ಆರೆಸ್ಸೆಸ್ ಹಾಗೂ ಇತರ ಖಾಸಗಿ ಸಂಘ-ಸಂಸ್ಥೆಗಳು ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರಿ ಆವರಣಗಳನ್ನು ಬಳಸಿಕೊಂಡು ನಡೆಸುವ ವಿವಿಧ ರೀತಿಯ ಚಟುವಟಿಕೆಗಳು, ಶಿಬಿರಗಳು ಮತ್ತು ಸಮಾವೇಶಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹ ಸಚಿವಾಲಯ ಸಿದ್ಧಪಡಿಸಿದ್ದ ‘ಕರ್ನಾಟಕ ಸರಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ವಿಧೇಯಕ-2026’ ಕರಡಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಸರ್ಕಾರಿ ಕಟ್ಟಡಗಳು, ಖಾಲಿ ಮೈದಾನಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಆವರಣಗಳನ್ನು ಅಕ್ರಮವಾಗಿ ಅಥವಾ ಅನಧಿಕೃತವಾಗಿ ಬಳಸಿಕೊಳ್ಳುವುದನ್ನು ತಡೆಯುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.
ಈ ಹೊಸ ಶಾಸನ ಜಾರಿಗೆ ಬಂದ ಬಳಿಕ ಸಾರ್ವಜನಿಕ ಉದ್ಯಾನವನಗಳು, ಸರ್ಕಾರಿ ಕಚೇರಿ ಆವರಣಗಳು ಅಥವಾ ಶಾಲಾ-ಕಾಲೇಜು ಮೈದಾನಗಳಲ್ಲಿ ಯಾವುದೇ ರೀತಿಯ ಖಾಸಗಿ ಕಾರ್ಯಕ್ರಮ, ತರಬೇತಿ ಶಿಬಿರ ಅಥವಾ ಮೆರವಣಿಗೆಗಳನ್ನು ಆಯೋಜಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಮುಂಚಿತವಾಗಿಯೇ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಈ ಹಿಂದೆ ತಾತ್ಕಾಲಿಕ ಸುತ್ತೋಲೆಗಳ ಮೂಲಕ ಜಾರಿಯಲ್ಲಿದ್ದ ನಿಯಮಗಳನ್ನು ಹಿಂಪಡೆದು, ಸಂಪೂರ್ಣ ವ್ಯವಸ್ಥೆಯನ್ನು ಕಾನೂನಿನ ವ್ಯಾಪ್ತಿಗೆ ತರಲಾಗುತ್ತಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚೆಯಾಗಿ ಈ ವಿಧೇಯಕ ಅನುಮೋದನೆ ಪಡೆದ ನಂತರ ಪೂರ್ಣಪ್ರಮಾಣದ ಕಾಯಿದೆಯಾಗಿ ಅನುಷ್ಠಾನಗೊಳ್ಳಲಿದೆ.
ಸರ್ಕಾರಿ ಆಸ್ತಿಗಳು ಹಾಗೂ ಶೈಕ್ಷಣಿಕ ವಲಯಗಳನ್ನು ರಾಜಕೀಯ ಅಥವಾ ಧಾರ್ಮಿಕ ಪ್ರಭಾವಗಳಿಂದ ಮುಕ್ತವಾಗಿಡುವುದು ಅಗತ್ಯವಾದ ಕ್ರಮವಾಗಿದೆ.ಆದ್ರೆ ಈ ಕಾನೂನನ್ನು ಜಾರಿಗೆ ತರುವಾಗ ಸರ್ಕಾರ ಯಾವುದೇ ನಿರ್ದಿಷ್ಟ ಸಂಘಟನೆಯನ್ನು ಗುರಿಯಾಗಿಸಿಕೊಂಡು ರಾಜಕೀಯ ವೈಷಮ್ಯ ತೀರಿಸಿಕೊಳ್ಳುವಂತಾಗಬಾರದು. ಯಾವುದೇ ನಿಷ್ಪಕ್ಷಪಾತ ನಿಯಮಾವಳಿಗಳು ಪ್ರಜಾರಾಜ್ಯದ ಮೂಲತತ್ತ್ವಗಳಿಗೆ ಧಕ್ಕೆಯಾಗದಂತೆ ಸರ್ವರಿಗೂ ಸಮಾನವಾಗಿ ಅನ್ವಯವಾಗಬೇಕು. ಧಾರ್ಮಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಕ್ತವಾದ ಮತ್ತು ಪಾರದರ್ಶಕವಾದ ಅನುಮತಿ ಪ್ರಕ್ರಿಯೆ ಇರಬೇಕಾದುದು ಅತ್ಯಂತ ಮುಖ್ಯವಾಗಿದೆ.
ಈಗಾಗಲೇ ಈ ವಿಚಾರ ಬಿಜೆಪಿ ಮಾತು ಕಾಂಗ್ರೆಸ್ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಗಿದೆ. ಆರ್.ಎಸ್.ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕುವ, ತಡೆಯುವ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಈ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಈ ವಿಚಾರ ಅಧಿವೇಶನದಲ್ಲಿ ಗದ್ದಲ ಎಬ್ಬಿಸುವ ಸಾಧ್ಯತೆಯಿದೆ.




