ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಿಸಿರುವ ಸುಸಜ್ಜಿತ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮವನ್ನು ಯಾವುದೇ ಆಡಂಬರವಿಲ್ಲದೇ ಅತ್ಯಂತ ಸರಳವಾಗಿ ನೆರವೇರಿಸಿದ್ದಾರೆ. ಮುಂಚಿತವಾಗಿ ತಿಳಿಸಿದಂತೆಯೇ ಈ ಖಾಸಗಿ ಸಮಾರಂಭಕ್ಕೆ ಯಾವುದೇ ರಾಜಕೀಯ ನಾಯಕರು ಹಾಗೂ ಗಣ್ಯರಿಗೆ ಆಹ್ವಾನ ನೀಡಿರಲಿಲ್ಲ. ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ ನೇತೃತ್ವದಲ್ಲಿ ಗಣಪತಿ ಹೋಮ, ವಾಸ್ತು ಪೂಜೆ ಹಾಗೂ ಪೂರ್ಣಾಹುತಿ ಸೇರಿದಂತೆ ಶಾಸ್ತ್ರೋಕ್ತ ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಹೊಸ ಮನೆಗೆ ಕಾಲಿಡಲಾಯಿತು. ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಕುಟುಂಬದ ತೀರಾ ನಿಕಟವರ್ತಿಗಳು ಮಾತ್ರ ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.
ಮೈಸೂರಿನಲ್ಲಿ ಸ್ವಂತ ನಿವಾಸವನ್ನು ಹೊಂದಬೇಕೆಂಬುದು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ದಶಕಗಳ ಕಾಲದ ಮಹದಾಸೆಯಾಗಿತ್ತು. ಇಲ್ಲಿಯವರೆಗೆ ಸಿದ್ದರಾಮಯ್ಯ ಅವರು ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಅವರ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ಕುವೆಂಪುನಗರದ ಮುಖ್ಯರಸ್ತೆಯ ಬಳಿ 120×80 ಅಡಿ ವಿಸ್ತೀರ್ಣದ ಜಾಗದಲ್ಲಿ ಭವ್ಯವಾದ ಮೂರು ಅಂತಸ್ತಿನ ನೂತನ ಬಂಗಲೆಯನ್ನು ನಿರ್ಮಿಸಲಾಗಿದ್ದು, ಈ ಮೂಲಕ ಬಾಡಿಗೆ ಮನೆಯಿಂದ ತಮ್ಮದೇ ಸ್ವಂತ ಮನೆಗೆ ಸಿದ್ದರಾಮಯ್ಯ ಕುಟುಂಬಸ್ಥರು ಸ್ಥಳಾಂತರಗೊಂಡಿದ್ದಾರೆ.
ದೀರ್ಘಕಾಲದ ರಾಜಕೀಯ ಜೀವನ ನಡೆಸಿದ ಹಿರಿಯ ನಾಯಕರೊಬ್ಬರು ತವರು ಜಿಲ್ಲೆಯಲ್ಲೇ ಸ್ವಂತ ಮನೆಯಿಲ್ಲದೆ ಇಷ್ಟು ವರ್ಷ ಕಾಲಕಳೆದದ್ದು ಮತ್ತು ಈಗ ಸರಳವಾಗಿ ಗೃಹಪ್ರವೇಶ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ. ವಿಐಪಿ ಆಡಂಬರ, ಹೆಚ್ವಿಐಪಿ ಕಾರ್ಯಕರ್ತರ ಗೊಂದಲ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ರಾಜಕಾರಣಿಗಳನ್ನು ದೂರವಿಟ್ಟು ಕೇವಲ ಪೂಜಾ ಕಾರ್ಯಗಳಿಗೆ ಆದ್ಯತೆ ನೀಡಿರುವುದು ಅವರ ಸರಳ ನಿರ್ಧಾರವನ್ನು ತೋರಿಸುತ್ತದೆ. ರಾಜಕೀಯವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಕುಟುಂಬದ ಭಾವನೆಗಳಿಗೆ ಗೌರವ ನೀಡಿ, ಪತ್ನಿಯ ಕನಸನ್ನು ನನಸು ಮಾಡಿದ್ದಾರೆ.




