮತ್ತೆ ಭುಗಿಲೇಳುತ್ತಿವೆ.
ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಜೋಡೆತ್ತಿನಂತೆ ಇದ್ದ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಡಾಯ ಎದ್ದು ಮುಂಬೈ ಹೋಟೆಲ್‌ನಲ್ಲಿ ಅಡಗಿ ಕೂತಿದ್ದ ಶಾಸಕರ ಎಳೆದು ತರಲು ಒಬ್ಬಂಟಿಯಾಗಿ ಹೋಗಿ ಹೋಟೆಲ್‌ನ ಎದುರು ರಸ್ತೆಯಲ್ಲಿ ಬಂಡೆಯಂತೆ ಕೂತಿದ್ದ ಡಿಕೆ ಶಿವಕುಮಾರ್ ಈಗ ಸಿಎಂ ಆದ ಬಳಿಕ ತುಸು ಮೆತ್ತಗಾದಂತೆ ಕಾಣುತ್ತಿದ್ದಾರೆ. ಹೈಕಮಾಂಡ್ ಆದೇಶಕ್ಕೆ ಕಟ್ಟುಬಿದ್ದೊ, ಅಥವಾ ಸಿಎಂ ಆದ ಬಳಿಕ ಹೆಗಲೇರಿರುವ ಜವಾಬ್ದಾರಿಗಳಿಂದಲೋ, ಅಥವಾ ತಮ್ಮ ಹಳೆಯ ಇಮೇಜನ್ನು ಬದಲಾಯಿಸಿಕೊಳ್ಳುವ ಒತ್ತಡದಿಂದಲೋ ಏನೋ ಡಿಕೆ ಶಿವಕುಮಾರ್, ಹಳೆಯ ಬಂಡೆಯ ರೂಪವನ್ನು ಬದಿಗಿಟ್ಟಂತಿದೆ.
ಇದನ್ನೂ ಓದಿ: 2028ಕ್ಕೂ ಡಿ.ಕೆ. ಶಿವಕುಮಾರ್ ಅವರೇ ಸಿಎಂ: ಭವಿಷ್ಯ ನುಡಿದ ಸಚಿವ ತಂಗಡಗಿ
ಸಿಎಂ ಆಗಿ ಇನ್ನೂ ಆಗಿರುವುದು ಎರಡು ತಿಂಗಳಷ್ಟೆ. ಅಷ್ಟರಲ್ಲೇ ಒಂದರ ಹಿಂದೊಂದು ಸವಾಲುಗಳು ಡಿಕೆ ಶಿವಕುಮಾರ್ ಎದುರು ಬಂದಿವೆ. ಸಂಪುಟ ವಿಸ್ತರಣೆ ಸಾಹಸ, ಖಾತೆ ವಿತರಣೆ, ಅಸಮಾಧಾನ ಶಮನ ಇವುಗಳೆಲ್ಲ ಇನ್ನೇನು ಮುಗಿದವು ಎನ್ನುತ್ತಿರುವಾಗಲೇ ಕಾವೇರಿ ವಿವಾದ, ಬಿಡದಿ ಟೌನ್‌ಶಿಪ್ ವಿವಾದ, ಈಗ ಹೊಸದಾಗಿ ನೈಸ್ ರೋಡ್ ವಿವಾದ ಹೀಗೆ ಒಂದೆರಡಲ್ಲ. ಆದರೆ ಎಲ್ಲವನ್ನೂ ತಾಳ್ಮೆಯಿಂದ, ಗಂಭೀರತೆಯಿಂದಲೇ ಎದುರಿಸುತ್ತಿದ್ದಾರೆ. ಲೂಸ್ ಟಾಕ್ ಇಲ್ಲ, ವಿವಾದಗಳಿಗೆ ಆಸ್ಪದ ಇಲ್ಲ. ನಾಜೂಕಾಗಿ ಹೆಜ್ಜೆ ಇಡುತ್ತಿದ್ದಾರೆ ಹೊಸ ಸಿಎಂ. ಯಾವ ಮಟ್ಟಿಗೆ ಅವರು ನಾಜೂಕಾಗಿದ್ದಾರೆ ಎಂದರೆ ಸಿದ್ದರಾಮಯ್ಯ ವಿರುದ್ಧ ಪುಂಖಾನುಪುಂಖವಾಗಿ ಟ್ರೋಲ್, ಟೀಕೆ ಮಾಡುತ್ತಿದ್ದ ಬಿಜೆಪಿಯ ಸೋಷಿಯಲ್ ಮೀಡಿಯಾ ಸೈನಿಕರು ಸಹ ಡಿಕೆ ಶಿವಕುಮಾರ್ ಪರವಾಗಿ ಪೋಸ್ಟ್‌ಗಳನ್ನು ಹಾಕಲು ಶುರು ಮಾಡಿದ್ದಾರೆ.




