☔ Weather
Bengaluru: 🌤️ 26°C | AQI 61
Mysore: 🌤️ 26°C | AQI 83
Mangalore: 🌤️ 33°C | AQI 151
Bengaluru: 🌤️ 26°C | AQI 61
☔ Weather
Bengaluru: 🌤️ 26°C | AQI 61
Mysore: 🌤️ 26°C | AQI 83
Mangalore: 🌤️ 33°C | AQI 151
Bengaluru: 🌤️ 26°C | AQI 61

Kolar: ಕೋಲಾರದಲ್ಲಿ “ಗಡಿಯಾರ ಗಲಾಟೆ”: ಸಂಸದ, ಜಮೀರ್‌ ಅಹ್ಮದ್‌ ನಡುವೆ ಜಟಾಪಟಿ

Kolar
ಕೋಲಾರದಲ್ಲಿ ಕೆಟ್ಟು ನಿಂತಿರುವ ಗಡಿಯಾರದ ಕಾರಣಕ್ಕೆ ರಾಜಕೀಯ ಪಕ್ಷಗಳ ನಡುವೆ ಜಟಾಪಟಿ ನಡೆದಿದೆ. ಸಮಸ್ಯೆ ಜಿಲ್ಲಾಡಳಿತದ ಮುಂದೆ ಬಂದು ನಿಂತಿದೆ.

ಮುಖ್ಯಾಂಶಗಳು

  • ಕೋಲಾರದಲ್ಲಿ "ಗಡಿಯಾರ ಗಲಾಟೆ"
  • ಗಡಿಯಾರಕ್ಕಾಗಿ ಬಣಗಳ ನಡುವೆ ಕಿತ್ತಾಟ
  • ಹಿಂದೆ ಸರಿದ ಸಂಸದ ಮಲ್ಲೇಶ್‌ ಬಾಬು

ಕೋಲಾರ: ನಗರದಲ್ಲಿ (Kolar) ವರ್ಷಗಳಿಂದ ಕೆಟ್ಟು ನಿಂತಿದ್ದ ಗಡಿಯಾರಗಳು ಇದೀಗ ಜಿಲ್ಲೆಯಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿವೆ. ನಗರದ ಕ್ಲಾಕ್‌ ಟವರ್‌ ಮತ್ತು ಹಳೆಯ ಬಸ್‌ ನಿಲ್ದಾಣದಲ್ಲಿರುವ ಗೋಪುರಗಳಲ್ಲಿನ ಗಡಿಯಾರಗಳು ಕೆಟ್ಟು ನಿಂತಿವೆ. ಕೆಟ್ಟು ನಿಂತ ಗಡಿಯಾರಗಳು ಅಶುಭ ಎಂಬ ಪ್ರತೀತಿ ಇದೆ. ಇದೇ ಕಾರಣಕ್ಕೆ ಸಂಸದ ಮಲ್ಲೇಶ್‌ ಬಾಬು ಅವರು ತಮ್ಮ ಸಂಸದರ ನಿಧಿಯಿಂದ ಎರಡೂ ಟವರ್‌ಗಳಲ್ಲಿರುವ ಗಡಿಯಾರಗಳನ್ನು ಬದಲಾಯಿಸುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ಅದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

ಎರಡೂ ಕ್ಲಾಕ್‌ ಟವರ್‌ಗಳನ್ನು ಸ್ವಚ್ಛಗೊಳಿಸಿ, ಅವುಗಳಲ್ಲಿನ ನಿಂತುಹೋಗಿದ್ದ ಗಡಿಯಾರಗಳನ್ನು ತೆಗೆದು ಆ ಜಾಗಕ್ಕೆ ಎಚ್‌ಎಂಟಿಯ ಹೊಸ ಗಡಿಯಾರಗಳನ್ನು ಅಳವಡಿಸಲು ಸಂಸದರು ಮುಂದಾಗಿದ್ದರು. ಶನಿವಾರ ಸಂಜೆ ಪ್ರಾಯೋಗಿಕವಾಗಿ ಈ ಕಾರ್ಯವನ್ನು ಕೈಗೊಳ್ಳುತ್ತಿದ್ದಾಗ ಸ್ಥಳಕ್ಕೆ ಬಂದ ಅಂಜುಮನ್‌ ಅಧ್ಯಕ್ಷ ಜಮೀರ್‌ ಅಹ್ಮದ್‌, ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ತಡೆದು ಪ್ರಶ್ನಿಸಿದ್ದಾರೆ. ಅಲ್ಲದೆ, ಅಳವಡಿಸಲು ತರಲಾಗಿದ್ದ ಹೊಸ ಎಚ್‌ಎಂಟಿ ಗಡಿಯಾರಗಳ ನಡುವೆ ಸಂಸದರ ಹೆಸರನ್ನು ಹಾಕಿರುವ ಬಗ್ಗೆಯೂ ಅವರು ಪ್ರಶ್ನೆ ಮಾಡಿದ್ದಾರೆ. “ಈ ಟವರ್‌ ಅನ್ನು ನಮ್ಮ ತಾತ ಮುಸ್ತಾಫಾ ಸಾಹೇಬರು ನಿರ್ಮಿಸಿದ್ದು, ಈ ಟವರ್‌ ಮೇಲೆ ಅವರ ಹೆಸರಿನ ಹೊರತಾಗಿ ಇನ್ಯಾರ ಹೆಸರೂ ಇರಬಾರದು” ಎಂದು ಆಕ್ರೋಶ ಹೊರಹಾಕಿದರು. ಈ ಘಟನೆಯ ಬಳಿಕ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದ ಗಡಿಯಾರವನ್ನು ತೆರವುಗೊಳಿಸಲಾಗಿತ್ತು.

ಬಳಿಕ ಸುದ್ದಿಗೋಷ್ಠಿ ನಡೆಸಿದ ಸಂಸದ ಮಲ್ಲೇಶ್‌ ಬಾಬು, ತಾವು ನಗರದ ಹಿತದೃಷ್ಟಿಯಿಂದ 14.5 ಲಕ್ಷ ರೂಪಾಯಿ ವೆಚ್ಚದಲ್ಲಿ ಟವರ್‌ಗಳ ಪುನರುಜ್ಜೀವನ ಕಾರ್ಯ ಕೈಗೊಳ್ಳುತ್ತಿದ್ದೇನೆ. ಸಂಸದರು ಮತ್ತು ಶಾಸಕರ ನಿಧಿಯಿಂದ ಮಾಡಲಾಗುವ ಯಾವುದೇ ಕಾರ್ಯದಲ್ಲಿ ಯೋಜನೆಯ ಮಾಹಿತಿ ಬರೆಸುವುದು ಸಾಮಾನ್ಯ. ಹಾಗಾಗಿ ನನ್ನ ಹೆಸರನ್ನು ಗಡಿಯಾರದಲ್ಲಿ ಹಾಕಲಾಗಿತ್ತು. ಆದರೆ, ಕೆಲವರು ಕಾಮಗಾರಿಗೆ ಅಡ್ಡಿಪಡಿಸಿ, ಉದ್ವಿಗ್ನ ವಾತಾವರಣ ನಿರ್ಮಾಣ ಮಾಡಲು ಮುಂದಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದೆಂದು ನಾನು ಅಂದು ಸ್ಥಳದಿಂದ ತೆರಳಿದೆ” ಎಂದರು.

ಇದನ್ನೂ ಓದಿ: ಅಸೂಯೆ ಪಡೋದ್ರಲ್ಲಿ ಕುಮಾರಸ್ವಾಮಿಗೆ ಅವಾರ್ಡ್ ಕೊಡ್ಬೇಕು – ಡಿ.ಕೆ.ಸುರೇಶ್ ತೀವ್ರ ವಾಗ್ದಾಳಿ

ಬಳಿಕ ಅಂಜುಮನ್‌ ಅಧ್ಯಕ್ಷ ಜಮೀರ್‌ ಅಹ್ಮದ್‌ ಸಹ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, “ಕ್ಲಾಕ್‌ ಟವರ್‌ ನಿರ್ವಹಣೆ ನಮ್ಮ ಕುಟುಂಬಕ್ಕೆ ಸೇರಿದೆ” ಎಂದ ಅವರು, 1986ರಲ್ಲಿ ಈ ಕುರಿತು ಬರೆಯಲಾದ ಪತ್ರವನ್ನು ಸಾಕ್ಷಿಯಾಗಿ ಪ್ರದರ್ಶಿಸಿದರು. ಆ ಟವರ್‌ ಅನ್ನು ನಮ್ಮ ತಾತ ನಿರ್ಮಿಸಿದ್ದು, ಅದರ ಮೇಲೆ ಇನ್ನೊಬ್ಬರ ಹೆಸರು ಬರಲು ಬಿಡುವುದಿಲ್ಲ” ಎಂದಿದ್ದಾರೆ.

ಇನ್ನು ಇದೇ ವಿಷಯವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್‌ ಮುಖಂಡರು, ಈ ಗಲಾಟೆಯ ಹಿಂದೆ ಶಾಸಕ ಕೊತ್ತೂರು ಮಂಜುನಾಥ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಅನಿಲ್‌ ಕುಮಾರ್‌ ಅವರ ಕೈವಾಡವಿದೆ. ಜೆಡಿಎಸ್‌ ಸಂಸದ ಮಲ್ಲೇಶ್‌ ಬಾಬು ಅವರ ಹೆಸರು ಗಡಿಯಾರದ ಮೇಲೆ ಬರಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಈ ಗಲಾಟೆಯನ್ನು ಪರೋಕ್ಷವಾಗಿ ಮಾಡಿಸಿದೆ” ಎಂದು ಆರೋಪಿಸಿದ್ದಾರೆ.

ಅಂತಿಮವಾಗಿ ಸಂಸದ ಮಲ್ಲೇಶ್‌ ಬಾಬು ಅವರು ಗಡಿಯಾರ ಅಳವಡಿಕೆ ಕಾಮಗಾರಿಯಿಂದ ಹಿಂದೆ ಸರಿದಿದ್ದು, ಗಡಿಯಾರಗಳನ್ನು ಅಳವಡಿಸಬೇಕೇ ಬೇಡವೇ ಎಂಬುದನ್ನು ಜಿಲ್ಲಾಡಳಿತ ಹಾಗೂ ಅಧಿಕಾರಿಗಳೇ ನಿರ್ಣಯಿಸಲಿ ಎಂದಿದ್ದಾರೆ.