ದಕ್ಷಿಣ ಭಾರತದ ಖ್ಯಾತ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕುಟುಂಬದಲ್ಲಿ ಇತ್ತೀಚೆಗೆ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರ ಮದುವೆ ಅದ್ಧೂರಿಯಾಗಿ ಜರುಗಿದೆ. ವಿದೇಶಿ ಉದ್ಯಮಿ ಇಸಾಯ್ ಅವರೊಂದಿಗೆ ಅಂಜನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾರತೀಯ ಸಂಪ್ರದಾಯದಂತೆ ನಡೆದ ಈ ವಿವಾಹದ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಕ್ಟೋಬರ್ 19ರಂದು ನಡೆದ ಈ ಮದುವೆ ಸಮಾರಂಭದಲ್ಲಿ ಕೆಲವೇ ಕೆಲವು ಆಪ್ತರು ಹಾಗೂ ಕುಟುಂಬದ ಹಿರಿಯರು ಮಾತ್ರ ಭಾಗವಹಿಸಿದ್ದರು.
ಈ ಮದುವೆಗೆ ನಟ ಧ್ರುವ ಸರ್ಜಾ ದಂಪತಿ ಭಾಗಿಯಾಗಿದ್ದರು. ಆದರೆ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ (Meghana Raj) ಅವರು ಈ ಸಮಾರಂಭದಲ್ಲಿ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೇಘನಾ ರಾಜ್ ಸ್ಪಷ್ಟನೆ ಏನು?
ಅರ್ಜುನ್ ಸರ್ಜಾ ಅವರ 2ನೇ ಮಗಳ ಮದುವೆಗೆ ಹೆಚ್ಚಿನ ಜನರಿಗೆ ಆಹ್ವಾನವಿರಲಿಲ್ಲ. ಬಹಳ ಕಡಿಮೆ ಜನರ ಸಮ್ಮುಖದಲ್ಲಿ ಈ ಸರಳ ವಿವಾಹ ನೆರವೇರಿದೆ. ಆದರೆ, ಈ ಮದುವೆಗೆ ಚಿರು ಪತ್ನಿ ಮೇಘನಾ ರಾಜ್ ಅವರಿಗೆ ಆಹ್ವಾನವಿರಲಿಲ್ಲವೇ ಎಂಬ ಪ್ರಶ್ನೆ ಮೂಡಿತ್ತು.
ಈ ಕುರಿತು ಸ್ವತಃ ನಟಿ ಮೇಘನಾ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನನ್ನು ಮದುವೆಗೆ ಕರೆದಿರಲಿಲ್ಲ, ಹಾಗಾಗಿ ನಾನು ಹೋಗಿರಲಿಲ್ಲ. ಧ್ರುವ ಹಾಗೂ ಪ್ರೇರಣಾ ಹೋಗಿದ್ದರು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾಕಾಗಿ ಆಹ್ವಾನಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಪ್ರಶ್ನೆಯನ್ನು ನೀವು ನನಗೆ ಕೇಳಬಾರದು, ಅವರನ್ನು ಕೇಳಬೇಕು” ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Meghana Raj: ಅರ್ಜುನ್ ಸರ್ಜಾ ಹಿರಿಯ ಅಳಿಯನೂ ಮಿಸ್ಸಿಂಗ್
ಮದುವೆಯ ಫೋಟೋಗಳು ವೈರಲ್ ಆದಾಗ ನೆಟ್ಟಿಗರು ಮತ್ತೊಂದು ಸಂಗತಿಯನ್ನು ಗಮನಿಸಿದ್ದಾರೆ. ಅರ್ಜುನ್ ಸರ್ಜಾ ಅವರ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಅವರ ಪತಿ ಉಮಾಪತಿ ರಾಮಯ್ಯ ಈ ಮದುರೆಯಲ್ಲಿ ಕಾಣಿಸಿಕೊಂಡಿಲ್ಲ.
ಐಶ್ವರ್ಯಾ ಅವರು ತಮಿಳು ನಟ ಹಾಗೂ ನಿರ್ದೇಶಕ ತಂಬಿ ರಾಮಯ್ಯ ಅವರ ಮಗ ಉಮಾಪತಿ ರಾಮಯ್ಯ ಅವರನ್ನು ವಿವಾಹವಾಗಿದ್ದಾರೆ. ಅಂಜನಾ ನಿಶ್ಚಿತಾರ್ಥದ ಸಮಯದಲ್ಲಿ ಎಲ್ಲರೊಂದಿಗೆ ಕಾಣಿಸಿಕೊಂಡಿದ್ದ ಉಮಾಪತಿ, ಈಗ ಮದುವೆಯಲ್ಲಿ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮದುವೆಯಲ್ಲಿ ಮೊದಲ ಅಳಿಯ ಯಾಕಿಲ್ಲ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸರ್ಜಾ ಕುಟುಂಬದ ಈ ಮದುವೆ ಸಮಾರಂಭ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.




