‘ಬಿಗ್ ಬಾಸ್ ಕನ್ನಡ ಸೀಸನ್ 13’ರ (BBK 13) ಮನೆಯಲ್ಲಿ ಈಗ ಭಾರಿ ರೋಚಕ ತಿರುವು ಎದುರಾಗಿದೆ. ಶೋ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ಹೊಸ ದಾಖಲೆಗಳು ಬರೆಯಲ್ಪಟ್ಟಿವೆ.
ಮನೆಯಲ್ಲಿದ್ದ ಎಲ್ಲಾ ಮಹಿಳಾ ಸ್ಪರ್ಧಿಗಳು ಒಟ್ಟಿಗೆ ‘ಕಳಪೆ’ ಪಟ್ಟ ಪಡೆದು ಜೈಲು ಸೇರಿದ್ದಾರೆ. ವಿಶೇಷವೆಂದರೆ, ಮಹಾರಾಣಿ ಹಾಗೂ ಕ್ಯಾಪ್ಟನ್ ಕೂಡ ಕಳಪೆ ಪಡೆದು ಜೈಲಿಗೆ ಹೋಗಿದ್ದಾರೆ.
ಈ ಅಚ್ಚರಿಯ ಬೆಳವಣಿಗೆ ವೀಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ದೊಡ್ಮನೆಯಲ್ಲಿ ನಡೆದ ಅಸಲಿ ಕಥೆ ಇಲ್ಲಿದೆ.
ಮಹಾರಾಣಿ ಟಾಸ್ಕ್‌ನಿಂದ ಶುರುವಾಯ್ತು ಅಸಲಿ ಆಟ
ಈ ವಾರದ ಟಾಸ್ಕ್‌ನಲ್ಲಿ ಗಾನವಿ, ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ಅವರನ್ನು ‘ಯುವರಾಣಿ’ಯರಾಗಿ ಆಯ್ಕೆ ಮಾಡಲಾಗಿತ್ತು. ಮೂವರಲ್ಲಿ ಒಬ್ಬರನ್ನು ‘ಮಹಾರಾಣಿ’ ಮಾಡಲು ಹಲವು ಟಾಸ್ಕ್‌ಗಳನ್ನು ನೀಡಲಾಗಿತ್ತು.
ಕೊನೆಗೆ ಸಹಸ್ಪರ್ಧಿ ಗಗನ್ ಅವರ ಬೆಂಬಲ ಹಾಗೂ ಹೋರಾಟದಿಂದ ಗಾನವಿ ಮಹಾರಾಣಿಯಾದರು. ಇದರ ಬೆನ್ನಲ್ಲೇ ಅವರಿಗೆ ಮನೆಯ ಕ್ಯಾಪ್ಟನ್ ಪಟ್ಟವೂ ಸಿಕ್ಕಿತು.
ಪುರುಷ ಸ್ಪರ್ಧಿಗಳ ಒಗ್ಗಟ್ಟು ಮತ್ತು ಸೇಡಿಗೆ ಕಾರಣವೇನು?
ಮಹಿಳಾ ಸ್ಪರ್ಧಿಗಳ ಆಟದ ವೈಖರಿ ಪುರುಷ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಸರಿಯಾಗಿ ಆಡದಿದ್ದರೂ, ಸ್ವಾರ್ಥಕ್ಕಾಗಿ ಪುರುಷರನ್ನು ಬಲಿಪಶು ಮಾಡಲಾಗಿದೆ ಎಂಬ ಆರೋಪ ಕೇಳಿಬಂತು.
ನಾಮಿನೇಷನ್‌ನಲ್ಲಿ ಪುರುಷರನ್ನು ಹೊರಹಾಕಲು ಹೆಸರು ಸೂಚಿಸಿದ್ದು ಗಂಡು ಮಕ್ಕಳ ಕೋಪ ಹೆಚ್ಚಿಸಿತು. ಇದರಿಂದ ಸಿಟ್ಟಾದ ಪುರುಷ ಸ್ಪರ್ಧಿಗಳು ಒಗ್ಗಟ್ಟಾಗಿ ಸೇಡು ತೀರಿಸಲು ಮುಂದಾದರು.
ಇದನ್ನು ಓದಿ: BBK 13: ಎಲ್ಲಾ ವಿರೋಧದ ನಡುವೆಯೂ ಮಹರಾಣಿ ಪಟ್ಟ ಗೆದ್ದ ಗಾನವಿ; ಇಬ್ಬರು ಕ್ಯಾಪ್ಟನ್ಗಳಾದ ಗಾನವಿ, ಗಗನ್
ವಾರದ ‘ಉತ್ತಮ’ ಮತ್ತು ‘ಕಳಪೆ’ ಆಯ್ಕೆಯಲ್ಲಿ ಪುರುಷರು ಒಮ್ಮತದ ತೀರ್ಮಾನ ತೆಗೆದುಕೊಂಡರು. ಗಾನವಿ, ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ಮೂವರನ್ನೂ ‘ಕಳಪೆ’ ಎಂದು ಮತ ಹಾಕಿದರು.
BBK 13: ಬಿಗ್ ಬಾಸ್ ಇತಿಹಾಸದಲ್ಲಿ ಎರಡು ಹೊಸ ದಾಖಲೆ
ಹೆಚ್ಚಿನ ಮತಗಳಿಂದ ಮಹಾರಾಣಿ ಹಾಗೂ ಕ್ಯಾಪ್ಟನ್ ಗಾನವಿ, ಆಸಿಯಾ ಮತ್ತು ಸೌಂದರ್ಯ ಶೆಟ್ಟಿ ಕಳಪೆ ಪಟ್ಟ ಪಡೆದರು. ಇದರಿಂದ ಶೋ ಇತಿಹಾಸದಲ್ಲಿ ಎರಡು ಹೊಸ ದಾಖಲೆಗಳಾದವು.
ಮೊದಲನೆಯದಾಗಿ, ಎಲ್ಲಾ ಮೂವರು ಮಹಿಳಾ ಸ್ಪರ್ಧಿಗಳು ಒಟ್ಟಿಗೆ ಕಳಪೆ ಪಡೆದು ಜೈಲಿಗೆ ಹೋದರು. ಎರಡನೆಯದಾಗಿ, ಮನೆಯ ಕ್ಯಾಪ್ಟನ್ ಅವರೇ ಕಳಪೆ ಪಡೆದು ಜೈಲು ಸೇರಿದರು.
ಮೊದಲು ಜೈಲಿಗೆ ಹೋಗಲು ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಬಳಿಕ ಬಿಗ್ ಬಾಸ್ ಜೈಲಿನ ಕಳಪೆ ಬಟ್ಟೆ ಕಳುಹಿಸಿದಾಗ ಅನಿವಾರ್ಯವಾಗಿ ಒಪ್ಪಿಕೊಂಡು ಜೈಲು ಸೇರಿದರು. ಈಗ ಮಹಾರಾಣಿಯೇ ಜೈಲಿಗೆ ಹೋಗಿರುವುದರಿಂದ, ಗಾನವಿ ಅವರ ‘ಮಹಾರಾಣಿ ಪಟ್ಟ’ ಉಳಿಯುತ್ತದೆಯೇ ಅಥವಾ ರದ್ದಾಗುತ್ತದೆಯೇ ಎಂದು ಕಾದು ನೋಡಬೇಕಿದೆ.




