Photo Credits: @chitraloka (Instagram)
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸಿದ್ದು ಪತ್ತೆಯಾದ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ ಹಿರಿಯ ಮಟ್ಟದ ತನಿಖೆ ನಡೆಸಿದ್ದಾರೆ. ಈ ಅನಿರೀಕ್ಷಿತ ತಪಾಸಣೆ ಮತ್ತು ಬಿಗಿ ಕ್ರಮಗಳು ಇದೀಗ ನಟ ದರ್ಶನ್ ಹಾಗೂ ಪವಿತ್ರಾ ಗೌಡ ದಂಪತಿಗೆ ಭಾರಿ ಆಘಾತ ತಂದೊಡ್ಡಿದೆ. ಪ್ರಜ್ವಲ್ ಮಾಡಿದ ಎಡವಟ್ಟಿನಿಂದಾಗಿ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿಗೂ ಭದ್ರತೆಯ ಬಿಸಿ ತೀವ್ರವಾಗಿ ತಟ್ಟಿದೆ.
ಪವಿತ್ರಾ ಗೌಡ ಬ್ಯಾರಕ್ ತಕ್ಷಣಕ್ಕೆ ಶಿಫ್ಟ್: ಕಟ್ಟುನಿಟ್ಟಿನ ನಿಯಮಕ್ಕೆ ನಟಿ ಕಂಗಾಲು…
ಜೈಲಿನ ಭದ್ರತಾ ಹೈಡ್ರಾಮಾದ ನಂತರ ಪವಿತ್ರಾ ಗೌಡ ಅವರ ಬ್ಯಾರಕ್ ಅನ್ನು ತಕ್ಷಣವೇ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಕೇವಲ ಇಬ್ಬರು ಕೈದಿಗಳಿದ್ದ ಬ್ಯಾರಕ್‌ನಲ್ಲಿ ಪವಿತ್ರಾ ಗೌಡ ಅತ್ಯಂತ ಆರಾಮದಾಯಕವಾಗಿ ಕಾಲ ಕಳೆಯುತ್ತಿದ್ದರು. ಆದರೆ ಡಿಜಿಪಿ ಆದೇಶದಂತೆ ಈಗ ಹೆಚ್ಚು ವಿಚಾರಣಾಧೀನ ಕೈದಿಗಳಿರುವ ಸಾಮಾನ್ಯ ಬ್ಯಾರಕ್‌ಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಹಲವು ಕೈದಿಗಳ ಜೊತೆ ಒಂದೇ ಬ್ಯಾರಕ್ ಹಂಚಿಕೊಳ್ಳಬೇಕಾಗಿ ಬಂದಿರುವುದು ಪವಿತ್ರಾ ಗೌಡ ಅವರಿಗೆ ನುಂಗಲಾರದ ತೂತಾಗಿದೆ. ಅಧಿಕಾರಿಗಳು ಕೈಗೊಂಡ ಈ ದಿಢೀರ್ ನಿರ್ಧಾರದಿಂದ ಜೈಲಿನಲ್ಲಿ ಪವಿತ್ರಾಗೆ ಇರುವ ಕಂಫರ್ಟ್ ವಾತಾವರಣ ಸಂಪೂರ್ಣ ಬಂದ್ ಆಗಿದೆ.
ದರ್ಶನ್ ಬ್ಯಾರಕ್ ಬಳಿ ಹೆಚ್ಚುವರಿ ಸಿಸಿಟಿವಿ: 24 ಗಂಟೆಯೂ ಸಿಬ್ಬಂದಿ ಕಣ್ಗಾವಲು…
ಇನ್ನೊಂದೆಡೆ ನಟ ದರ್ಶನ್ ಇರುವ ಬ್ಯಾರಕ್ ಬಳಿಯೂ ಕಾರಾಗೃಹ ಇಲಾಖೆಯಿಂದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ದರ್ಶನ್ ಚಟುವಟಿಕೆಗಳ ಮೇಲೆ ನಿಗಾ ಇಡಲು ಬ್ಯಾರಕ್ ಸುತ್ತಲೂ ಹೊಸದಾಗಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ಅವರ ಬ್ಯಾರಕ್ ಮುಂದೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ವಿಸಿಲ್ ಕಂಟ್ರೋಲ್ ತರಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪ್ರತಿಕ್ಷಣವೂ ದರ್ಶನ್ ಚಲನವಲನಗಳ ಮೇಲೆ ಜೈಲು ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಡಿಜಿಪಿ ಅಲೋಕ್ ಕುಮಾರ್ ಅವರ ಈ ನಡೆ ದರ್ಶನ್‌ಗೆ ಜೈಲಿನಲ್ಲಿ ಯಾವುದೇ ಸಡಿಲಿಕೆ ಸಿಗದಂತೆ ಮಾಡಿದೆ.
ಮಾಫಿ ಸಾಕ್ಷಿ ಪ್ರದೋಷ್ ಬ್ಯಾರಕ್ ಭದ್ರತೆ ಹೆಚ್ಚಳ: ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ…
ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖ ತಿರುವು ಪಡೆದುಕೊಂಡಿರುವ ಮಾಫಿ ಸಾಕ್ಷಿ ಪ್ರದೋಷ್ ಬ್ಯಾರಕ್ ಬಳಿಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರದೋಷ್ ಸುರಕ್ಷತೆ ಮತ್ತು ಚಟುವಟಿಕೆಗಳ ಮೇಲೂ ಯಾವುದೇ ಲೋಪವಾಗದಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪರಪ್ಪನ ಅಗ್ರಹಾರದಲ್ಲಿದ್ದ ಹಳೆಯ ಸಡಿಲಿಕೆಗಳನ್ನು ತಡೆದು, ಕೈದಿಗಳಿಗೆ ಸಿಗುತ್ತಿದ್ದ ಸೌಲಭ್ಯಗಳಿಗೆ ಬ್ರೇಕ್ ಹಾಕಲಾಗಿದೆ. ಪ್ರಜ್ವಲ್ ಸೆಲ್‌ನಲ್ಲಿ ಮೊಬೈಲ್ ಸಿಕ್ಕ ಸಣ್ಣ ಎಡವಟ್ಟು ಇಡೀ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನಿದ್ದೆಗೆಡಿಸಿದೆ. ಒಟ್ಟಿನಲ್ಲಿ, ಡಿಜಿಪಿ ಅಲೋಕ್ ಕುಮಾರ್ ಅವರ ಈ ಗ್ರ್ಯಾಂಡ್ ಆಪರೇಷನ್ ಜೈಲಿನಲ್ಲಿ ಹೊಸ ಸಂಚಲನ ಮೂಡಿಸಿದೆ.




