☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

YATNAL : ಬಿಜೆಪಿಗೆ ಮರಳಲು ಯತ್ನಾಳ್ 2 ಕಂಡೀಶನ್ : ಓಕೆ ಅಂದ್ರಾ ಬಿ.ವೈ.ವಿಜಯೇಂದ್ರ..?

Basanagowda patil yatnal Vijayendra Bjp
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಪಕ್ಷಕ್ಕೆ ಮರಳುವ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಮುಖ್ಯಾಂಶಗಳು

  • ಬಿಜೆಪಿಗೆ ಯತ್ನಾಳ್ ರೀ ಎಂಟ್ರಿ..?
  • ಆ ಎರಡು ಷರತ್ತುಗಳೇನು..?
  • ಓಕೆ ಅಂದ್ರಾ ಬಿವೈ ವಿಜಯೇಂದ್ರ..!

ಬೆಂಗಳೂರು: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಅವರ ಪಕ್ಷಕ್ಕೆ ಮರಳುವ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಯತ್ನಾಳ್ ನಡುವೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆದಿತ್ತು. ಇದರ ನಂತರ ದೆಹಲಿ ಮಟ್ಟದಲ್ಲೂ ನಾಯಕರ ಭೇಟಿ ನಡೆದಿರುವುದು ಯತ್ನಾಳ್ ಅವರ ಮರಳುವಿಕೆ ಹತ್ತಿರವಾಗಿದೆ ಎಂಬ ಲೆಕ್ಕಾಚಾರಕ್ಕೆ ಬಲ ನೀಡಿತ್ತು. ಈ ಬೆಳವಣಿಗೆಗಳ ಮಧ್ಯೆ ಯತ್ನಾಳ್ ಅವರು ಪಕ್ಷಕ್ಕೆ ವಾಪಸ್ ಬರಲು ಇಟ್ಟಿರುವ ಷರತ್ತುಗಳ ಬಗ್ಗೆ ವಿಜಯೇಂದ್ರ ಅವರು ಮೊದಲ ಬಾರಿಗೆ ನೇರವಾಗಿ ಪ್ರತಿಕ್ರಿಯಿಸಿದ್ದಾರೆ.

2 ಷರತ್ತಿಗೆ ಒಪ್ಪಿದ್ರೆ ವಾಪಸ್ ಬರ್ತೀನಿ ..!

ಯತ್ನಾಳ್ ಅವರು ಬಿಜೆಪಿಗೆ ಮರಳಲು ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ವಿಜಯೇಂದ್ರ ಅವರೇ ತಿಳಿಸಿದ್ದಾರೆ. ಮೊದಲನೆಯದಾಗಿ ತಾವೇ ತಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು. ಎರಡನೆಯದಾಗಿ ಮುಂದಿನ ಹತ್ತು ವರ್ಷಗಳ ಕಾಲ ತಾನು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಡಬೇಕು ಎಂಬುದೇ ಆ ಷರತ್ತುಗಳು. ಯಡಿಯೂರಪ್ಪ ಕುಟುಂಬದ ಪ್ರಭಾವವನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ಯತ್ನಾಳ್ ಅವರು ಮರಳಿ ಪಕ್ಷ ಸೇರಲು ರಾಜ್ಯಾಧ್ಯಕ್ಷರ ಭವಿಷ್ಯಕ್ಕೆ ಸಂಬಂಧಿಸಿದಂತಹ ಪ್ರಸ್ತಾವವನ್ನು ಇಟ್ಟಿರುವುದು ಕುತೂಹಲ ಮೂಡಿಸಿದೆ. ಈ ಬೇಡಿಕೆಗಳಿಗೆ ವಿಜಯೇಂದ್ರ ಅವರು ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದು, ಯತ್ನಾಳ್ ಅವರ ಷರತ್ತುಗಳಿಗೆ ತಮ್ಮದೇನೂ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ. ತಮಗೆ ಸ್ವಂತ ಶಕ್ತಿ ಮತ್ತು ಕಾರ್ಯಕರ್ತರ ಮೇಲಿರುವ ವಿಶ್ವಾಸವೇ ರಕ್ಷೆ ಎಂದು ಹೇಳಿರುವ ಅವರು, ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು ಎಂಬ ಸಂದೇಶ ತಮಗೂ ಬಂದಿರುವುದರಿಂದ ಮೊದಲ ದಿನದಿಂದಲೂ ಅದೇ ನಿಲುವಿಗೆ ಬದ್ಧರಾಗಿರುವುದಾಗಿ ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ : ಸ್ಟಿಂಗ್ ವಿಡಿಯೋ ಹಂಚಿದವರನ್ನು ಜೈಲಿಗಟ್ಟಬೇಕು – HDK ವಿರುದ್ಧ ಯತೀಂದ್ರ ಗುಡುಗು

ವಿಜಯೇಂದ್ರ ಅವರೊಂದಿಗಿನ ಭೇಟಿಯ ನಂತರ ಯತ್ನಾಳ್ ಅವರು ಮುರುಗೇಶ್ ನಿರಾಣಿ ಅವರೊಂದಿಗೂ ಚರ್ಚೆ ನಡೆಸಿದ್ದರು. ಬಳಿಕ ದೆಹಲಿಗೆ ತೆರಳಿದ್ದ ಅವರು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ನೆಪದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವ ವಿ. ಸೋಮಣ್ಣ ಅವರ ಮನೆಯಲ್ಲಿ ಆರಂಭಿಕ ಮಾತುಕತೆ ನಡೆದರೆ, ನಂತರ ಸಂಸದ ಪಿ.ಸಿ. ಮೋಹನ್ ಅವರ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಮತ್ತೊಂದೆಡೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರೂ ಪಕ್ಷಕ್ಕೆ ಮರಳುವ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಗಳನ್ನು ನೋಡಿದರೆ ಯತ್ನಾಳ್ ಅವರ ಮರಳುವಿಕೆ ಕೇವಲ ವೈಯಕ್ತಿಕ ನಿರ್ಧಾರವಾಗಿ ಉಳಿದಿಲ್ಲ, ಬದಲಾಗಿ ಬಿಜೆಪಿಯ ಒಳಗಿನ ಗುಂಪುಗಾರಿಕೆ ಮತ್ತು ನಾಯಕತ್ವದ ಹೋರಾಟದ ಪ್ರತಿಬಿಂಬವಾಗಿದೆ. ಯತ್ನಾಳ್ ಅವರು ಇಟ್ಟಿರುವ ಷರತ್ತುಗಳು ವಿಜಯೇಂದ್ರ ಅವರ ನಾಯಕತ್ವವನ್ನು ನೇರವಾಗಿ ಪ್ರಶ್ನಿಸುವಂತಿದ್ದರೂ, ವಿಜಯೇಂದ್ರ ಅವರು ಅದನ್ನು ನಗುತ್ತಲೇ ಸ್ವೀಕರಿಸಿದಂತೆ ಹೇಳಿರುವುದು ಒಗ್ಗಟ್ಟಿನ ಸಂದೇಶ ನೀಡುವ ಪ್ರಯತ್ನವಾಗಿದೆ. ಆದರೆ ಲಿಖಿತ ಭರವಸೆ ಮತ್ತು ರಾಜೀನಾಮೆಯಂತಹ ಬೇಡಿಕೆಗಳು ಹೈಕಮಾಂಡ್ ಮಟ್ಟದಲ್ಲಿ ಸುಲಭವಾಗಿ ಒಪ್ಪಿಗೆ ಪಡೆಯುವುದು ಕಷ್ಟ. ಮುಂಬರುವ ದಿನಗಳಲ್ಲಿ ಹೈಕಮಾಂಡ್ ಈ ವಿಚಾರದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಯತ್ನಾಳ್ ಅವರ ಘರ್ ವಾಪ್ಸಿ ನಿರ್ಧಾರವಾಗಲಿದೆ.