SATHISH NINASAM AYOGYA 2: ‘ಅಯೋಗ್ಯ-2’ಗೆ ಹೌಸ್‌ಫುಲ್ ಬೋರ್ಡ್‌ಗಳ ಜಾತ್ರೆ: ಬಾಕ್ಸ್ ಆಫೀಸ್ ಸಕ್ಸೆಸ್ ನೋಡಿ ಭಾವುಕರಾದ ಸತೀಶ್ ನೀನಾಸಂ…

ನಟ ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ-2' ಸಿನಿಮಾ...

Photo Credits: @sathish_ninasam_official (Instagram)

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಸತೀಶ್ ನೀನಾಸಂ ಅಭಿನಯದ ‘ಅಯೋಗ್ಯ-2’ ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಭಾರಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಸಾರ್ವಜನಿಕ ಪ್ರತಿಕ್ರಿಯೆ ಹಾಗೂ ಹೌಸ್‌ಫುಲ್ ಪ್ರದರ್ಶನಗಳಿಂದ ನಟ ಸತೀಶ್ ನೀನಾಸಂ ಅತ್ಯಂತ ಸಂತಸಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋ ಮೂಲಕ ತಮ್ಮ ಮನದಾಳದ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್‌ಗಳ ಜಾತ್ರೆ…

ಸಿನಿಮಾ ಮಂದಿರಗಳಲ್ಲಿ ಹೌಸ್‌ಫುಲ್ ಬೋರ್ಡ್ ನೋಡಿ ನಟ ಸತೀಶ್ ನೀನಾಸಂ ಭಾವುಕರಾಗಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. “ನಾವು ತುಂಬಾನೇ ಖುಷಿಯಾಗಿದ್ದೀವಿ, ಪ್ರೇಕ್ಷಕರು ನೀಡಿದ ಪ್ರೀತಿಯನ್ನು ಕಂಡು ತುಂಬಾ ಸಂತೋಷವಾಗಿದೆ” ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಚಿತ್ರತಂಡ ಪಟ್ಟ ಕಠಿಣ ಶ್ರಮಕ್ಕೆ ಇಂದು ಸೂಕ್ತ ಫಲ ಸಿಕ್ಕಿದೆ ಎಂದು ಅವರು ಹೆಮ್ಮೆಯಿಂದ ಸ್ಮರಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ತೋರುತ್ತಿರುವ ಪ್ರೀತಿ ಮತ್ತು ಸಂಭ್ರಮವನ್ನು ಕಂಡು ತಮಗೆ ಗೂಸ್‌ಬಂಪ್ಸ್ ಬಂದಿದೆ ಎಂದಿದ್ದಾರೆ. ಪಕ್ಕದಲ್ಲೇ ನಟ ದಡಿಯಾ ಗಿರಿ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ವಿಶೇಷ ವಿಡಿಯೋವನ್ನು ಶೂಟ್ ಮಾಡಿದ್ದಾರೆ. ಈ ಸಕ್ಸೆಸ್ ವಿಡಿಯೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

ಕ್ರೇಜಿ ಸ್ಟಾರ್ ಎಂಟ್ರಿ ಮತ್ತು ಕಾಮಿಡಿ ಮ್ಯಾಜಿಕ್…

ಇದೇ ಆಗಸ್ಟ್ 7 ರಂದು ತೆರೆಕಂಡ ‘ಅಯೋಗ್ಯ-2’ ಸಿನಿಮಾಗೆಗೆ ಮೊದಲ ದಿನದಿಂದಲೇ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಹಾಸ್ಯ ಸನ್ನಿವೇಶಗಳು ಅತ್ಯಂತ ಲವಲವಿಕೆಯಿಂದ ಮೂಡಿಬಂದಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿವೆ. ನಟಿ ರಚಿತಾ ರಾಮ್ ಅವರ ಮ್ಯಾನರಿಸಂ ಹಾಗೂ ಸಾಧು ಕೋಕಿಲ ಅವರ ಕಾಮಿಡಿ ಟೈಮಿಂಗ್ ಸಿನಿರಸಿಕರ ನೆಚ್ಚಿನ ಭಾಗವಾಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಎಂಟ್ರಿಯು ಚಿತ್ರಕ್ಕೆ ವಿಶೇಷ ಮೆರುಗು ನೀಡಿದ್ದು, ದೊಡ್ಡ ಆನೆಬಲ ತಂದಿದೆ. ಚಿತ್ರದ ಕೊನೆಯಲ್ಲಿ ಸತೀಶ್ ನೀನಾಸಂ ನೀಡಿದ ಸಾಮಾಜಿಕ ಸಂದೇಶವು ವೀಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿರುವ ಪ್ರೇಕ್ಷಕರು ಚಿತ್ರತಂಡದ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಬಾಕ್ಸ್ ಆಫೀಸ್ ಸೌಂಡ್ ಜೊತೆ ಮುಂದಿನ ಭಾಗದ ಸೌಂಡಿಂಗ್…

ಮೊದಲ ಭಾಗಕ್ಕಿಂತಲೂ ಹೆಚ್ಚಿನ ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಸಿನಿಮಾ ದೊಡ್ಡ ಹಿಟ್ ಆಗಿದೆ. ಚಿತ್ರಕ್ಕೆ ಸಿಗುತ್ತಿರುವ ಈ ಬೃಹತ್ ಗೆಲುವಿನಿಂದಾಗಿ ಸತೀಶ್ ನೀನಾಸಂ ಮುಂದಿನ ಭಾಗದ ಬಗ್ಗೆಯೂ ಧೈರ್ಯವಾಗಿ ಮಾತನಾಡಿದ್ದಾರೆ. ಸಿನಿಮಾದ ಕೊನೆಯ ಭಾಗದಲ್ಲಿ ‘ಅಯೋಗ್ಯ-3’ ಬರುವ ಬಗ್ಗೆ ಚಿತ್ರತಂಡ ಈಗಾಗಲೇ ಸ್ಪಷ್ಟವಾದ ಸುಳಿವನ್ನು ಬಿಟ್ಟುಕೊಟ್ಟಿದೆ. ಪ್ರೇಕ್ಷಕರು ತೋರಿಸುತ್ತಿರುವ ಈ ಅಭೂತಪೂರ್ವ ಪ್ರೀತಿಯೇ ಮುಂದಿನ ಭಾಗವನ್ನು ಮಾಡಲು ದೊಡ್ಡ ಪ್ರೇರಣೆಯಾಗಿದೆ ಎಂದಿದ್ದಾರೆ. ಅಯೋಗ್ಯ ಫ್ರಾಂಚೈಸಿ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹೊಸ ಚರಿತ್ರೆ ಬರೆಯುವ ಲಕ್ಷಣಗಳು ಎದ್ದು ಕಾಣುತ್ತಿವೆ. ಒಟ್ಟಿನಲ್ಲಿ ‘ಅಯೋಗ್ಯ-2’ ಮೂಲಕ ಸತೀಶ್ ನೀನಾಸಂ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ತಮ್ಮ ಸಕ್ಸೆಸ್ ಓಟವನ್ನು ಮುಂದುವರಿಸಿದ್ದಾರೆ.