WEST BENGAL : 1975ರ ಎಮರ್ಜೆನ್ಸಿ ವೇಳೆ ಹೋರಾಡಿದವರಿಗೆ ಮಾಸಿಕ ಪಿಂಚಣಿ – ಬಂಗಾಳದ ಬಿಜೆಪಿ ಸರ್ಕಾರ ಘೋಷಣೆ

1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡಿ ಜೈಲು ಶಿಕ್ಷೆ ಅನುಭವಿಸಿದ ಪ್ರತಿಭಟನಾಕಾರರಿಗೆ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಮಾಸಿಕ 10,000 ರೂಪಾಯಿಗಳ ಪಿಂಚಣಿ ಯೋಜನೆಯನ್ನು ಘೋಷಿಸಿದೆ. ರಾಜ್ಯ ಸಚಿವಾಲಯದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ‘ಪಶ್ಚಿಮಬಂಗ ಪ್ರಜಾತಂತ್ರ ಸೇನಾನಿ ಸಮ್ಮಾನ್’ ಯೋಜನೆಯಡಿಯಲ್ಲಿ ಒಟ್ಟು 325 ಅರ್ಹ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಹಣಕಾಸಿನ ನೆರವಿನ ಜೊತೆಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ತಿಂಗಳಿಗೆ 1000 ರೂಪಾಯಿಗಳ ವೈದ್ಯಕೀಯ ನೆರವನ್ನು ಸಹ ಒದಗಿಸಲಾಗುತ್ತಿದೆ. ಫಲಾನುಭವಿಗಳು ಮರಣಹೊಂದಿದ್ದರೆ ಈ ಸೌಲಭ್ಯ ಅವರ ಪತ್ನಿ ಅಥವಾ ಪತಿಗೆ ತಲುಪಲಿದೆ.

ಎಮರ್ಜೆನ್ಸಿ ವೇಳೆ ಬಂಧನಕ್ಕೊಳಗಾಗಿ ಯಾತನೆ ಅನುಭವಿಸಿದ ಈ ದೇಶಪ್ರೇಮಿಗಳ ತ್ಯಾಗದ ಬುನಾದಿಯ ಮೇಲೆ ಪ್ರಸ್ತುತ ಆಡಳಿತ ನಿಂತಿದೆ ಎಂದು ಸುವೇಂದು ಅಧಿಕಾರಿ ತಮ್ಮ ಭಾಷಣದಲ್ಲಿ ಸ್ಮರಿಸಿದ್ದಾರೆ. ಜೂನ್ 25 ರಂದು ರಾಷ್ಟ್ರಮಟ್ಟದಲ್ಲಿ ‘ಸಂವಿಧಾನ ಹತ್ಯಾ ದಿವಸ’ ಎಂದು ಆಚರಿಸುವ ನಿರ್ಧಾರಕ್ಕೆ ಪೂರಕವಾಗಿ, ದೇಶದ ಅನೇಕ ರಾಜ್ಯಗಳು ತುರ್ತುಸ್ಥಿತಿ ಹೋರಾಟಗಾರರನ್ನು ಗೌರವಿಸುತ್ತಿವೆ. ಇದೇ ಸಂದರ್ಭದಲ್ಲಿ ಆಗಸ್ಟ್ 9ರ ಕ್ವಿಟ್ ಇಂಡಿಯಾ ಚಳವಳಿಯ ೮೪ ನೇ ವರ್ಷಾಚರಣೆಯ ನೆನಪಿನಲ್ಲಿ ಮಹಾತ್ಮ ಗಾಂಧೀಜಿಯವರ ‘ಮಾಡೂ ಇಲ್ಲವೇ ಮಡಿ’ ಕರೆಯನ್ನು ಸ್ಮರಿಸಿದ ಅವರು, ಸ್ವಾತಂತ್ರ್ಯ ಯೋಧರ ಬಲಿದಾನಗಳನ್ನು ಗೌರವಿಸಿದರು.

ಈ ರಾಜಕೀಯ ನಿರ್ಧಾರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಇದು ಕೇವಲ ಒಂದು ಕಲ್ಯಾಣ ಯೋಜನೆಯಾಗಿರದೆ ಆಳವಾದ ರಾಜಕೀಯ ಉದ್ದೇಶದ ಭಾಗವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ತನ್ನ ಐತಿಹಾಸಿಕ ಮತ್ತು ಸೈದ್ಧಾಂತಿಕ ನೆಲೆಯನ್ನು ಗಟ್ಟಿಮಾಡಿಕೊಳ್ಳಲು ಈ ಕ್ರಮವನ್ನು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯ ಕಪ್ಪು ಚುಕ್ಕೆಯಾದ ತುರ್ತುಸ್ಥಿತಿಯನ್ನು ಪುನಃ ಮುನ್ನೆಲೆಗೆ ತರುವ ಮೂಲಕ, ವಿರೋಧ ಪಕ್ಷದ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ತಂತ್ರ ಇದರಲ್ಲಿದೆ.

ಸುಮಾರು ಐದು ದಶಕಗಳ ನಂತರ ಕೈಗೊಂಡಿರುವ ಈ ಹೆಜ್ಜೆ ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆಗೆ ನೀಡಿದ ಮಹತ್ವದ ಗೌರವವಾಗಿದೆ. ಸುದೀರ್ಘ ಅವಧಿಯ ನಂತರ ಸಿಕ್ಕಿರುವ ಈ ಮಾನ್ಯತೆ ತಡವಾಗಿಯಾದರೂ ಸಂವಿಧಾನಿಕ ಹಕ್ಕುಗಳಿಗಾಗಿ ಹೋರಾಡಿದ ಹಿರಿಯ ಚೇತನಗಳಿಗೆ ನ್ಯಾಯ ಒದಗಿಸಿದೆ ಎಂಬ ಅರ್ಥದಲ್ಲಿ ಬಿಜೆಪಿ ತನ್ನ ಈ ಕೆಮವನ್ನು ಬಿಂಬಿಸಿಕೊಳ್ಳುತ್ತಿದೆ.