ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana Movie Set) ಸಿನಿಮಾವು ಅತ್ಯಂತ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ದಿನದಿಂದ ದಿನಕ್ಕೆ ಸಿನಿಮಾ ಕುರಿತು ಶಾಕಿಂಗ್ ವಿಚಾರಗಳು ಹೊರಬರುತ್ತಿವೆ.
ಈ ಚಿತ್ರದ ಭವ್ಯ ಜಗತ್ತನ್ನು ಕೇವಲ ಗ್ರೀನ್ ಸ್ಕ್ರೀನ್ ಅಥವಾ ವಿಎಫ್‌ಎಕ್ಸ್ ಮೂಲಕ ಮಾತ್ರ ಸೃಷ್ಟಿಸಿಲ್ಲ. ಬದಲಿಗೆ ವೀಕ್ಷಕರಿಗೆ ಸಂಪೂರ್ಣ ನೈಜ ಅನುಭವ ನೀಡಲು ಬೃಹತ್ ಹಾಗೂ ಅದ್ದೂರಿ ಸೆಟ್‌ಗಳನ್ನು ಹಾಕಲಾಗಿದೆ.
ರಾವಣನ ಸಿಂಹಾಸನದಿಂದ ಹಿಡಿದು ಶೂರ್ಪಣಖಿಯ ರಥದವರೆಗೆ ಎಲ್ಲವನ್ನೂ ನುರಿತ ತಜ್ಞರಿಂದ ಕೈಯಿಂದಲೇ ನಿರ್ಮಿಸಲಾಗಿದೆ. ಸಿನಿಮಾದ ಆರ್ಟ್ ಡಿಪಾರ್ಟ್‌ಮೆಂಟ್ ತಂತ್ರಜ್ಞರು ಹಲವು ತಿಂಗಳುಗಳ ಕಾಲ ನಿರಂತರ ಶ್ರಮಿಸಿ ಈ ಭವ್ಯ ಸೆಟ್‌ಗಳನ್ನು ಸಿದ್ಧಪಡಿಸಿದ್ದಾರೆ.
ಮುಂಬೈ ಫಿಲ್ಮ್ ಸಿಟಿಯಲ್ಲಿ 150ಕ್ಕೂ ಹೆಚ್ಚು ಭವ್ಯ ಸೆಟ್‌ಗಳು
ಮುಂಬೈನ ಪ್ರಸಿದ್ಧ ಫಿಲ್ಮ್ ಸಿಟಿಯಲ್ಲಿ ಈ ರಾಮಾಯಣ ಸಿನಿಮಾಗಾಗಿ ಬರೋಬ್ಬರಿ 150ಕ್ಕೂ ಹೆಚ್ಚು ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗಿದೆ. 2024ರ ಏಪ್ರಿಲ್ ತಿಂಗಳಿನಿಂದಲೇ ಈ ಅದ್ದೂರಿ ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು.
ಪ್ರತಿಯೊಂದು ವಿನ್ಯಾಸ ಹಾಗೂ ಪ್ರಾಪರ್ಟಿಯನ್ನು ಹಲವು ಬಾರಿ ಪರಿಶೀಲಿಸಿದ ನಂತರವೇ ಶೂಟಿಂಗ್‌ಗೆ ಬಳಸಲಾಯಿತು. ನಟ-ನಟಿಯರು ಸಂಪೂರ್ಣ ನೈಜ ವಾತಾವರಣದಲ್ಲಿ ಅಭಿನಯಿಸಲಿ ಎಂಬ ಉದ್ದೇಶದಿಂದ ನಿರ್ಮಾಪಕರು ಈ ಖರ್ಚಿನ ನಿರ್ಧಾರ ಕೈಗೊಂಡಿದ್ದರು.
ಲಂಕೆಯ ಭವ್ಯ ಸೆಟ್ ಹಾಕಲು ಪ್ರತಿದಿನ ಸುಮಾರು 500ರಿಂದ 600 ಕಾರ್ಮಿಕರು ಸತತವಾಗಿ ಕೆಲಸ ಮಾಡಿದ್ದಾರೆ. ಪ್ರತಿ ಸೆಟ್ ಅನ್ನು ಶೂಟಿಂಗ್‌ಗೆ ಬಳಸುವ ಮುನ್ನ ನಿರ್ದೇಶಕ ನಿತೇಶ್ ತಿವಾರಿ ಖುದ್ದಾಗಿ ಪರಿಶೀಲಿಸುತ್ತಿದ್ದರು.
ರಾವಣನ ಸಿಂಹಾಸನದ ಬೆಲೆ ಬರೋಬ್ಬರಿ 1 ಕೋಟಿ
ಈ ಇಡೀ ಸಿನಿಮಾದಲ್ಲಿ ಅತ್ಯಂತ ದುಬಾರಿಯಾದ ಪ್ರಾಪರ್ಟಿ ಎಂದರೆ ಅದು ಲಂಕಾಧಿಪತಿ ರಾವಣನ ಸಿಂಹಾಸನ. ಈ ಭವ್ಯ ಸಿಂಹಾಸನವನ್ನು ಸಿದ್ಧಪಡಿಸಲು ಆರ್ಟ್ ಟೀಮ್‌ಗೆ ಸುಮಾರು ನಾಲ್ಕು ತಿಂಗಳ ಸುದೀರ್ಘ ಸಮಯ ಬೇಕಾಯಿತು.
ಫೈಬರ್ ಬಳಸಿ ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಈ ಸಿಂಹಾಸನಕ್ಕೆ ನಿಜವಾದ 24 ಕ್ಯಾರಟ್ ಚಿನ್ನದ ಲೇಪನ ಮಾಡಲಾಗಿದೆ. ಇದರ ಅಂದಾಜು ನಿರ್ಮಾಣ ವೆಚ್ಚ ಬರೋಬ್ಬರಿ 1 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಇದನ್ನು ಓದಿ: Ramayana: ಚಿತ್ರಮಂದಿರಗಳಲ್ಲಿ ರಾವಣನ ಪರಾಕ್ರಮ; ಥ್ರಿಲ್ಲರ್ ದೃಶ್ಯಕ್ಕೆ ಫ್ಯಾನ್ಸ್ ಖುಷ್
ಈ ಹಣದಲ್ಲಿ ಪ್ರಾದೇಶಿಕ ಭಾಷೆಯ ಒಂದು ಸಣ್ಣ ಬಜೆಟ್ ಸಿನಿಮಾವನ್ನೇ ನಿರ್ಮಾಣ ಮಾಡಬಹುದು. ರಾವಣನ ಪಾತ್ರದ ಗಾಂಭೀರ್ಯಕ್ಕೆ ತಕ್ಕಂತೆ ಈ ಸಿಂಹಾಸನವನ್ನು ರಾಜಸಿಕವಾಗಿ ವಿನ್ಯಾಸಗೊಳಿಸಲಾಗಿದೆ.
Ramayana Movie Set: 1.5 ಕೋಟಿಯ ರಥ ಹಾಗೂ 50 ಅಡಿಯ ಪುಷ್ಪಕ ವಿಮಾನ
ಇನ್ನು ನಟಿ ಶೂರ್ಪಣಖಿಯ ರಥ ನಿರ್ಮಾಣಕ್ಕೆ ಬರೋಬ್ಬರಿ 1.5 ಕೋಟಿ ರೂಪಾಯಿ ವೆಚ್ಚವಾಗಿದೆ. ಇದು ಕೇವಲ ಶೋಕೇಸ್ ಪ್ರಾಪರ್ಟಿ ಆಗಿರದೆ, ನೈಜವಾಗಿ ಚಲಿಸುವ ರೀತಿಯಲ್ಲಿ ತಾಂತ್ರಿಕವಾಗಿ ವಿನ್ಯಾಸಗೊಳಿಸಲಾಗಿದೆ.
ಇದರ ಜೊತೆಗೆ ನಟರು ಸರಿಯಾದ ದಿಕ್ಕಿನಲ್ಲಿ ನೋಡಿ ಸಂಭಾಷಣೆ ಹೇಳಲು ಅನುಕೂಲವಾಗುವಂತೆ 24 ಅಡಿ ಎತ್ತರದ ಜಟಾಯು ಅಸ್ಥಿಪಂಜರದ ಮಾದರಿಯನ್ನು ನಿರ್ಮಿಸಲಾಗಿತ್ತು. ಇದು ಗ್ರಾಫಿಕ್ಸ್ ಕೆಲಸಕ್ಕೂ ನೆರವಾಗಿದೆ.
ಇನ್ನು 50 ಅಡಿ ಅಗಲದ ಬೃಹತ್ ಪುಷ್ಪಕ ವಿಮಾನವನ್ನು ನೇರವಾಗಿ ಸ್ಟುಡಿಯೋ ಒಳಗೆ ತರಲು ಸಾಧ್ಯವಾಗಲಿಲ್ಲ. ಹಾಗಾಗಿ ಅದನ್ನು ನಾಲ್ಕು ಪ್ರತ್ಯೇಕ ಭಾಗಗಳಾಗಿ ವಿಂಗಡಿಸಿ ಅತ್ಯಂತ ಕಲಾತ್ಮಕವಾಗಿ ನಿರ್ಮಿಸಲಾಯಿತು.




