ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಿನಿಮಾಕ್ಕಾಗಿ ನಿರ್ದೇಶಕರು ಹಾಗೂ ತಂತ್ರಜ್ಞರು ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ನಟಿ ಸಾಯಿ ಪಲ್ಲವಿ ಕೆಲ ದಿನಗಳ ಹಿಂದೆ ತಿಳಿಸಿದ್ದರು.
ಇದೀಗ ಖುದ್ದು ನಿರ್ದೇಶಕ ನಿತೇಶ್ ತಿವಾರಿ ಅವರು ಈ ಬ್ರಹ್ಮಾಂಡ ಚಿತ್ರಕ್ಕಾಗಿ ತಾವು ಪಟ್ಟ ಶ್ರಮ ಎಂಥದ್ದು ಎಂದು ವಿವರಿಸಿದ್ದಾರೆ. ಸಿನಿಮಾದಲ್ಲಿ ಬರುವ ಯಶ್ ಅವರ ಒಂದು ಸಾಹಸ ದೃಶ್ಯವನ್ನು ಸರಿಯಾಗಿ ಕಂಪೋಸ್ ಮಾಡಲು ಬರೋಬ್ಬರಿ ಆರುವರೆ ವರ್ಷ ಸಮಯ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಈ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಮೊದಲ ಭಾಗ ನವೆಂಬರ್ 5ಕ್ಕೆ ತೆರೆಕಾಣಲಿದೆ.
ರಾವಣ-ಜಟಾಯು ಕಾಳಗಕ್ಕೆ ಹಿಡಿದ ಆರುವರೆ ವರ್ಷ
‘ರಾಮಾಯಣ’ ಸಿನಿಮಾನಲ್ಲಿ ಯಶ್ ಅವರು ಪ್ರಮುಖವಾಗಿ ರಾವಣನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ರಾವಣ ಮತ್ತು ಜಟಾಯುವಿನ ನಡುವೆ ನಡೆಯುವ ಯುದ್ಧ ಈ ಚಿತ್ರದ ಬಹಳ ಮಹತ್ವವಾದ ಮತ್ತು ರೋಮಾಂಚಕಾರಿ ಭಾಗವಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ನಿತೇಶ್ ತಿವಾರಿ, ಈ ಕಾಳಗವನ್ನು ಪೂರ್ಣಗೊಳಿಸಲು ತಮಗೆ ಆರುವರೆ ವರ್ಷಗಳ ಕಾಲ ಬೇಕಾಯಿತು ಎಂದು ಬಹಿರಂಗಪಡಿಸಿದ್ದಾರೆ. ಕೇವಲ ಒಂದೇ ಒಂದು ಆಕ್ಷನ್ ದೃಶ್ಯಕ್ಕಾಗಿ ಸಾವಿರಾರು ಜನರು ಹಗಲಿರುಳು ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಯೊಂದನ್ನೂ ಆರಂಭದಿಂದ ನಿರ್ಮಿಸಲು ತಂಡ ಎಷ್ಟು ಕಷ್ಟಪಟ್ಟಿದೆ ಎಂಬುದನ್ನು ವಿವರಿಸಿರುವ ಅವರು, ಈ ದೃಶ್ಯಕ್ಕಾಗಿ ತಂತ್ರಜ್ಞರು ಬಹಳ ದೊಡ್ಡ ಮಟ್ಟದ ಪರಿಶ್ರಮ ಹಾಕಿದ್ದಾರೆ ಎಂದಿದ್ದಾರೆ.
ಇದನ್ನು ಓದಿ: Ramayana US Premiere: ಅಮೆರಿಕದಲ್ಲಿ ‘ರಾಮಾಯಣ’ ಪ್ರಿಮಿಯರ್; ಗ್ಲೋಬಲ್ ಮಟ್ಟದಲ್ಲಿ ಹೈಪ್
Ramayana: ಪುಷ್ಪಕ ವಿಮಾನದ ವಿನ್ಯಾಸಕ್ಕೇ ಬೇಕಾಯಿತು 2 ವರ್ಷ
ಈ ಚಿತ್ರಕ್ಕಾಗಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದು, ಇದರ ಹಿಂದೆ ಒಂದು ಸ್ವಾರಸ್ಯಕರ ಹಿನ್ನೆಲೆಯೂ ಇದೆ. ಪೌರಾಣಿಕ ಕಥೆಯ ರಾವಣನ ಪ್ರಸಿದ್ಧ ‘ಪುಷ್ಪಕ ವಿಮಾನ’ ದ ವಿನ್ಯಾಸವನ್ನು ರೂಪಿಸಲು ಮಾತ್ರ ತಂಡಕ್ಕೆ ಸುಮಾರು ಎರಡು ವರ್ಷಗಳು ಬೇಕಾದವಂತೆ.
ಅಂತಿಮ ರೂಪುರೇಷೆ ಸಿದ್ಧಪಡಿಸುವ ಮೊದಲು ತಂಡವು ಸುಮಾರು 40 ರಿಂದ 50 ವಿಭಿನ್ನ ವಿನ್ಯಾಸಗಳನ್ನು ಸೃಷ್ಟಿಸಿತ್ತು. ಕೇವಲ ಹಾರುವಂತೆ ಕಾಣುವ ವಿಮಾನವಲ್ಲದೆ, ಅದರ ಹಿಂದೆ ಒಂದು ಗಟ್ಟಿಯಾದ ವೈಜ್ಞಾನಿಕ ಹಿನ್ನೆಲೆ ಇರಬೇಕೆಂದು ನಿರ್ದೇಶಕರು ಬಯಸಿದ್ದರು.
ಆದರೆ ಹೊಸ ಪುಷ್ಪಕ ವಿಮಾನದ ವಿನ್ಯಾಸ ಅಂತಿಮಗೊಂಡ ನಂತರ, ಅದಕ್ಕೆ ತಕ್ಕಂತೆ ರಾವಣ-ಜಟಾಯು ಕಾಳಗದ ಆಕ್ಷನ್ ದೃಶ್ಯದ ಹಲವು ಭಾಗಗಳನ್ನು ಮತ್ತೆ ಮೊದಲಿನಿಂದ ಬದಲಾಯಿಸಬೇಕಾಗಿ ಬಂದಿದ್ದರಿಂದ ಹೆಚ್ಚಿನ ಸಮಯ ಹಿಡಿಯಿತು ಎಂದು ನಿತೇಶ್ ವಿವರಿಸಿದ್ದಾರೆ.




