ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಭಯೋತ್ಪಾದಕ ಅಜ್ಮಲ್ ಕಸಬ್ ಜೊತೆ ಹೋಲಿಸಿ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣ ತೀವ್ರ ವಿವಾದಕ್ಕೆ ಕಾರಣವಾಗಿದೆ. ಭಾರತೀಯ ವಾಯುಪಡೆಯ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಅನೂಪ್ ವರ್ಮಾ ಎಂಬುವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ಕೊಲಾಜ್ ಚಿತ್ರವನ್ನು ಪ್ರಕಟಿಸಿದ್ದರು. ಆ ಚಿತ್ರದ ಒಂದು ಬದಿಯಲ್ಲಿ ರಾಹುಲ್ ಗಾಂಧಿ ಫೋಟೋ ಮತ್ತು ಮತ್ತೊಂದು ಬದಿಯಲ್ಲಿ 26/11 ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಫೋಟೋ ಹಾಕಿ ಭಾರತಕ್ಕೆ ಕಸಬ್ಗಿಂತ ರಾಹುಲ್ ಗಾಂಧಿ ಹೆಚ್ಚು ಅಪಾಯಕಾರಿ ಎಂಬ ಶೀರ್ಷಿಕೆಯನ್ನು ಬರೆದಿದ್ದರು. ಈ ಪೋಸ್ಟ್ ವೈರಲ್ ಆದ ಬಳಿಕ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಕಾಂಗ್ರೆಸ್ ಸೇವಾ ದಳ ಈ ಕುರಿತು ಸೈಬರ್ ಪೊಲೀಸರಿಗೆ ಅಧಿಕೃತ ದೂರು ನೀಡಿದೆ.
ಸಂವಿಧಾನಾತ್ಮಕ ಹುದ್ದೆಯಲ್ಲಿರುವ ತಮ್ಮ ನಾಯಕ ರಾಹುಲ್ ಗಾಂಧಿ ಭಯೋತ್ಪಾದಕನಿಗೆ ಹೋಲಿಸಿರುವುದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಇದು ಉದ್ದೇಶಪೂರ್ವಕವಾಗಿ ದ್ವೇಷ ಹರಡುವ, ಸಾರ್ವಜನಿಕವಾಗಿ ಅವಮಾನಿಸುವ ಮತ್ತು ದುರುದ್ದೇಶಪೂರಿತ ಪ್ರಚಾರ ನಡೆಸುವ ಕೃತ್ಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಷಯಗಳನ್ನು ಹಂಚಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಸೇವಾ ದಳ ಒತ್ತಾಯಿಸಿದೆ. ಸದ್ಯ ಈ ವಿಷಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್ ವಿಭಾಗ ತನಿಖೆ ಕೈಗೊಳ್ಳಬೇಕಿದೆ.
ಇದನ್ನೂ ಓದಿ: ಬರೀ ಲೇಖನ ಬರೆಯುವುದಲ್ಲ, ಪ್ರತಿಭಟನೆಗೂ ಬನ್ನಿ: ತರೂರ್ಗೆ ತಿವಿದ ಖರ್ಗೆ
ಈ ಪ್ರಕರಣ ಕೇವಲ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ಗೆ ಸೀಮಿತವಾದ ವಿಚಾರವಲ್ಲ, ಬದಲಾಗಿ ದೇಶದಲ್ಲಿ ರಾಜಕೀಯ ಸಂವಾದದ ಮಟ್ಟ ಎಷ್ಟು ಕುಸಿದಿದೆ ಎಂಬುದನ್ನು ತೋರಿಸುವ ಕನ್ನಡಿಯಾಗಿದೆ. ಸಂವಿಧಾನದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ತನ್ನದೇ ಆದ ಘನತೆ ಮತ್ತು ಮಹತ್ವವಿದೆ. ಅಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಯನ್ನು ದೇಶದ ಇತಿಹಾಸದಲ್ಲೇ ಅತ್ಯಂತ ಕ್ರೂರ ಭಯೋತ್ಪಾದಕ ದಾಳಿಯ ಸೂತ್ರಧಾರಿ ಅಜ್ಮಲ್ ಕಸಬ್ ಜೊತೆ ಹೋಲಿಸುವುದು ಟೀಕೆಗಿಂತ ವೈಯಕ್ತಿಕ ದ್ವೇಷ ಮತ್ತು ರಾಜಕೀಯ ದುರುದ್ದೇಶದ ಪ್ರತೀಕವಾಗಿದೆ.
ಭಯೋತ್ಪಾದನೆ ಮತ್ತು ರಾಜಕೀಯ !
ಮಾಜಿ ಸೇನಾಧಿಕಾರಿ ಎಂಬ ಕಾರಣಕ್ಕೆ ಅವರ ಮಾತಿಗೆ ಜನರಲ್ಲಿ ಹೆಚ್ಚಿನ ವಿಶ್ವಾಸ ಮತ್ತು ಗೌರವ ಇರುತ್ತದೆ. ಆ ಗೌರವವನ್ನು ರಾಜಕೀಯ ದ್ವೇಷ ಸಾಧನೆಗೆ ಬಳಸಿಕೊಳ್ಳುವುದು ಸೇನೆಗೆ ಗೌರವಕ್ಕೂ ಧಕ್ಕೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಗಿಂತ ಹೆಚ್ಚಾಗಿ ದ್ವೇಷ ಹರಡುವ ಅಸ್ತ್ರವಾಗುತ್ತಿವೆ. ಯಾವುದೇ ಸಾಕ್ಷ್ಯವಿಲ್ಲದೆ, ಪರಿಶೀಲನೆ ಇಲ್ಲದೆ ಇಂತಹ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಂಚಿಕೊಳ್ಳುವುದರಿಂದ ಸಮಾಜದಲ್ಲಿ ವಿಭಜನೆ ಮತ್ತು ಉದ್ವಿಗ್ನತೆ ಹೆಚ್ಚಾಗುತ್ತದೆ. ಕಾನೂನಿನ ಪ್ರಕಾರ ಇಂತಹ ಕೃತ್ಯಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ, ಮಾನನಷ್ಟ ಮತ್ತು ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತವೆ.
ಇಲ್ಲಿ ಮುಖ್ಯವಾದ ವಿಷಯವೆಂದರೆ ಭಯೋತ್ಪಾದನೆಯನ್ನು ರಾಜಕೀಯ ವಿರೋಧದ ಜೊತೆ ಸಮೀಕರಿಸುವುದು. ಕಸಬ್ನಂತಹ ಉಗ್ರನು ನೂರಾರು ಅಮಾಯಕರನ್ನು ಕೊಂದಿದ್ದಾನೆ, ಅವನ ಹೋಲಿಕೆಯನ್ನು ರಾಜಕೀಯ ನಾಯಕನಿಗೆ ಮಾಡುವುದು ರಾಜಕೀಯ ಎದುರಾಳಿಯನ್ನು ದೇಶದ್ರೋಹಿ ಎಂದು ಬಿಂಬಿಸುವ ಅಪಾಯಕಾರಿ ಪ್ರವೃತ್ತಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವಿರಬೇಕು, ಆದರೆ ಭಿನ್ನಾಭಿಪ್ರಾಯದ ಹೆಸರಿನಲ್ಲಿ ವ್ಯಕ್ತಿಯನ್ನು ದೇಶದ ಶತ್ರುವನ್ನಾಗಿ ಚಿತ್ರಿಸುವುದು ಸ್ವೀಕಾರರ್ಹವಲ್ಲ ಎಂಬ ಆಕ್ರೋಶ ಕೇಳಿಬಂದಿದೆ.




