YASH AS RAVANA: ‘ರಾಮಾಯಣ’ದಲ್ಲಿ ರಾವಣನ ಪಾತ್ರವನ್ನೇ ಆರಿಸಿಕೊಂಡಿದ್ದು ಏಕೆ? ‘ಆಪ್ ಕೀ ಅದಾಲತ್’ನಲ್ಲಿ ಸತ್ಯ ಬಿಚ್ಚಿಟ್ಟ ಯಶ್…

'ರಾವಣನ ಪಾತ್ರವನ್ನ ನನಗಿಂತ ಚನ್ನಾಗಿ ಯಾರೂ ಮಾಡಲು ಸಾಧ್ಯವಿಲ್ಲ'...

Photo Credits: @hitssentertainment (Instagram)

‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳ ಶೂಟಿಂಗ್ ಕೆಲಸಗಳಲ್ಲಿ ನಿರತರಾಗಿರುವ ನಟ ಯಶ್, ಭಾರತೀಯ ಚಿತ್ರರಂಗದ ಭಾರಿ ನಿರೀಕ್ಷೆಯ ನಟ. ಅತ್ಯಂತ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಚಿತ್ರದಲ್ಲಿ ಯಶ್ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ, ರಾವಣನ ಪವರ್‌ಫುಲ್ ಪಾತ್ರದಲ್ಲೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಯಶ್, ಶ್ರೀರಾಮನ ಪಾತ್ರ ಬಿಟ್ಟು ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಪ್ರಶ್ನೆಗೆ ಯಶ್ ನೀಡಿದ ಪವರ್‌ಫುಲ್ ಉತ್ತರ…

‘ಆಪ್ ಕಿ ಅದಾಲತ್’ ಶೋನಲ್ಲಿ ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರು ನಟ ಯಶ್ ಅವರ ಬಳಿ ಪ್ರಮುಖ ಪ್ರಶ್ನೆಯೊಂದನ್ನು ಕೇಳಿದ್ದರು. “ನಿಮಗೆ ಈ ಸಿನಿಮಾದ ಮೇಲೆ ಸಂಪೂರ್ಣ ಹಿಡಿತವಿದ್ದರೂ, ಶ್ರೀರಾಮನ ಬದಲಿಗೆ ರಾವಣನ ನೆಗೆಟಿವ್ ಪಾತ್ರವನ್ನೇ ಏಕೆ ಆರಿಸಿಕೊಂಡಿರಿ?” ಎಂದಿದ್ದರು. ಇದಕ್ಕೆ ಉತ್ತರಿಸಿದ ಯಶ್, ಶ್ರೀರಾಮನ ದೈವಿಕತೆಯನ್ನು ದೊಡ್ಡ ಮಟ್ಟದಲ್ಲಿ ತೋರಿಸಲು ರಾವಣನ ಪಾತ್ರವೂ ಅಷ್ಟೇ ಪ್ರಬಲವಾಗಿರಬೇಕು ಎಂದರು. ರಾಮನ ಒಳ್ಳೆಯತನ ಮತ್ತು ಮಹತ್ವ ಪ್ರೇಕ್ಷಕರಿಗೆ ತಿಳಿಯಬೇಕಾದರೆ ಎದುರಾಳಿಯ ಶಕ್ತಿಯೂ ಅಷ್ಟೇ ಕೆಟ್ಟದಾಗಿ ಹಾಗೂ ಗಂಭೀರವಾಗಿ ಕಾಣಿಸಬೇಕು ಎಂದಿದ್ದಾರೆ. ಸ್ಕ್ರೀನ್ ಮೇಲೆ ಎದುರಾಳಿ ಶಕ್ತಿಶಾಲಿಯಾಗಿದ್ದಾಗ ಮಾತ್ರ ಕಥೆಗೆ ನೈಜ ಕಿಕ್ ಮತ್ತು ರೋಮಾಂಚನ ಸಿಗುತ್ತದೆ ಎಂಬುದು ಯಶ್ ಅಭಿಪ್ರಾಯ.

ರಾವಣನ ಆಳ ಮತ್ತು ಪ್ರಭಾವವನ್ನು ನನಗಿಂತ ಉತ್ತಮವಾಗಿ ಯಾರೂ ತೆರೆಮೇಲೆ ತರಲು ಸಾಧ್ಯವಿಲ್ಲ..

ರಜತ್ ಶರ್ಮಾ ಅವರು “ಹಾಗಾದರೆ ಕೆಟ್ಟತನ ತೋರಿಸುವ ಗುತ್ತಿಗೆಯನ್ನು ನೀವೇ ಪಡೆದುಕೊಂಡಿದ್ದೀರಾ?” ಎಂದು ನಗುತ್ತಲೇ ಪ್ರಶ್ನಿಸಿದರು. ಇದಕ್ಕೆ ಸವಾಲಿನಂತೆ ಉತ್ತರಿಸಿದ ಯಶ್, ರಾವಣನ ಪಾತ್ರದ ಆಳವನ್ನು ನನಗಿಂತ ಉತ್ತಮವಾಗಿ ಯಾರಿಂದಲೂ ತೆರೆಮೇಲೆ ತರಲು ಸಾಧ್ಯವಿಲ್ಲ ಎಂದಿದ್ದಾರೆ. ಪಾಸಿಟಿವ್ ಅಥವಾ ನೆಗೆಟಿವ್ ಯಾವುದೇ ಪಾತ್ರದಲ್ಲೂ ನನಗಿಂತ ಬೆಸ್ಟ್ ಆಗಿ ಯಾರೂ ನಟಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಆತ್ಮವಿಶ್ವಾಸ ನನಗಿದೆ ಎಂದರು. ರಾವಣನಿಗೆ ಚಿರಂಜೀವಿ ವರವಿದ್ದು, ಆತನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂಬ ವಾತಾವರಣ ಪ್ರೇಕ್ಷಕರಿಗೆ ಸಂಪೂರ್ಣ ಮನದಟ್ಟಾಗಬೇಕು. ಅಂತಹ ಪ್ರಬಲ ರಾಕ್ಷಸ ಶಕ್ತಿಯನ್ನು ಶ್ರೀರಾಮ ಸಂಹರಿಸಿದಾಗ ಮಾತ್ರ ಆ ಕ್ಷಣಕ್ಕೆ ನಿಜವಾದ ರೋಮಾಂಚನ ಹಾಗೂ ದೈವಿಕತೆ ಸಿಗುತ್ತದೆ ಎಂದಿದ್ದಾರೆ.

ವೈಯಕ್ತಿಕ ಅಹಂ ಬದಿಗಿಟ್ಟು ಸಿನಿಮಾ ಕೆಲಸ: ವಿಶ್ವಮಟ್ಟದಲ್ಲಿ ರಾಮಾಯಣ ದೃಶ್ಯಕಾವ್ಯ…

‘ರಾಮಾಯಣ’ ಎನ್ನುವ ಈ ಮಹಾಕಾವ್ಯವನ್ನು ಬೆಳ್ಳಿಪರದೆಯ ಮೇಲೆ ಅತ್ಯಂತ ವೈಭವೋಪೇತವಾಗಿ ತರಲು ಇಡೀ ತಂಡ ಶ್ರಮಿಸುತ್ತಿದೆ. ಈ ಅದ್ಭುತ ಸಿನಿಮಾಗಾಗಿ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಅಹಂ ಮತ್ತು ಅಂಶಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ಯಶ್ ತಿಳಿಸಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಕೇವಲ ಚಿತ್ರವಾಗಿರದೆ ಒಂದು ಭವ್ಯವಾದ ದೃಶ್ಯಕಾವ್ಯದ ಅನುಭವವನ್ನು ನೀಡಲಿದೆ ಎಂದು ರಾಕಿ ಭಾಯ್ ಭರವಸೆ ನೀಡಿದ್ದಾರೆ. ‘ಟಾಕ್ಸಿಕ್’ ಜೊತೆಗೆ ‘ರಾಮಾಯಣ’ ಚಿತ್ರದಲ್ಲೂ ಯಶ್ ಅವರ ಈ ಹೊಸ ನೆಗೆಟಿವ್ ಶೇಡ್ ಅವತಾರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ರಾವಣನ ಪಾತ್ರದ ಕುರಿತು ಯಶ್ ನೀಡಿರುವ ಈ ಬೋಲ್ಡ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.