ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ನಿನ್ನೆ (ನವೆಂಬರ್ 06) ಹಾಸನದ ಪ್ರಖ್ಯಾತ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಈ ವೇಳೆ ಹಾಸನಾಂಬೆ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದ ಕೆಲ ಭಕ್ತಾಧಿಕಾರಿಗಳು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆ ನಡೆಯಿತು. ಸಿದ್ದರಾಮಯ್ಯ ವಿರುದ್ಧ ಕೆಲ ಯುವಕರು, ಮಹಿಳೆಯರು ಧಿಕ್ಕಾರ ಕೂಗುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸಿದ್ದರಾಮಯ್ಯ ಅವರು ನಿನ್ನೆ (ನವೆಂಬರ್ 06)ರ ಸಂಜೆ ಸುಮಾರು 6:30ರ ವೇಳೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆಗಾಗಲೆ ಭಾರಿ ಜನಜಂಗುಳಿ ದೇವಾಲಯದಲ್ಲಿ ಇತ್ತು. 1000 ರೂಪಾಯಿ ಟಿಕೆಟ್ ಪಡೆದುಕೊಂಡು ವಿಶೇಷ ದರ್ಶನಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಅವರೊಟ್ಟಿಗೆ ಹಾಸನ ಸಂಸದ ಶ್ರೇಯಸ್ ಎಂ ಪಾಟೀಲ್ ಹಾಗೂ ಕೆ ಶಿವಲಿಂಗೇಗೌಡ ಜೊತೆಗಿದ್ದರು. ದೇವಾಲಯಕ್ಕೆ ಹೋದ ಸಿದ್ದರಾಮಯ್ಯ ಅವರು ಗರ್ಭಗುಡಿಗೆ ತೆರಳಿ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದರು. ಆದರೆ ಅವರು ಹೊರಗೆ ಬರಲು ಸಾಕಷ್ಟು ಸಮಯ ಹಿಡಿಯಿತು.
ಸಿದ್ದರಾಮಯ್ಯ ಅವರು ದೇವಾಲಯಕ್ಕೆ ಹೋದಾಗಿನಿಂದ ಹೊರಗೆ ಬರುವವರೆಗೆ ಇತರೆ ಭಕ್ತಾದಿಗಳ ದರ್ಶನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ದರ್ಶನಕ್ಕಾಗಿ ಮೂರು-ನಾಲ್ಕು ಗಂಟೆಗಳಿಂದ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತಾದಿಗಳಿಗೆ ಆಗುತ್ತಿರುವ ವಿಳಂಬದಿಂದ ಬೇಸತ್ತು ಸಿದ್ದರಾಮಯ್ಯ ವಿರುದ್ಧ ಸಿಟ್ಟು ಹೊರಹಾಕಲು ಆರಂಭಿಸಿದರು, ಸಿದ್ದರಾಮಯ್ಯಗೆ ಧಿಕ್ಕಾರಗಳನ್ನು ಕೂಗಲು ಆರಂಭಿಸಿದರು. ಸರತಿ ಸಾಲಿನಲ್ಲಿ ನಿಂತಿದ್ದ ಹಲವು ಯುವಕರು, ಮಹಿಳೆಯರು ಸಿದ್ದರಾಮಯ್ಯ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಇದನ್ನೂ ಓದಿ: ರಾಹುಲ್ ಸಭೆಗೆ ಸಿದ್ದರಾಮಯ್ಯ ಗೈರು – ಹೈಕಮಾಂಡ್ ಗೆ ಪರೋಕ್ಷ ಸಂದೇಶ ..?
ಘಟನೆ ನಡೆದಾಗ ಹಾಜರಿದ್ದ ಯುವಕರೊಬ್ಬರು ‘ಕಲ್ಟ್ ಕನ್ನಡ’ದೊಟ್ಟಿಗೆ ಮಾತನಾಡಿದ್ದು, ‘ನಾವು ಸುಮಾರು ಮಧ್ಯಾಹ್ನದ ವೇಳೆ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದೆವು, ಇನ್ನೇನು ನಮಗೆ ದರ್ಶನ ಸಿಗುತ್ತದೆ ಎಂದುಕೊಳ್ಳುತ್ತಿರುವಾಗಲೇ ಸಿದ್ದರಾಮಯ್ಯ ಅವರು ದರ್ಶನಕ್ಕೆ ಬಂದರು. ದರ್ಶನಕ್ಕೆ ಬಂದವರು ಬಹಳ ಸಮಯ ಹೋಗಲೇ ಇಲ್ಲ. ಹೆಚ್ಚು ಸಮಯವನ್ನು ಅವರು ತೆಗೆದುಕೊಂಡರು. ಇದರಿಂದಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತಾಧಿಗಳು ಧಿಕ್ಕಾರಗಳನ್ನು ಕೂಗಿದರು’ ಎಂದರು.
ದರ್ಶನದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ‘ನಾನು ನಾಸ್ತಿಕನಲ್ಲ, ಆಸ್ತಿಕ, ನನಗೆ ದೇವರ ಮೇಲೆ ಭಕ್ತಿ ಇದೆ. ಹಲವು ವರ್ಷಗಳಿಂದಲೂ ನಾನು ಹಾಸನಾಂಬೆ ದೇವರ ದರ್ಶನ ಮಾಡುತ್ತಾ ಬಂದಿದ್ದೇನೆ’ ಎಂದಿದ್ದಾರೆ. ಅಸಲಿಗೆ ವಿಐಪಿ ದರ್ಶನ ಬೆಳಿಗ್ಗೆ 10:30 ರಿಂದ 12:30ರ ವರೆಗೆ ಇದೆ. ಆ ಅವಧಿ ಮುಗಿದಿದ್ದರೂ ಸಿದ್ದರಾಮಯ್ಯ ಅವರಿಗೆ 1000 ರೂಪಾಯಿ ಟಿಕೆಟ್ ಅಡಿಯಲ್ಲಿ ವಿಐಪಿ ದರ್ಶನಕ್ಕೆ ಅನುಮತಿ ನೀಡಿದ್ದರ ಬಗ್ಗೆ ಟೀಕೆ, ವಿಮರ್ಶೆ ಕೇಳಿ ಬರುತ್ತಿದೆ.




