ಕನ್ನಡ ಚಿತ್ರರಂಗದಲ್ಲಿ ತಮ್ಮ ಸೌಂದರ್ಯ ಹಾಗೂ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ನಟಿ ದೀಪಾ ಸನ್ನಿಧಿ (Deepa Sannidhi) ಸುದೀರ್ಘ ಮೌನದ ನಂತರ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ನೂತನ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ದರ್ಶನ್ ಅಭಿನಯದ ‘ಸಾರಥಿ’, ‘ಚಕ್ರವರ್ತಿ’, ಪುನೀತ್ ರಾಜ್‌ಕುಮಾರ್ ಅವರ ‘ಪರಮಾತ್ಮ’ ಹಾಗೂ ಯಶ್ ನಟನೆಯ ‘ಜಾನು’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಈ ಚೆಲುವೆ 2017ರಲ್ಲಿ ಇದ್ದಕ್ಕಿದ್ದಂತೆ ನಟನೆಯಿಂದ ದೂರವಾಗಿದ್ದರು.
ದಶಕಗಳ ಬಳಿಕ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ತಮ್ಮ ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅವರ ಲೇಟೆಸ್ಟ್ ಫೋಟೋ ಈಗ ಸಖತ್ ವೈರಲ್ ಆಗಿದೆ.
ಸೆಲ್ಫಿ ಮುಜುಗರದ ನಡುವೆಯೂ ಫ್ಯಾನ್ಸ್‌ಗೆ ದೀಪಾ ಕೃತಜ್ಞತೆ
ಇನ್‌ಸ್ಟಾಗ್ರಾಮ್‌ನಲ್ಲಿ ಹಾಫ್ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿರುವ ಫೋಟೋ ಶೇರ್ ಮಾಡಿರುವ ದೀಪಾ ಸನ್ನಿಧಿ, ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. “ಬಹಳ ದಿನಗಳ ಮೌನದ ನಂತರ ಮತ್ತೆ ಬಂದಿದ್ದೇನೆ. ನನಗೆ ಇಂದಿಗೂ ಸೆಲ್ಫಿ ತೆಗೆದುಕೊಳ್ಳಲು ಮುಜುಗರವಾಗುತ್ತದೆ” ಎಂದು ಬರೆದುಕೊಂಡಿದ್ದಾರೆ.
“ಆದರೆ ನಿಮ್ಮ ಪ್ರೀತಿ ಮತ್ತು ಸಂದೇಶಗಳನ್ನು ನೋಡಿ ಬೇಡ ಎಂದು ಹೇಳಲು ಸಾಧ್ಯವಾಗಲಿಲ್ಲ. ಈ ಫೋಟೋ ನಿಮಗಾಗಿ. ನನ್ನ ಮೇಲೆ ಇಷ್ಟೊಂದು ಅಪಾರವಾದ ಪ್ರೀತಿಯನ್ನು ಇಟ್ಟಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ನಾನು ನಿಮಗೆ ಎಂದಿಗೂ ಚಿರಋಣಿ” ಎಂದು ಭಾವುಕರಾಗಿ ಶೀರ್ಷಿಕೆ ಬರೆದಿದ್ದಾರೆ.
ಆದರೆ ತಮ್ಮ ಕುಟುಂಬ ಹಾಗೂ ಯಾವುದೇ ವೈಯಕ್ತಿಕ ವಿಚಾರಗಳ ಬಗ್ಗೆ ನಟಿ ಎಲ್ಲೂ ಮಾಹಿತಿ ಹಂಚಿಕೊಂಡಿಲ್ಲ. ಇಷ್ಟು ವರ್ಷಗಳ ಬಳಿಕ ತಮ್ಮ ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಸಂಭ್ರಮಿಸುತ್ತಿದ್ದಾರೆ.
Deepa Sannidhi: ‘ಸಾರಥಿ’ಯಿಂದ ‘ಚಕ್ರವರ್ತಿ’ಯವರೆಗೆ; ಸೂಪರ್ ಹಿಟ್ ಸಿನಿಮಾಗಳು
2011ರಲ್ಲಿ ದರ್ಶನ್ ಅಭಿನಯದ ‘ಸಾರಥಿ’ ಸಿನಿಮಾ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದೀಪಾ ಸನ್ನಿಧಿ, ಮೊದಲ ಚಿತ್ರದಲ್ಲೇ ಅಪಾರ ಜನಪ್ರಿಯತೆ ಗಳಿಸಿದರು. ನಂತರ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ‘ಪರಮಾತ್ಮ’, ಯಶ್ ಜೊತೆ ‘ಜಾನು’ ಹಾಗೂ ಗಣೇಶ್ ಅವರೊಂದಿಗೆ ‘ಸಕ್ಕರೆ’ ಸಿನಿಮಾಗಳಲ್ಲಿ ನಟಿಸಿದರು.
ಅದರ ಜೊತೆಗೆ ‘ಎಂದೆಂದು ನಿನ್ನಗಾಗಿ’, ‘ಚೌಕ’ ಸಿನಿಮಾಗಳಲ್ಲಿ ನಟಿಸಿದ್ದ ಅವರು, 2017ರಲ್ಲಿ ತೆರೆಕಂಡ ದರ್ಶನ್ ಅವರ ‘ಚಕ್ರವರ್ತಿ’ ಚಿತ್ರದ ನಂತರ ನಟನೆಯಿಂದ ಸಂಪೂರ್ಣವಾಗಿ ಬ್ರೇಕ್ ತೆಗೆದುಕೊಂಡು ಚಿತ್ರರಂಗದಿಂದ ದೂರ ಉಳಿದಿದ್ದರು.
‘ಸಾರಥಿ’ ಚಿತ್ರದ ‘ಐತಲಕ್ಕಡಿ’ ಹಾಗೂ ‘ಪರಮಾತ್ಮ’ ಸಿನಿಮಾದ ‘ಪರವಶನಾದೇನು’ ಮುಂತಾದ ಸೂಪರ್ ಹಿಟ್ ಗೀತೆಗಳು ದೀಪಾ ಸನ್ನಿಧಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು, ಇಂದಿಗೂ ಆ ಹಾಡುಗಳನ್ನು ಕನ್ನಡಿಗರು ಗುನುಗುತ್ತಿದ್ದಾರೆ.




