ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ (PM Modi) ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಮೆಟ್ರೋ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10.05ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, 10.45ಕ್ಕೆ ಪ್ರಶಾಂತಿ ಕುಟೀರಂನಲ್ಲಿ ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮಧ್ಯಾಹ್ನ 12.40ಕ್ಕೆ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ತಲುಪಿ, 12.45ಕ್ಕೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಲಿದ್ದಾರೆ. ಬಳಿಕ 12.50ಕ್ಕೆ ತಾವರೆಕೆರೆಯಿಂದ ಐಐಎಂಬಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣ ಮಾಡಲಿದ್ದಾರೆ. ಮಧ್ಯಾಹ್ನ 1.15ಕ್ಕೆ ಐಐಎಂಬಿ ಆಡಿಟೋರಿಯಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ.
ಮೈಸೂರಿನಲ್ಲೂ ಭಾರತ್ ವ್ಯಾನ್ ಕಾರ್ಯಕ್ರಮ !
ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳುವ ಪ್ರಧಾನಿ, 3.30ಕ್ಕೆ ಕೆ.ಸಿ. ಲೇಔಟ್ ಪಾರ್ಕ್‌ನಲ್ಲಿ ನಡೆಯುವ ಭಾರತ್ ವ್ಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಮೈಸೂರು ಕಾಸ್ಮಾಸ್ ಮತ್ತು ಪ್ಲಾನೆಟೋರಿಯಂ ಉದ್ಘಾಟಿಸಿ, ಸಂಜೆ 6.05ಕ್ಕೆ ಮೈಸೂರಿನಿಂದ ನೇರವಾಗಿ ದೆಹಲಿಗೆ ವಾಪಸ್ ಆಗಲಿದ್ದಾರೆ. ಈ ಭೇಟಿಗಾಗಿ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಮೂವರು ಜಂಟಿ ಆಯುಕ್ತರು, 15 ಡಿಸಿಪಿಗಳು, 20 ಎಸಿಪಿಗಳು, 30 ಇನ್‌ಸ್ಪೆಕ್ಟರ್‌ಗಳು, 100ಕ್ಕೂ ಹೆಚ್ಚು ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ 1000ಕ್ಕೂ ಹೆಚ್ಚು ಸಿವಿಲ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹತ್ತು ದಿನಗಳ ಹಿಂದೆಯೇ ಎಸ್‌ಪಿಜಿ ತಂಡ ಬೆಂಗಳೂರಿಗೆ ಬಂದು ಮಾರ್ಗ, ಮೆಟ್ರೋ, ನಿಲ್ದಾಣ ಮತ್ತು ವೇದಿಕೆ ಸ್ಥಳಗಳನ್ನು ಪರಿಶೀಲಿಸಿದೆ. ಸಂಚಾರ ಮಾರ್ಗದಲ್ಲಿ ಸಿಸಿಟಿವಿ ಅಳವಡಿಕೆ, ಎತ್ತರದ ಕಟ್ಟಡಗಳ ಮೇಲೆ ನಿಗಾ, ಹೈ ರಿಸ್ಕ್ ಅಪಾರ್ಟ್‌ಮೆಂಟ್‌ಗಳ ಪರಿಶೀಲನೆ, ಹೊಸ ನಿವಾಸಿಗಳ ಬಗ್ಗೆ ಮಾಹಿತಿ ನೀಡುವ ಸೂಚನೆ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಸೇರಿದಂತೆ ಸಂಪೂರ್ಣ ಸಿದ್ಧತೆ ಮಾಡಲಾಗಿದೆ.
ಇದನ್ನೂ ಓದಿ : ಮೋದಿ ಕಾರ್ಯಕ್ರಮದಲ್ಲಿ ಕೃಷ್ಣಬೈರೇಗೌಡ ಭಾಷಣ ರದ್ದು ..!
ಪ್ರಧಾನಿ ಮೋದಿ ಈ ಒಂದು ದಿನದ ಪ್ರವಾಸ ಬೆಂಗಳೂರಿನ ಸಾರಿಗೆ ಮತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ್ದಾಗಿದೆ. ಪಿಂಕ್ ಲೈನ್ ಆರಂಭದಿಂದ ದಕ್ಷಿಣ ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರಿಗೆ ಸಂಚಾರ ಸುಗಮವಾಗಲಿದ್ದು, ಟ್ರಾಫಿಕ್ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ಹೊಸ ವಂದೇ ಭಾರತ್ ರೈಲು ಕರಾವಳಿ ಮತ್ತು ಬೆಂಗಳೂರು ನಡುವಿನ ಸಂಪರ್ಕವನ್ನು ವೇಗಗೊಳಿಸಲಿದೆ. ಮೈಸೂರಿನಲ್ಲಿ ಭಾರತ್ ವ್ಯಾನ್ ಮತ್ತು ಪ್ಲಾನೆಟೋರಿಯಂ ಕಾರ್ಯಕ್ರಮಗಳು ಪ್ರವಾಸೋದ್ಯಮ ಮತ್ತು ವಿಜ್ಞಾನ ಆಸಕ್ತಿಗೆ ಹೊಸ ಉತ್ತೇಜನ ನೀಡಬಹುದು. ಆದರೆ ಇಂತಹ ದೊಡ್ಡ ಉದ್ಘಾಟನೆಗಳು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಯೋಜನೆಗಳು ಸಮಯಕ್ಕೆ ಪೂರ್ಣಗೊಂಡು ಜನರಿಗೆ ನಿರಂತರ ಸೇವೆ ಸಿಗುವಂತೆ ನೋಡಿಕೊಳ್ಳುವುದು ಮುಖ್ಯ. ಭದ್ರತೆಗಾಗಿ ಮಾಡುವ ಬಿಗಿ ವ್ಯವಸ್ಥೆ ಅಗತ್ಯವಾದರೂ, ಸಾಮಾನ್ಯ ಜನರ ದೈನಂದಿನ ಓಡಾಟಕ್ಕೆ ತೊಂದರೆಯಾಗದಂತೆ ಸಂಚಾರ ನಿರ್ವಹಣೆ ಮಾಡಬೇಕಾದ ಜವಾಬ್ದಾರಿಯೂ ಆಡಳಿತದ ಮೇಲಿದೆ.




