ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಗಾಯನ ಮಾಡದೆ ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕವಾಗಿ ಹಾಗೂ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಆರು ಚರಣಗಳ ಪೂರ್ಣ ಗೀತೆಯನ್ನು ಹಾಡಬೇಕಿತ್ತು, ಆದರೆ ಇಲ್ಲಿ ಕೇವಲ ಆರಂಭಿಕ ಸಾಲುಗಳನ್ನು ಮಾತ್ರ ಬಳಸಿ ಗೀತೆಯನ್ನು ಮೊಟಕುಗೊಳಿಸಲಾಗಿದೆ ಎಂದು ಅವರು ವೇದಿಕೆಯಲ್ಲೇ ಆಕ್ಷೇಪಣೆ ಎತ್ತಿದ್ರು. ಶಾಸಕರ ಈ ದಿಢೀರ್ ನಡೆ ಮತ್ತು ಪ್ರತಿಭಟನೆಸಭೆಯಲ್ಲಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಕೆಲಕಾಲ ಆತಂಕ ಮತ್ತು ಗೊಂದಲದ ವಾತಾವರಣವನ್ನು ಸೃಷ್ಟಿಸಿತು.
ಈ ಘಟನೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ರಾಜ್ಯ ಸರ್ಕಾರದ ಇತ್ತೀಚಿನ ನೂತನ ನಿಯಮಾವಳಿಗಳನ್ನು ಉಲ್ಲೇಖಿಸಿ ಸಮರ್ಥನೆ ನೀಡಿದೆ. ರಾಜ್ಯ ಸರ್ಕಾರದ ಮಾರ್ಗದರ್ಶಿ ಸೂಚಿಗಳ ಪ್ರಕಾರ ಸಾರ್ವಜನಿಕ ಮತ್ತು ಸರ್ಕಾರಿ ಸಮಾರಂಭಗಳಲ್ಲಿ ಸಮಯದ ಅಭಾವವನ್ನು ತಡೆಯಲು ಹಾಗೂ ಏಕರೂಪತೆ ಕಾಯ್ದುಕೊಳ್ಳಲು ಮೊದಲ ಎರಡು ಚರಣಗಳನ್ನು ಮಾತ್ರ ಗಾಯನ ಮಾಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ, ರಾಷ್ಟ್ರಭಕ್ತಿಯ ಸಂಕೇತವಾಗಿರುವ ಈ ಗೀತೆಯ ಚರಣಗಳನ್ನು ಕಡಿತಗೊಳಿಸುವುದು ರಾಷ್ಟ್ರಗೀತೆಗೆ ಹಾಗೂ ಭಾವನೆಗಳಿಗೆ ಎಸಗುವ ಅಪಚಾರ ಎಂಬುದು ಪ್ರತಿಪಕ್ಷಗಳ ವಾದವಾಗಿದೆ. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಈಗಾಗಲೇ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಕೆಯಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಾರ್ವಜನಿಕ ವೇದಿಕೆಗಳಲ್ಲಿ ಸಂಘರ್ಷ ಹೊಸದೇನಲ್ಲ. ಆದರೆ, ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲೇ ಇಂತಹ ಘಟನೆ ನಡೆದಿರುವುದು ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ತಾರಕಕ್ಕೇರಿರುವುದನ್ನು ಎತ್ತಿಹಿಡಿಯುತ್ತದೆ. ಹಳೆಯ ಆಚರಣೆಗಳ ನಿಯಮವನ್ನು ಸರ್ಕಾರ ಮುಂದಿಡುತ್ತಿದ್ದರೆ, ಇನ್ನೊಂದೆಡೆ ಭಾವನಾತ್ಮಕ ಹಾಗೂ ರಾಷ್ಟ್ರೀಯ ಗೌರವದ ವಿಷಯವನ್ನು ವಿಪಕ್ಷಗಳು ಎತ್ತಿಹಿಡಿಯುತ್ತಿವೆ. ಸರ್ಕಾರಿ ಕಾರ್ಯಕ್ರಮಗಳ ಶಿಷ್ಟಾಚಾರದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸ್ಪಷ್ಟ ಸಂಪರ್ಕ ಹಾಗೂ ಏಕರೂಪದ ಮಾರ್ಗದರ್ಶಿ ಸೂಚಿಗಳು ಇಲ್ಲದಿರುವುದೇ ಇಂತಹ ವಿವಾದಗಳಿಗೆ ಕಾರಣವಾಗಿದೆ.




