ನವದೆಹಲಿ: ಭಾರತದ ಜನರು ತಮ್ಮನ್ನು ಒಪ್ಪಿಕೊಂಡು ಅಪ್ಪಿಕೊಂಡರು ಎಂಬ ಸೋನಿಯಾ ಗಾಂಧಿ (Sonia Gandhi) ಅವರ ಭಾವನಾತ್ಮಕ ಮಾತುಗಳೇ ಈ ಬಾರಿಯ ಕುಟುಂಬ ಸಂವಾದದ ಕೇಂದ್ರಬಿಂದುವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆ ನಡೆಸಿದ ಆತ್ಮೀಯ ಮಾತುಕತೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರ ಹೊಸ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ನಲ್ಲಿ ಸ್ಥಾನ ಪಡೆಯದ ಹಳೆಯ ನೆನಪುಗಳು ಮತ್ತು ಮನೆಯೊಳಗಿನ ಘಟನೆಗಳು ಈ ಸಂವಾದದಲ್ಲಿ ಮುಕ್ತವಾಗಿ ಹೊರಬಂದಿವೆ.
ಗಾಂಧಿ ಕುಟುಂಬ ಭಾವುಕ !
ಐನೂರಕ್ಕೂ ಹೆಚ್ಚು ಪುಟಗಳ ಪುಸ್ತಕ ಬರೆದರೂ ಕೆಲವು ವಿಷಯಗಳನ್ನು ತಾಯಿ ಬಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆ ಬಿಟ್ಟುಹೋದ ವಿಷಯಗಳನ್ನೇ ಮುಂದಿಟ್ಟುಕೊಂಡು ತಾವೂ ಪ್ರಿಯಾಂಕಾ ಕೂಡ ತಾಯಿಯೊಂದಿಗೆ ಮಾತನಾಡಿದ್ದಾಗಿ ಅವರು ತಿಳಿಸಿದ್ದಾರೆ. ಹಳೆಯ ದಿನಗಳನ್ನು ಮತ್ತೆ ನೆನೆದಾಗ ಅಂದಿನ ನಗು, ಸಂತೋಷ ಮತ್ತು ನೋವಿನ ಕ್ಷಣಗಳು ಮತ್ತೊಮ್ಮೆ ಕಣ್ಣೆದುರು ಬಂದವು ಎಂದು ಅವರು ಭಾವುಕರಾಗಿದ್ದಾರೆ. ತಮ್ಮ ಬಾಲ್ಯ, ಕುಟುಂಬದಲ್ಲಿ ಬಂದ ದೊಡ್ಡ ತಿರುವುಗಳು, ಅಂದುಕೊಂಡಂತೆ ಆಗದ ಒಂದು ಪ್ರಸ್ತಾವನೆ ಮತ್ತು ತಮ್ಮ ಏಳನೇ ಹುಟ್ಟುಹಬ್ಬದ ಘಟನೆಯನ್ನು ರಾಹುಲ್ ನೆನಪಿಸಿಕೊಂಡಿದ್ದಾರೆ. 2004ರ ರಾಜಕೀಯ ನಿರ್ಧಾರ ಕೆಲವರಿಗೆ ನೆಮ್ಮದಿ, ಕೆಲವರಿಗೆ ಸಂತೋಷ ತಂದಿತ್ತು ಎಂದು ಹೇಳಿದ ಅವರು, ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭದ್ರತೆ ಹಿಂಪಡೆಯುವ ಹಿಂದೆ ಒಂದು ಉದ್ದೇಶವಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಅಪಾರ ಪ್ರೀತಿ ಮತ್ತು ಭೀಕರ ದುರಂತಗಳ ನಡುವೆಯೂ ಸೋನಿಯಾ ಗಾಂಧಿ ಅವರ ಬದುಕಿನ ಪಯಣ ಘನತೆ ಮತ್ತು ಧೈರ್ಯದಿಂದ ಸಾಗಿದೆ ಎಂದು ರಾಹುಲ್ ಶ್ಲಾಘಿಸಿದ್ದಾರೆ. ಈ ಪೂರ್ಣ ಸಂವಾದದ ವಿಡಿಯೋ ಯೂಟ್ಯೂಬ್ ನಲ್ಲಿ ಲಭ್ಯವಿದೆ.
ಇದನ್ನೂ ಓದಿ : ಸಾವರ್ಕರ್ ಕುರಿತ ಬರಹಕ್ಕೆ ಸೋನಿಯಾ ಗಾಂಧಿಗೆ ಕಾನೂನು ನೋಟಿಸ್ – ಏನಿದು ವಿವಾದ ..?
ಸೋನಿಯಾ ಗಾಂಧಿ ಅವರ ಈ ಮಾತು ಕೇವಲ ಕುಟುಂಬದ ನೆನಪಿನ ಮಾತಲ್ಲ, ಭಾರತದ ರಾಜಕೀಯದಲ್ಲಿ ಅವರ ಸ್ಥಾನವನ್ನು ಮತ್ತೊಮ್ಮೆ ನೆನಪಿಸುವ ಸಂದೇಶವಾಗಿದೆ. ವಿದೇಶದಿಂದ ಬಂದು ಭಾರತದ ರಾಜಕೀಯದ ಕೇಂದ್ರಕ್ಕೆ ಬಂದವರ ಬಗ್ಗೆ ದಶಕಗಳಿಂದ ಚರ್ಚೆ ನಡೆಯುತ್ತಲೇ ಇದೆ. ಅಂತಹ ಸಂದರ್ಭದಲ್ಲಿ ಜನರು ತಮ್ಮನ್ನು ಒಪ್ಪಿಕೊಂಡರು ಎಂಬ ಅವರ ಮಾತು ಆ ಚರ್ಚೆಗೆ ಭಾವನಾತ್ಮಕ ಉತ್ತರದಂತಿದೆ. ಪುಸ್ತಕದಲ್ಲಿ ಹೇಳದ ವಿಷಯಗಳನ್ನು ಮಕ್ಕಳ ಮೂಲಕ ಹೊರತರುವ ಮೂಲಕ ಗಾಂಧಿ ಕುಟುಂಬ ತಮ್ಮ ಮಾನವೀಯ ಮುಖವನ್ನು ಜನರ ಮುಂದಿಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ಗೆ ಇದು ಭಾವನಾತ್ಮಕ ಬಂಡವಾಳವೂ ಹೌದು. ಸೋನಿಯಾ ಅವರ ತ್ಯಾಗ ಮತ್ತು ಹೋರಾಟದ ಚಿತ್ರಣವನ್ನು ಮತ್ತೆ ಮುನ್ನೆಲೆಗೆ ತರುವ ಮೂಲಕ ಪಕ್ಷ ತನ್ನ ಹಳೆಯ ನೆಲೆಯನ್ನು ಗಟ್ಟಿಗೊಳಿಸಲು ಬಯಸುತ್ತಿದೆ ಎಂಬ ವ್ಯಾಖ್ಯಾನವೂ ಕೇಳಿಬರುತ್ತಿದೆ. ಇದು ರಾಜಕೀಯ ಸಂದೇಶಕ್ಕಿಂತ ಹೆಚ್ಚಾಗಿ ನಂಬಿಕೆ ಮತ್ತು ಸಂಬಂಧದ ಕಥೆಯಾಗಿ ಜನರನ್ನು ತಲುಪುವ ಪ್ರಯತ್ನವಾಗಿದೆ.




