TOXIC: ‘ಟಾಕ್ಸಿಕ್’ ಟ್ರೇಲರ್‌ಗೆ ನಟಿ ರಿಷಿಕಾ ಸಿಂಗ್ ಕಿಡಿ: ತಿರುಗಿಬಿದ್ದ ಯಶ್ ಅಭಿಮಾನಿಗಳು…

'ಟಾಕ್ಸಿಕ್' ಟ್ರೇಲರ್ಗೆ ನಟಿ ರಿಷಿಕಾ ಸಿಂಗ್ ಕಿಡಿ...

Photo Credits: @sandalwoodactorss (Instagram)

@kvn.productions (Instagram)

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಇಡೀ ಚಿತ್ರರಂಗದಲ್ಲೇ ಭಾರಿ ಚರ್ಚೆಗೆ ಗ್ರಾಸವಾಗಿದೆ. ಟ್ರೇಲರ್‌ನಲ್ಲಿನ ಕೆಲವು ಬೋಲ್ಡ್ ದೃಶ್ಯಗಳು ಮತ್ತು ಸನ್ನಿವೇಶಗಳ ಕುರಿತು ನಟಿ ರಿಷಿಕಾ ಸಿಂಗ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದಿಂದ ಜಾಗ ಖಾಲಿ ಮಾಡಿಸುತ್ತೇವೆ ಎಂಬ ನಟಿಯ ಹೇಳಿಕೆ ವಿರುದ್ಧ ಯಶ್ ಅಭಿಮಾನಿಗಳು ತಿರುಗಿಬಿದ್ದಿದ್ದು, ಜಾಲತಾಣಗಳಲ್ಲಿ ಭಾರಿ ವಾಗ್ವಾದ ಶುರುವಾಗಿದೆ.

ರಿಷಿಕಾ ಸಿಂಗ್ ಮಾಡಿದ ವೀಡಿಯೋದಲ್ಲಿ ಏನಿದೆ?

ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ, ನಟಿ ರಿಷಿಕಾ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಯಶ್ ಕಾಣಿಸಿಕೊಂಡಿರುವ ಬೋಲ್ಡ್ ದೃಶ್ಯಗಳನ್ನು ಉಲ್ಲೇಖಿಸಿ ತಮ್ಮದೇ ಶೈಲಿಯಲ್ಲಿ ಕಟುವಾಗಿ ಲೇವಡಿ ಮಾಡಿದ್ದಾರೆ. “ಗಂಡು ಮಕ್ಕಳಿಗೆ ಮರ್ಯಾದೆ ಇದ್ರೆ ಚೆಂದ, ಮನೆಯಲ್ಲಿ ಹೆಂಡತಿ-ಮಗಳಿದ್ದರೂ ನಟಿಯರ ಜೊತೆ ಈ ರೀತಿ ನಟಿಸುವುದು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ. “ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಿರಿ, ಇಲ್ಲದಿದ್ದರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸುತ್ತೇವೆ” ಎಂದು ಗರಂ ಆಗಿದ್ದಾರೆ. “ಐ ಆಮ್ ಟಾಕ್ಸಿಕ್” ಎಂದು ಸಾಲುಗಳನ್ನು ಹೇಳುವ ಮೂಲಕ ತಮ್ಮ ಆಕ್ರೋಶವನ್ನು ವೀಡಿಯೋ ಮೂಲಕ ಹೊರಹಾಕಿದ್ದಾರೆ. ನಟಿಯ ಈ ನೇರ ಹಾಗೂ ವಿವಾದಾತ್ಮಕ ಹೇಳಿಕೆಯ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ವಿರುದ್ಧ ಯಶ್ ಅಭಿಮಾನಿಗಳ ಸೈಬರ್ ದಾಳಿ…

ರಿಷಿಕಾ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಯಶ್ ಅಭಿಮಾನಿ ಬಳಗ ನಟಿಯ ವಿರುದ್ಧ ಕೆಂಡಾಮಂಡಲವಾಗಿದೆ. ಹಳೆಯ ಸಿನಿಮಾಗಳಲ್ಲಿ ರಿಷಿಕಾ ನಟಿಸಿದ್ದ ಬೋಲ್ಡ್ ದೃಶ್ಯಗಳನ್ನು ಶೇರ್ ಮಾಡಿ ‘ಇದು ನಿಮ್ಮ ಸಂಸ್ಕಾರವೇ?’ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. “ಸಿನಿಮಾದಲ್ಲಿ ನಟಿಸಿದ ನಟಿಯರಿಗೇ ಯಾವುದೇ ಸಮಸ್ಯೆ ಇಲ್ಲದಿರುವಾಗ ನಿಮಗೇಕೆ ಅಷ್ಟೊಂದು ಉರಿ?” ಎಂದು ಟ್ರೋಲ್ ಮಾಡುತ್ತಿದ್ದಾರೆ. “ಸಂಭಾವನೆ ಪಡೆದು ಒಪ್ಪಂದದಂತೆಯೇ ತಾರೆಯರು ನಟಿಸಿದ್ದಾರೆ, ಇದರಲ್ಲಿ ನಟನೊಬ್ಬನನ್ನು ವೈಯಕ್ತಿಕವಾಗಿ ನಿಂದಿಸುವುದು ತಪ್ಪು” ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ. ಯಶ್ ಗೌರವಕ್ಕೆ ಧಕ್ಕೆ ತರಲು ಈ ರೀತಿ ಪಬ್ಲಿಸಿಟಿ ಗಿಮಿಕ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ, ಸಿನಿಮಾ ಕುರಿತ ನಟಿಯ ವೈಯಕ್ತಿಕ ಅಭಿಪ್ರಾಯವನ್ನು ಗೌರವಿಸಬೇಕು ಎಂದು ಕೆಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ವಿವಾದಗಳ ನಡುವೆಯೂ ಕಂಪ್ಲೀಟ್ ಬಝ್ ಪಡೆದ ‘ಟಾಕ್ಸಿಕ್’…

‘ಕಳ್ಳ ಮಳ್ಳ ಸುಳ್ಳ’ ಹಾಗೂ ಬಿಗ್ ಬಾಸ್ ಮೂಲಕ ಗುರುತಿಸಿಕೊಂಡಿದ್ದ ರಿಷಿಕಾ, ಹಿಂದೆ ಯಕ್ಷಗಾನ ಕುರಿತು ನೀಡಿ ವಿವಾದಕ್ಕೀಡಾಗಿದ್ದರು. ಇದೀಗ ಯಶ್ ಸಿನಿಮಾದ ವಿಷಯವಾಗಿ ಮತ್ತೆ ಕಾಂಟ್ರವರ್ಸಿ ಸೃಷ್ಟಿಸಿದ್ದು, ಗಾಂಧಿನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಗಸ್ಟ್ 26ರಂದು ರಿಲೀಸ್ ಆಗಲಿರುವ ‘ಟಾಕ್ಸಿಕ್’ ಸಿನಿಮಾ ಪ್ರಚಾರದ ನಡುವೆಯೇ ಈ ದಿನಕ್ಕೊಂದು ಹೊಸ ವಿವಾದಗಳು ಎದುರಾಗುತ್ತಿವೆ. ಯಶ್ ಮೇಲಿರುವ ನಂಬಿಕೆಯಿಂದಾಗಿ ಅಭಿಮಾನಿಗಳು ಈ ಎಲ್ಲಾ ಟೀಕೆಗಳನ್ನು ಮೆಟ್ಟಿ ನಿಂತು ಸಿನಿಮಾ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ವಿವಾದಗಳು ಎಷ್ಟೇ ಬಂದರೂ ಸಿನಿಮಾದ ಮೇಲಿರುವ ನಿರೀಕ್ಷೆ ಮತ್ತು ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಟ್ಟಿನಲ್ಲಿ, ರಿಷಿಕಾ ಸಿಂಗ್ ಹೇಳಿಕೆ ಹಾಗೂ ಯಶ್ ಫ್ಯಾನ್ಸ್ ವಾಗ್ವಾದದಿಂದಾಗಿ ‘ಟಾಕ್ಸಿಕ್’ ಸಿನಿಮಾ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.