ಕನ್ನಡಿಗರಿಗೆ ಯಾವಾಗಲೂ ಹೊಸ ಬಗೆಯ ಧಾರಾವಾಹಿಗಳನ್ನು ನೀಡುವಲ್ಲಿ ಸ್ಟಾರ್ ಸುವರ್ಣ ವಾಹಿನಿ (Star Suvarna Serial) ಸದಾ ಹೆಜ್ಜೆ ಇಡುತ್ತಿದೆ. ಇದೀಗ ವೀಕ್ಷಕರಿಗಾಗಿ ಮತ್ತೊಂದು ಹೊಸ ಕಥೆಯೊಂದಿಗೆ ಬರಲು ಸಜ್ಜಾಗಿದೆ.
ಭಿನ್ನ ಮನಸುಗಳು ಹಾಗೂ ವಿಭಿನ್ನ ನಂಬಿಕೆಗಳ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಈ ಅಪರೂಪದ ಕಥೆಗೆ ‘ಓ ಮನಸೇ’ ಎಂದು ಹೆಸರಿಸಲಾಗಿದೆ.
ಇದೇ ನವೆಂಬರ್ 10ರಿಂದ ಪ್ರತಿದಿನ ರಾತ್ರಿ 8.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.
ರಾಗಾ ಮತ್ತು ರಿಷಿಯ ವಿಭಿನ್ನ ಲೋಕ
ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾ ನಾಯಕಿ ರಾಗಾಗೆ ಶಿಕ್ಷಣವೇ ಜೀವ ಹಾಗೂ ಪುಸ್ತಕ ಓದುವುದು ಹವ್ಯಾಸವಾಗಿದೆ. ಶಿಕ್ಷಣವೆಂದರೆ ಸ್ವಾತಂತ್ರ್ಯದ ಹಾದಿ ಎಂದು ನಂಬಿರುವ ರಾಗಾಳಿಗೆ ಸ್ವಂತ ಅಪ್ಪನೇ ತಡೆಗೋಡೆಯಾಗಿದ್ದಾರೆ.
ಮತ್ತೊಂದೆಡೆ ಶ್ರೀಮಂತ ಕುಟುಂಬದ ಕಥಾನಾಯಕ ರಿಷಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಪ್ರೀತಿ ಎಂಬ ಪದದ ಮೇಲೆ ನಂಬಿಕೆ ಇಲ್ಲದವರು. ತಾಯಿ ಕಲ್ಯಾಣಿಯ ಪ್ರೀತಿಯಿಂದ ದೂರವಾಗಿರುವ ರಿಷಿ ತನ್ನೆಲ್ಲಾ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ.
ವಿರುದ್ಧ ದಿಕ್ಕಿನ ವ್ಯಕ್ತಿತ್ವ ಹೊಂದಿರುವ ಈ ಜೋಡಿಯ ಬದುಕಿನ ಪಯಣ ಹೇಗೆ ಸಾಗುತ್ತದೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕುತೂಹಲವಾಗಿದೆ.
ತಾರಾಬಳಗ ಹಾಗೂ ನಿರ್ದೇಶನದ ವಿಶೇಷತೆ
ಈ ಧಾರಾವಾಹಿಯಲ್ಲಿ ನಾಯಕ ರಿಷಿ ಪಾತ್ರದಲ್ಲಿ ದರ್ಶಕ್ ಗೌಡ ಹಾಗೂ ನಾಯಕಿ ರಾಗಾ ಪಾತ್ರದಲ್ಲಿ ಮಧುಮಿತಾ ಗೌಡ ಅಭಿನಯಿಸುತ್ತಿದ್ದಾರೆ.
ಜೊತೆಗೆ ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ಈ ಅಸಾಧ್ಯ ಪ್ರೇಮಕಥೆಯಲ್ಲಿ ನಟಿಸುತ್ತಿದ್ದಾರೆ.
‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಗಣಪತಿ ಭಟ್ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಬಿ. ಮಧುಸೂದನ್ ಅವರು ನಿರ್ದೇಶನ ಮಾಡಿದ್ದಾರೆ.
Star Suvarna Serial: ‘ವಸುದೇವ ಕುಟುಂಬ’ ಪ್ರಸಾರ ಸಮಯದಲ್ಲಿ ಬದಲಾವಣೆ
ಈ ಹೊಸ ಧಾರಾವಾಹಿಯ ಆಗಮನದಿಂದಾಗಿ ನಿಮ್ಮ ನೆಚ್ಚಿನ ‘ವಸುದೇವ ಕುಟುಂಬ’ ಧಾರಾವಾಹಿಯ ಸಮಯ ಬದಲಾಗಿದೆ. ಇದೇ ನವೆಂಬರ್ 10ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ‘ವಸುದೇವ ಕುಟುಂಬ’ ಧಾರಾವಾಹಿಯು ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ.




