ನವದೆಹಲಿ : ಭಾರತೀಯ ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರಿಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ. ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ವಿವಿಧ ಕಾರಣಗಳಿಂದ ಹೆಸರು ಕೈಬಿಟ್ಟು ಹೋದವರಿಗೆ ಇದೇ ಕೊನೆಯ ಅವಕಾಶವಾಗಿದ್ದು, ಸದ್ಯ ಏಳು ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ, ನಾಗಾಲ್ಯಾಂಡ್ ಮತ್ತು ದೆಹಲಿಯಲ್ಲಿ ಈ ಸೌಲಭ್ಯ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ತಾಂತ್ರಿಕ ದೋಷ ಸೇರಿದಂತೆ ಯಾವುದೇ ಕಾರಣಕ್ಕೂ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎನ್ನುವುದೇ ಆಯೋಗದ ಉದ್ದೇಶವಾಗಿದೆ.
ಎಪಿಕ್ ಸಂಖ್ಯೆಯನ್ನು ಬಳಸಿ ನಮೂನೆ ಭರ್ತಿ ಮಾಡಬೇಕು..!
ಹೆಸರು ಕೈಬಿಡಲ್ಪಟ್ಟವರು ಅಂತಿಮ ಪಟ್ಟಿಯಲ್ಲಿ ಸೇರಲು ಹಳೆಯ ಎಪಿಕ್ ಸಂಖ್ಯೆಯನ್ನು ಬಳಸಿ ನಮೂನೆಗಳನ್ನು ಭರ್ತಿ ಮಾಡಬೇಕು. ಖುದ್ದಾಗಿ ಅಥವಾ ಇಸಿಐನೆಟ್ ಪೋರ್ಟಲ್ ಹಾಗೂ ಆ್ಯಪ್ ಮೂಲಕ ಮತ್ತೆ ಅರ್ಜಿ ಸಲ್ಲಿಸಬಹುದು. ಯಾರ ಹೆಸರು ಬಿಟ್ಟುಹೋಗಿದೆ ಎನ್ನುವ ವಿವರವನ್ನು ಕಾರಣ ಸಮೇತ ಮತಗಟ್ಟೆ, ಪಂಚಾಯತ್ ಭವನ, ಸ್ಥಳೀಯ ಸಂಸ್ಥೆಗಳು ಮತ್ತು ಸಿಇಒ ವೆಬ್ಸೈಟ್ಗಳಲ್ಲಿ ಪಿಡಿಎಫ್ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈ ಕೆಲಸಕ್ಕಾಗಿ ಬೂತ್ ಮಟ್ಟದ ಅಧಿಕಾರಿಗಳೇ ನೇರವಾಗಿ ಮತದಾರರನ್ನು ಸಂಪರ್ಕಿಸಿ ನಮೂನೆಗಳನ್ನು ನೀಡಲಿದ್ದಾರೆ. ವಾಟ್ಸ್ಆ್ಯಪ್, ಎಸ್ಎಂಎಸ್ ಮತ್ತು ಇ-ಮೇಲ್ ಮೂಲಕವೂ ಮಾಹಿತಿ ತಲುಪಿಸಲಾಗುತ್ತದೆ. ಒಂದೇ ರಾಜ್ಯದೊಳಗೆ ವಿಳಾಸ ಬದಲಾಯಿಸಿಕೊಂಡವರು ನಮೂನೆ-8 ಸಲ್ಲಿಸಬೇಕಿಲ್ಲ, ಹೊಸ ವಿಳಾಸದ ಪುರಾವೆ ನೀಡಿದರೆ ಸಾಕು. ಯಾವುದೇ ದಾಖಲೆ ಇಲ್ಲದ ವಸತಿಹೀನರಿಗೆ ಬಿಎಲ್ಒಗಳು ಸ್ಥಳ ಪರಿಶೀಲನೆ ನಡೆಸಿ ನೀಡುವ ವರದಿಯನ್ನೇ ವಿಳಾಸದ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ. ಅರ್ಹರನ್ನು ಸೇರಿಸುವ ಜೊತೆಗೆ ನಕಲಿ ನೋಂದಣಿಗೆ ಕಡಿವಾಣ ಹಾಕುವಂತೆ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದನ್ನೂ ಓದಿ :ವೋಟ್ ಮಾತ್ರವಲ್ಲ..ಜನರ ಹಕ್ಕುಗಳು ಕಳುವಾಗಿದೆ : ರಾಹುಲ್ ಗಾಂಧಿ
ಚುನಾವಣಾ ಆಯೋಗದ ಈ ನಿರ್ಧಾರ ತಡವಾಗಿಯಾದರೂ ಸರಿಯಾದ ದಿಕ್ಕಿನ ಹೆಜ್ಜೆ ಎನ್ನಬಹುದು. ಏಕೆಂದರೆ ಸಮಗ್ರ ಪರಿಷ್ಕರಣೆಯಂತಹ ದೊಡ್ಡ ಪ್ರಕ್ರಿಯೆಯಲ್ಲಿ ಸಣ್ಣ ತಾಂತ್ರಿಕ ಲೋಪದಿಂದಲೂ ಸಾವಿರಾರು ನಿಜವಾದ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯವಿರುತ್ತದೆ. ಅದರಲ್ಲೂ ವಲಸೆ ಕಾರ್ಮಿಕರು, ಬಾಡಿಗೆ ಮನೆ ಬದಲಾಯಿಸುವವರು ಮತ್ತು ದಾಖಲೆ ಇಲ್ಲದ ಬಡವರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಈಗ ಬಿಎಲ್ಒಗಳ ಮೂಲಕ ನೇರ ಸಂಪರ್ಕ, ಆನ್ಲೈನ್ ಸೌಲಭ್ಯ ಮತ್ತು ವಸತಿಹೀನರಿಗೆ ಸ್ಥಳ ಪರಿಶೀಲನೆಯ ಅವಕಾಶ ನೀಡಿರುವುದು ಆತಂಕವನ್ನು ಕಡಿಮೆ ಮಾಡುತ್ತದೆ. ಆದರೆ ಈ ಸೌಲಭ್ಯದ ಬಗ್ಗೆ ಎಲ್ಲರಿಗೂ ಸರಿಯಾದ ಸಮಯಕ್ಕೆ ಮಾಹಿತಿ ತಲುಪುವುದು ಮತ್ತು ಅರ್ಜಿ ಪ್ರಕ್ರಿಯೆ ಸರಳವಾಗಿರುವುದು ಮುಖ್ಯ. ಇಲ್ಲದಿದ್ದರೆ ಕೊನೆಯ ಅವಕಾಶವೂ ಕಾಗದದ ಮೇಲಷ್ಟೇ ಉಳಿಯುತ್ತದೆ. ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಿಗೂ ಶೀಘ್ರ ವಿಸ್ತರಣೆಯಾದರೆ ಮಾತ್ರ ಈ ಕ್ರಮಕ್ಕೆ ಪೂರ್ಣ ಅರ್ಥ ಬರುತ್ತದೆ.




