ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್ ರೀಲೋಡೆಡ್’ (Halli Power Reloaded) ಈಗ ಅಂತಿಮ ಹಂತ ತಲುಪಿದ್ದು, ಶೋನ ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಶೋನ ವಿನ್ನರ್ ಯಾರು ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದ್ದು, ಗೆಲುವಿನ ಕ್ಷಣದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.
ಫಿನಾಲೆ ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ಮೊಬೈಲ್ನಲ್ಲಿ ಸೆರೆಹಿಡಿಯಲಾದ ವಿಡಿಯೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ಈ ವಿಡಿಯೋಗಳಲ್ಲಿ ನಿರೂಪಕ ಅಕುಲ್ ಬಾಲಾಜಿ ಅವರ ಒಂದು ಕೈಯಲ್ಲಿ ವೀರ ಸೈನಿಕನ ಮಗಳು ನಿವೇದಿತಾ ಇದ್ದರೆ, ಮತ್ತೊಂದು ಕೈಯಲ್ಲಿ ‘ಬೆಂಕಿ ಬೇಬಿ’ ಖ್ಯಾತಿಯ ಬಿಬಿ ಹಾಜಿರಾ ನಿಂತಿದ್ದಾರೆ.
ಇವರಿಬ್ಬರಲ್ಲಿ ಅಂತಿಮವಾಗಿ ಟ್ರೋಫಿ ಗೆದ್ದವರು ಯಾರು ಎಂಬುದು ಈ ಲೀಕ್ ಆಗಿರುವ ವಿಡಿಯೋಗಳ ಮೂಲಕ ಬಹಿರಂಗವಾಗಿದೆ. ಆದರೂ ವಾಹಿನಿಯ ಕಡೆಯಿಂದ ಅಧಿಕೃತ ಘೋಷಣೆ ಹೊರಬೀಳಬೇಕಿದೆ.
‘ಹಳ್ಳಿ ಪವರ್ ರೀಲೋಡೆಡ್’ ವಿನ್ನರ್ ಮತ್ತು ರನ್ನರ್ ಅಪ್ ಯಾರು?
ಈ ರಿಯಾಲಿಟಿ ಶೋ ಶುರುವಾಗಿ ಹೆಚ್ಚು ಕಡಿಮೆ ಮೂರು ತಿಂಗಳುಗಳು ಕಳೆದಿವೆ. ಈ ಮೂರು ತಿಂಗಳ ಅವಧಿಯಲ್ಲಿ ಸ್ಪರ್ಧಿಗಳಿಗೆ ನೀಡಲಾದ ಹಳ್ಳಿ ಸೊಗಡಿನ ಟಾಸ್ಕ್ಗಳು ತುಂಬಾನೇ ಅದ್ಭುತವಾಗಿದ್ದವು.
‘ಬಿಗ್ ಬಾಸ್ ಸೀಸನ್ 13’ ಗಿಂತಲೂ ‘ಹಳ್ಳಿ ಪವರ್ ರೀಲೋಡೆಡ್’ ಶೋ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇಡೀ ಸೀಸನ್ನಲ್ಲಿ ವೀರ ಸೈನಿಕನ ಮಗಳು ನಿವೇದಿತಾ ರೈ ಅತ್ಯುತ್ತಮವಾಗಿ ಆಟವಾಡಿದ್ದರು.
ಎರಡ್ಮೂರು ಬಾರಿ ಶೋದ ‘ರಾಣಿ’ ಪಟ್ಟವನ್ನೂ ನಿವೇದಿತಾ ಮುಡಿಗೇರಿಸಿಕೊಂಡಿದ್ದರು. ಇತ್ತ ಬಿಬಿ ಹಾಜಿರಾ ತಮ್ಮ ನೆಗೆಟಿವ್ ವರ್ತನೆ ಹಾಗೂ ಜಗಳಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು. ಅಂತಿಮವಾಗಿ ನಿವೇದಿತಾ ವಿನ್ನರ್ ಆಗಿ ಹೊರಹೊಮ್ಮಿದ್ದು, ಬೆಂಕಿ ಬೇಬಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
Halli Power Reloaded: ಆಗಸ್ಟ್ 8ರಿಂದ ಶುರುವಾದ ಜರ್ನಿ, ಮೊದಲ ಸೀಸನ್ ಹೇಗಿತ್ತು?
‘ಹಳ್ಳಿ ಪವರ್ ರೀಲೋಡೆಡ್’ ಶೋನ ಮೊದಲ ಸಂಚಿಕೆ ಕಳೆದ ಆಗಸ್ಟ್ 8ರಂದು ಪ್ರಸಾರವಾಗಿತ್ತು. ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅವರು ತಮ್ಮ ಎಂದಿನ ಶೈಲಿಯಲ್ಲಿ ಈ ಶೋವನ್ನು ಅದ್ಭುತವಾಗಿ ನಿರೂಪಣೆ ಮಾಡಿದ್ದಾರೆ.
ಐತಿಹಾಸಿಕ ತಾಣ ಐಹೊಳೆಯಲ್ಲಿ ಈ ಶೋ ನಡೆದಿದ್ದು, ಸ್ಥಳೀಯ ಹಳ್ಳಿಯ ಜನರು ಕೂಡ ಸ್ಪರ್ಧಿಗಳಿಗೆ ಭರ್ಜರಿ ಸಾಥ್ ನೀಡಿದ್ದರು. ಸ್ನೇಹಾ ಗೌಡ, ನಿವೇದಿತಾ ರೈ, ಬಿಬಿ ಹಾಜಿರಾ, ಚಿತ್ರಶ್ರೀ ನಾಯ್ಡು, ಪೂಜಾ ಚಂದ್ರಶೇಖರ್ ಸೇರಿದಂತೆ ಒಟ್ಟು 16 ಸ್ಪರ್ಧಿಗಳು ಈ ಶೋಗೆ ಆಯ್ಕೆಯಾಗಿದ್ದರು.
ಇನ್ನು ‘ಹಳ್ಳಿ ಪವರ್’ ಮೊದಲ ಸೀಸನ್ ಬೆಳಗಾವಿ ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಊರು ಸಂಗೊಳ್ಳಿಯಲ್ಲಿ ಸುಮಾರು ನಾಲ್ಕು ತಿಂಗಳು ನಡೆದಿತ್ತು. ಆ ಸೀಸನ್ ‘ಜೀ ಪವರ್’ ಚಾನೆಲ್ನಲ್ಲಿ ಪ್ರಸಾರವಾಗಿತ್ತು. ಆದರೆ ಈ ಬಾರಿಯ ‘ರೀಲೋಡೆಡ್’ ಸೀಸನ್ ‘ಜೀ ಕನ್ನಡ’ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಹಾಗೂ ವಾರಾಂತ್ಯದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು.




