☔ Weather
Bengaluru: 🌧️ 21°C | AQI 49
Mysore: 🌦️ 22°C | AQI 42
Mangalore: ⛈️ 25°C | AQI 75
Bengaluru: 🌧️ 21°C | AQI 49

YASH KBC 18 QUESTION: ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ರಾಕಿಂಗ್ ಸ್ಟಾರ್ ಹವಾ: ಬಿಗ್ ಬಿ ಕೇಳಿದ ಪ್ರಶ್ನೆಗೆ ಯಶ್ ಫ್ಯಾನ್ಸ್ ಖುಷ್…

ಕೆಬಿಸಿ 18ರ ಹಾಟ್ಸೀಟ್ನಲ್ಲಿ 'ರಾಕಿಂಗ್ ಸ್ಟಾರ್' ಹವಾ...

Photo Credits: @yashbossfanss (Instagram)

ಭಾರತೀಯ ಕಿರುತೆರೆಯ ಅತಿ ದೊಡ್ಡ ಕ್ವಿಜ್ ಶೋ ‘ಕೌನ್ ಬನೇಗಾ ಕರೋಡ್‌ಪತಿ’ 18ನೇ ಆವೃತ್ತಿಯೊಂದಿಗೆ ಪ್ರೇಕ್ಷಕರ ಮುಂದೆ ಹೊಸ ಅಲೆಯನ್ನೇ ಸೃಷ್ಟಿಸಿದೆ. ಬಾಲಿವುಡ್ ಶಹನ್‌ಶಾ ಅಮಿತಾಭ್ ಬಚ್ಚನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಶೋನ ಇತ್ತೀಚಿನ ಎಪಿಸೋಡ್ ಒಂದರ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣ ಸ್ಯಾಂಡಲ್‌ವುಡ್‌ನ ಹೆಮ್ಮೆಯ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಯಶ್ ಕುರಿತು ಕೇಳಲಾದ ಅತ್ಯಂತ ಆಸಕ್ತಿದಾಯಕ ಪ್ರಶ್ನೆ.

ಅಮಿತಾಭ್ ಬಚ್ಚನ್ ಕೇಳಿದ 20 ಸಾವಿರ ರೂಪಾಯಿಯ ಆ ಸ್ಪೆಷಲ್ ಪ್ರಶ್ನೆ…

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಬಿಗ್ ಬಿ ಹಾಟ್‌ಸೀಟ್‌ನಲ್ಲಿದ್ದ ಸ್ಪರ್ಧಿಗೆ ರೂ. 20,000 ಮೌಲ್ಯದ ಪ್ರಶ್ನೆಯೊಂದನ್ನು ಎಸೆಯುತ್ತಾರೆ.

ಸ್ಪರ್ಧಿ ಯಾವುದೇ ಗೊಂದಲವಿಲ್ಲದೆ ಕ್ಷಣಾರ್ಧದಲ್ಲೇ ‘ರಾಕಿಂಗ್’ ಎಂಬ ಸರಿಯಾದ ಉತ್ತರ ಆಯ್ಕೆ ಮಾಡಿ ಬಹುಮಾನದ ಹಣವನ್ನು ಜೇಬಿಗಿಳಿಸಿಕೊಂಡರು. ದಕ್ಷಿಣ ಭಾರತದ ದೈತ್ಯ ತಾರೆಯರ ಸಾಲಿನಲ್ಲಿ ಯಶ್ ಹೆಸರು ಪ್ರಸ್ತಾಪವಾಗಿರುವುದು ಅವರ ರಾಷ್ಟ್ರವ್ಯಾಪಿ ಕ್ರೇಜ್‌ಗೆ ಸಾಕ್ಷಿಯಾಗಿದೆ. ‘ಟಾಕ್ಸಿಕ್’ ಸಿನಿಮಾ ರಿಲೀಸ್‌ಗೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ರಾಷ್ಟ್ರೀಯ ವೇದಿಕೆಯಲ್ಲಿ ಯಶ್ ಹೆಸರು ಸದ್ದು ಮಾಡಿದ್ದು ಅಭಿಮಾನಿಗಳಿಗೆ ಅಪಾರ ಹೆಮ್ಮೆ ತಂದಿದೆ.

‘ಬಂಟ್ವಾರಾ 1947’ ಪ್ರಮೋಷನ್‌ಗೆ ಬಂದಿದ್ದ ಬಾಲಿವುಡ್ ದಿಗ್ಗಜರು…

ಇದೇ ಕೆಬಿಸಿ 18ರ ಗ್ರ್ಯಾಂಡ್ ಪ್ರೀಮಿಯರ್ ಎಪಿಸೋಡ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಆಮಿರ್ ಖಾನ್, ಸನ್ನಿ ಡಿಯೋಲ್ ಹಾಗೂ ಪ್ರೀತಿ ಜಿಂಟಾ ಮಿಂಚಿದ್ದರು. ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಬಂಟ್ವಾರಾ 1947’ ಸಿನಿಮಾದ ಪ್ರಚಾರದ ಭಾಗವಾಗಿ ಈ ಮೂವರೂ ತಾರೆಯರು ಹಾಟ್‌ಸೀಟ್‌ ಏರಿದ್ದರು. ಆಟದಲ್ಲಿ ಗೆದ್ದ ಹಣವನ್ನು ಬಡವರ ಕಲ್ಯಾಣಕ್ಕಾಗಿ ಚಾರಿಟಬಲ್ ಟ್ರಸ್ಟ್‌ಗೆ ದೇಣಿಗೆಯಾಗಿ ನೀಡಲು ಈ ಬಾಲಿವುಡ್ ನಟರು ನಿರ್ಧರಿಸಿದ್ದರು. ಅವರ ಉಪಸ್ಥಿತಿಯು ಕೆಬಿಸಿಯ ಆರಂಭಿಕ ಸೀಸನ್‌ಗೆ ಭಾರಿ ಟಿಆರ್‌ಪಿ ಹಾಗೂ ಮಾಸ್ ಗ್ಲಾಮರ್ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಹಲವು ವರ್ಷಗಳ ನಂತರ ಈ ಹಿರಿಯ ನಟರನ್ನು ಒಂದೇ ವೇದಿಕೆಯಲ್ಲಿ ಕಂಡ ಪ್ರೇಕ್ಷಕರು ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.

25 ಲಕ್ಷದ ಕವಿ ಪ್ರಶ್ನೆಗೆ ಗೊಂದಲಕ್ಕೊಳಗಾದ ಆಮಿರ್ ಹಾಗೂ ಪ್ರೀತಿ…

ಅತ್ಯುತ್ತಮವಾಗಿ ಆಡುತ್ತಿದ್ದ ಆಮಿರ್, ಸನ್ನಿ ಹಾಗೂ ಪ್ರೀತಿ ಜಿಂಟಾ ತಂಡ 25 ಲಕ್ಷ ರೂಪಾಯಿ ಮೌಲ್ಯದ 13ನೇ ಪ್ರಶ್ನೆಯ ಹಂತದಲ್ಲಿ ತೀವ್ರ ಗೊಂದಲಕ್ಕೊಳಗಾಯಿತು. “ಕಭಿ ಕಿಸಿ ಕೊ ಮುಕಮ್ಮಲ್ ಜಹಾ ನಹಿ ಮಿಲ್ತಾ…” ಎಂಬ ಪ್ರಸಿದ್ಧ ಉರ್ದು ಕವಿತೆಯ ಸಾಲುಗಳನ್ನು ಬರೆದ ಕವಿ ಯಾರು? ಎಂಬ ಪ್ರಶ್ನೆ ಅಲ್ಲಿ ಎದುರಾಗಿತ್ತು. ಆಮಿರ್ ಖಾನ್ ಹಾಗೂ ಪ್ರೀತಿ ಜಿಂಟಾ ಈ ಸಾಲುಗಳನ್ನು ಮಿರ್ಜಾ ಗಾಲಿಬ್ ಅಥವಾ ಫೈಜ್ ಅಹಮದ್ ಬರೆದಿರಬಹುದು ಎಂದು ಊಹಿಸಿದ್ದರು. ಕೊನೆಗೆ ರಿಸ್ಕ್ ಬೇಡವೆಂದು ಲೈಫ್‌ಲೈನ್ ಬಳಸಿ ಆಟವನ್ನು ಕ್ವಿಟ್ ಮಾಡಿದಾಗ, ಅದರ ನಿಜವಾದ ಉತ್ತರ ‘ನಿದಾ ಫಾಜ್ಲಿ’ ಎಂದಾಗಿತ್ತು. ಒಟ್ಟಿನಲ್ಲಿ, ಬಾಲಿವುಡ್ ತಾರೆಯರ ಉಪಸ್ಥಿತಿ ಹಾಗೂ ಯಶ್ ಅವರ ಬಿರುದಿನ ಹೆಮ್ಮೆಯ ಪ್ರಶ್ನೆಯಿಂದಾಗಿ ಈ ಎಪಿಸೋಡ್ ಪ್ರಸ್ತುತ ನೆಟ್ ಲೋಕದಲ್ಲಿ ಭಾರಿ ವೈರಲ್ ಆಗಿದೆ.