ಬೆಂಗಳೂರು ಕ್ಷೇತ್ರದಲ್ಲಿ ಹುಟ್ಟಿ, ಬೆಳೆದು, ರಂಗಭೂಮಿ ಹಾಗೂ ಸಿನಿಮಾಗಳ ಮೂಲಕ ಗುರುತಿಸಿಕೊಂಡು, ಅದೇ ಕ್ಷೇತ್ರದಿಂದ ಸಂಸತ್ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ನಟ ಹಾಗೂ ಸಾಮಾಜಿಕ ವಿಶ್ಲೇಷಕ ಪ್ರಕಾಶ್ ರಾಜ್ ಅವರ ಹೆಸರು ಪ್ರಸ್ತುತ ಬೆಂಗಳೂರಿನ ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ನಡುವೆಯೇ ಈ ವಿದ್ಯಮಾನ ಬೆಳಕಿಗೆ ಬಂದಿದ್ದು, ಈ ಕುರಿತು ಪ್ರಕಾಶ್ ರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶ ಹಾಗೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜಾರಿಯಲ್ಲಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರ ಹೆಸರುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ ದೊಡ್ಡ ಮಟ್ಟದ ಮತದಾರರನ್ನು ಗೈರುಹಾಜರಿ, ಸ್ಥಳಾಂತರ, ಮರಣ ಅಥವಾ ನಕಲಿ (ASDDO) ವರ್ಗಕ್ಕೆ ಸೇರಿಸಿ ಪಟ್ಟಿಯಿಂದ ಕೈಬಿಡಲಾಗಿದೆ. ತಾವು ಜನಿಸಿದ, ಶಿಕ್ಷಣ ಪಡೆದ ಹಾಗೂ ರಾಜಕೀಯವಾಗಿ ಸ್ಪರ್ಧಿಸಿದ ಸ್ಥಳದಲ್ಲೇ ತಮ್ಮ ಮತದಾನದ ಹಕ್ಕು ರದ್ದಾಗಿರುವುದನ್ನು ವ್ಯಂಗ್ಯಾತ್ಮಕವಾಗಿ ಪ್ರಶ್ನಿಸಿರುವ ಪ್ರಕಾಶ್ ರಾಜ್, ತಮ್ಮ ಹಕ್ಕನ್ನು ಮರುಪಡೆಯುವ ಕಾನೂನಾತ್ಮಕ ಹೋರಾಟ ಮತ್ತು ಪ್ರಕ್ರಿಯೆಗಳನ್ನು ಎದುರಿಸಲು ಸಿದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಪರಿಶುದ್ಧಗೊಳಿಸುವ ಹಾಗೂ ತಾಂತ್ರಿಕವಾಗಿ ದೋಷರಹಿತಗೊಳಿಸುವ ಉದ್ದೇಶದಿಂದ ವಿಶೇಷ ಪರಿಷ್ಕರಣೆ ನಡೆಸುತ್ತಿರುವುದು ಪ್ರಜಾಸತ್ತಾತ್ಮಕವಾಗಿ ಸ್ವಾಗತಾರ್ಹವಾದರೂ, ಕೆಳ ಘಟನೆಗಳು ಈ ಪ್ರಕ್ರಿಯೆಯ ಲೋಪಗಳನ್ನು ಎತ್ತಿ ತೋರಿಸುತ್ತದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳಿಗೆ ಆಧಾರವಾಗಿರುವ ಮತದಾರರ ಪಟ್ಟಿಯಲ್ಲಿ ಇಂತಹ ಗಂಭೀರ ತಾಂತ್ರಿಕ ಹಾಗೂ ಆಡಳಿತಾತ್ಮಕ ದೋಷಗಳು ಎದುರಾದಾಗ, ಸಾಮಾನ್ಯ ನಾಗರಿಕರ ಸ್ಥಿತಿ ಏನು ಎಂಬ ಬಲವಾದ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುವುದು ಸಹಜವಾಗಿದೆ.
ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಶೇಕಡಾ ನಲವತ್ತಕ್ಕೂ ಹೆಚ್ಚು ಮತದಾರರ ಹೆಸರುಗಳು ಪರಿಶೀಲನೆಯ ನೆಪದಲ್ಲಿ ಅನುಮಾನಾಸ್ಪದ ಅಥವಾ ರದ್ದುಗೊಳಿಸಿದ ವರ್ಗಕ್ಕೆ ಸೇರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂಬುದು ಕೆಲವರ ವಾದ. ತಂತ್ರಜ್ಞಾನ ಹಾಗೂ ಡಿಜಿಟಲ್ ಡೇಟಾ ಆಧರಿಸಿ ನಡೆಯುವ ವ್ಯವಸ್ಥೆಗಳು ಪ್ರಜೆಯ ಮೂಲಭೂತ ಹಕ್ಕನ್ನು ಕಸಿಯುವ ಸಾಧನಗಳಾಗಬಾರದು. ಕೇವಲ ತಾಂತ್ರಿಕ ಅಥವಾ ಮಾನವೀಯ ಪ್ರಮಾದಗಳಿಂದಾಗಿ ಅರ್ಹ ಪ್ರಜೆಗಳ ಹೆಸರುಗಳು ಪಟ್ಟಿಯಿಂದ ಕೈಬಿಟ್ಟುಹೋಗದಂತೆ ತಡೆಯಲು ಆಯೋಗವು ಹೆಚ್ಚು ಜಾಗರೂಕತೆಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ ಯರ್ಮ್ಬ ಆಗ್ರಹಗಳು ಕೇಳಿಬರುತ್ತಿವೆ.
ಹೀಗಾಗಿ ಯಾವುದೇ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಹೆಸರು ಕೈಬಿಡುವ ಮುನ್ನ ಸೂಕ್ತ ಮುನ್ಸೂಚನೆ, ಪರಿಶೀಲನೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವುದು ಆಡಳಿತ ಯಂತ್ರದ ಜವಾಬ್ದಾರಿಯಾಗಿದೆ. ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರುವವರೇ ತಮ್ಮ ಹಕ್ಕು ಮರಳಿ ಪಡೆಯಲು ಹೋರಾಡಬೇಕಾದ ಸನ್ನಿವೇಶ ನಿರ್ಮಾಣವಾದಾಗ, ತಳಮಟ್ಟದ ಹಾಗೂ ಅಸಂಘಟಿತ ವರ್ಗದ ಜನರಿಗೆ ತಮ್ಮ ಹೆಸರನ್ನು ಮರುಸೇರ್ಪಡೆಗೊಳಿಸಲು ಎದುರಾಗುವ ಸಂಕೀರ್ಣ ಸವಾಲುಗಳು ಮತ್ತಷ್ಟು ತೀವ್ರವಾಗಿರುತ್ತವೆ.
ಆದ್ದರಿಂದ, ಚುನಾವಣಾ ಆಯೋಗ ಈ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯನ್ನು ಕೇವಲ ಅಂಕಿ-ಅಂಶಗಳ ಆಧಾರದಲ್ಲಿ ನೋಡದೆ, ಪಾರದರ್ಶಕತೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ .




