ನವದೆಹಲಿ : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆತ್ಮಕಥನ ‘Belonging: A Journey of Love’ ಪುಸ್ತಕದ ಅಧಿಕೃತ ಬಿಡುಗಡೆ ಸಮಾರಂಭ ಇಂದು (ನ. 16) ನವದೆಹಲಿಯ ಐಟಿಸಿ ಮೌರ್ಯ (ITC Maurya) ಹೋಟೆಲ್ನಲ್ಲಿ ನಡೆಯಲಿದೆ. ಸಂಜೆ 6 ಗಂಟೆಯಿಂದ 6.30ರ ವೇಳೆಗೆ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆಯಿದೆ. ಈ ಸಮಾರಂಭದಲ್ಲಿ ಸೋನಿಯಾ ಗಾಂಧಿ ಅವರ ಪುತ್ರ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ನ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ವಿಶೇಷವಾಗಿ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಟಿವಿಕೆ ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ಅವರು ಸ್ವತಃ ದೂರವಾಣಿ ಮೂಲಕ ವಿಜಯ್ ಅವರಿಗೆ ಆಹ್ವಾನ ನೀಡಿರುವುದು ಗಮನಾರ್ಹ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ವಿರೋಧ ಪಕ್ಷಗಳ ಮುಖಂಡರು ಹಾಗೂ INDIA ಮೈತ್ರಿಕೂಟದ ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಇದು ಆಹ್ವಾನಿತ ಗಣ್ಯರಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಾಗಿದ್ದು, ಪ್ರಕಾಶಕರು ಮತ್ತು ಗಾಂಧಿ ಕುಟುಂಬದವರು ಅತಿಥಿಗಳನ್ನು ಆಯ್ಕೆ ಮಾಡಿದ್ದಾರೆ.
ಬಿಲಾಂಗಿಂಗ್ : 544 ಪುಟಗಳ ಕೃತಿ
ಪುಸ್ತಕದ ವಿಶೇಷತೆ: ಹಾರ್ಪರ್ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಈ 544 ಪುಟಗಳ ಕೃತಿ ಸೋನಿಯಾ ಗಾಂಧಿ ಅವರ ವೈಯಕ್ತಿಕ ಬದುಕು, ಕುಟುಂಬ, ರಾಜಕೀಯ ಪ್ರವೇಶ ಹಾಗೂ ಐದು ದಶಕಗಳಿಗೂ ಹೆಚ್ಚಿನ ಭಾರತದೊಂದಿಗಿನ ಒಡನಾಟವನ್ನು ವಿವರಿಸುತ್ತದೆ. ನವೆಂಬರ್ 10ರಿಂದಲೇ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇಂದಿನ ಕಾರ್ಯಕ್ರಮ ಅದರ ಅಧಿಕೃತ ಬಿಡುಗಡೆ ಸಮಾರಂಭವಾಗಿದೆ. ಇಟಲಿಯಲ್ಲಿ ಕಳೆದ ಬಾಲ್ಯ, ಕೇಂಬ್ರಿಡ್ಜ್ನಲ್ಲಿ 1965ರಲ್ಲಿ ರಾಜೀವ್ ಗಾಂಧಿ ಅವರೊಂದಿಗಿನ ಮೊದಲ ಭೇಟಿ, ವಿವಾಹದ ನಂತರ ಭಾರತಕ್ಕೆ ಆಗಮನ, ಭಾರತೀಯ ಸಂಸ್ಕೃತಿ ಮತ್ತು ಭಾಷೆಯೊಂದಿಗೆ ಬೆರೆತ ಅನುಭವಗಳು ಕೃತಿಯ ಪ್ರಮುಖ ಭಾಗಗಳಾಗಿವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುಟುಂಬದೊಂದಿಗಿನ ಸಂಬಂಧ, ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ನೋವು, ಸಾರ್ವಜನಿಕ ಜೀವನಕ್ಕೆ ಪ್ರವೇಶ, ಕಾಂಗ್ರೆಸ್ ಪಕ್ಷದ ನಾಯಕತ್ವ ಹಾಗೂ 2004ರಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ಸ್ವೀಕರಿಸದ ನಿರ್ಧಾರದ ಬಗ್ಗೆಯೂ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಯುಪಿಎ ಸರ್ಕಾರದ ಅವಧಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗಿನ ಮಾತುಕತೆ ಮತ್ತು ದೇಶದ ರಾಜಕೀಯ ಬೆಳವಣಿಗೆಗಳ ಕುರಿತಾದ ವೈಯಕ್ತಿಕ ಅಭಿಪ್ರಾಯಗಳೂ ಪುಸ್ತಕದಲ್ಲಿವೆ.
ಇದನ್ನೂ ಓದಿ : ಸೋನಿಯಾ ಆತ್ಮಕಥೆ ಬಿಡುಗಡೆ: ದೆಹಲಿಯತ್ತ ಸಿದ್ದು & ಡಿಕೆ
ಸಾಹಿತ್ಯಿಕ ಕಾರ್ಯಕ್ರಮವಾಗಿ ಆರಂಭವಾಗಿರುವ ಈ ಪುಸ್ತಕ ಬಿಡುಗಡೆ ಸಮಾರಂಭ ರಾಷ್ಟ್ರಮಟ್ಟದ ರಾಜಕೀಯ ನಾಯಕರ ಸಮಾಗಮಕ್ಕೂ ವೇದಿಕೆಯಾಗುವ ನಿರೀಕ್ಷೆಯಿದೆ. ಸೋನಿಯಾ ಗಾಂಧಿ ಅವರು ತಮ್ಮ ಬದುಕಿನ ಪಯಣ, ಕುಟುಂಬದ ಅನುಭವಗಳು ಮತ್ತು ಭಾರತದ ರಾಜಕೀಯದಲ್ಲಿ ತಾವು ಕಂಡ ಬದಲಾವಣೆಗಳ ಕುರಿತು ಸಭೆಯಲ್ಲಿ ಮಾತನಾಡುವ ಸಾಧ್ಯತೆಯಿದೆ. ಇತ್ತೀಚೆಗೆ ಪುಸ್ತಕದ ಕುರಿತು ಮಾತನಾಡಿದ್ದ ಅವರು, ತುರ್ತು ಪರಿಸ್ಥಿತಿಯನ್ನು ತಪ್ಪು ನಿರ್ಧಾರವೆಂದು ಒಪ್ಪಿಕೊಂಡಿದ್ದರು. 1984ರ ಸಿಖ್ ವಿರೋಧಿ ಗಲಭೆಗಳನ್ನು ಭಾರತದ ಇತಿಹಾಸದ ನಾಚಿಕೆಗೇಡಿನ ಅಧ್ಯಾಯವೆಂದು ಬಣ್ಣಿಸಿದ್ದರು. ಮತ್ತೊಂದೆಡೆ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಭಾಗವಹಿಸುವಿಕೆ ರಾಜಕೀಯ ವಲಯದಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ವಿಜಯ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ಪ್ರತ್ಯೇಕ ಮಾತುಕತೆ ನಡೆಯಬಹುದೇ ಎಂಬ ಚರ್ಚೆಯೂ ಇದೆ. ಹೀಗಾಗಿ ಸೋನಿಯಾ ಗಾಂಧಿ ಅವರ ಆತ್ಮಕಥನ ಬಿಡುಗಡೆ ಸಮಾರಂಭವು ವೈಯಕ್ತಿಕ ನೆನಪುಗಳ ಅನಾವರಣದ ಜೊತೆಗೆ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ.




