ನವದೆಹಲಿ : ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಹಿರಿಯ ನಾಯಕ ಶಶಿ ತರೂರ್ ಅವರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೇವಲ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಲೇಖನ ಬರೆಯುವುದಕ್ಕೆ ಸೀಮಿತವಾಗದೆ ಪಕ್ಷ ಹಮ್ಮಿಕೊಳ್ಳುವ ಧರಣಿ ಮತ್ತು ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ನಡೆ ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ತರೂರ್ ಅವರು ಗಾಂಧಿ ಜಯಂತಿಯಂದು ಬೃಹತ್ ಪ್ರತಿಭಟನೆ ಆಯೋಜಿಸಬೇಕು ಎಂದು ಸಲಹೆ ನೀಡಿದ್ದರು. ಅದಕ್ಕೆ ತಕ್ಷಣ ಉತ್ತರಿಸಿದ ಖರ್ಗೆ, ಸಲಹೆ ಸರಿಯಿದೆ ಆದರೆ ನೀವೂ ಆ ಪ್ರತಿಭಟನೆಯಲ್ಲಿ ಭಾಗವಹಿಸಬೇಕು, ಬರವಣಿಗೆಗೆ ಮಾತ್ರ ಸೀಮಿತರಾಗಬೇಡಿ ಎಂದು ನೇರವಾಗಿ ತಿಳಿಸಿದ್ದಾರೆ.
ಇದು ಮೊದಲ ಬಾರಿಯ ಘಟನೆಯಲ್ಲ. ಕಳೆದ ಜೂನ್ 2025ರಲ್ಲೂ ಖರ್ಗೆ ಅವರು ತರೂರ್ ಅವರ ಲೇಖನಗಳ ಬಗ್ಗೆ ಸಾರ್ವಜನಿಕವಾಗಿ ಹಗುರವಾಗಿ ಟೀಕಿಸಿದ್ದರು. ಇತ್ತೀಚೆಗೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಖರ್ಗೆ ಅವರು ಸಭೆ ನಡೆಸಿದ ಸ್ಥಳದಲ್ಲಿ ನಡೆದ ಶುದ್ಧೀಕರಣ ಕಾರ್ಯ ವಿವಾದವಾದಾಗ ಪಕ್ಷದ ಹಿರಿಯರು ಬಹಿರಂಗವಾಗಿ ಬೆಂಬಲಿಸಿ ಖಂಡಿಸಲಿಲ್ಲ ಎಂಬ ಬೇಸರವನ್ನು ಖರ್ಗೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿನ ಈ ಮಾತುಕತೆ ಹೆಚ್ಚು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ – ಸಿಇಸಿ ವಿರುದ್ಧ ಖರ್ಗೆ ಕೆಂಡಾಮಂಡಲ
ಅದೇ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ಅಂತ್ಯ ಸಮೀಪದಲ್ಲಿದೆ ಎಂದು ನಾಯಕರಿಗೆ ಧೈರ್ಯ ತುಂಬಿದ್ದಾರೆ. ಒಂದು ಪ್ರಮುಖ ನೇಮಕಾತಿ ವಿಚಾರದಲ್ಲಿ ತಮ್ಮ ವಿರೋಧವನ್ನು ಪ್ರಧಾನಿ ಮೋದಿ ಪರಿಗಣಿಸಲಿಲ್ಲ ಎಂದೂ, ಆಗ ಮೋದಿ ಅವರು ಇಂದಿರಾ ಗಾಂಧಿ ಇದ್ದರೂ ಇದೇ ನಿರ್ಧಾರ ಮಾಡುತ್ತಿದ್ದರು ಎಂದು ಹೇಳಿದ್ದರು ಎಂದು ರಾಹುಲ್ ಹಂಚಿಕೊಂಡಿದ್ದಾರೆ. ಅದಕ್ಕೆ ಇಂದಿರಾ ಗಾಂಧಿ ಎಂದಿಗೂ ನೋಟು ನಿಷೇಧದಂತಹ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಎಂಬ ಯೋಚನೆ ತಮಗೆ ಬಂದಿತ್ತು ಎಂದು ಅವರು ಹೇಳಿದ್ದಾರೆ. ಜೊತೆಗೆ ನಮ್ಮ ನಂತರ ಅಧಿಕಾರಕ್ಕೆ ಬರುವುದು ನೀವೇ ಎಂದು ಮೋದಿ ಅವರೇ ಹೇಳಿದ್ದಾರೆ ಎಂದು ತಿಳಿಸಿ, ಪ್ರಧಾನಿಯವರೇ ಕಾಂಗ್ರೆಸ್ ಮರಳುವುದನ್ನು ಒಪ್ಪಿಕೊಳ್ಳುವಾಗ ನಮ್ಮ ನಾಯಕರು ಏಕೆ ಅನುಮಾನಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಲೇಖನ ರಾಜಕಾರಣದಿಂದ ಹೋರಾಟದ ರಾಜಕಾರಣದತ್ತ !
ತಮ್ಮ ಅಂಕಣಗಳ ಮೂಲಕ ಅಭಿಪ್ರಾಯ ಮಂಡಿಸುವ ನಾಯಕರಿಗೆ ನೆಲದ ಹೋರಾಟದಲ್ಲಿ ತೊಡಗುವಂತೆ ಖರ್ಗೆ ನೆನಪಿಸುತ್ತಿದ್ದಾರೆ. ಇದು ತರೂರ್ ಅವರಂತಹ ಆಂಗ್ಲ ಪ್ರಭಾವಿ, ಬೌದ್ಧಿಕ ವರ್ಚಸ್ಸಿನ ನಾಯಕರು ಕಾರ್ಯಕರ್ತರ ಜೊತೆ ಬೀದಿಗಿಳಿಯಬೇಕೆಂಬ ಒತ್ತಾಯವಾಗಿದೆ. ಹಲ್ದ್ವಾನಿ ಪ್ರಕರಣದಲ್ಲಿ ಬೆಂಬಲ ಸಿಗದ ನೋವಿನ ಹಿನ್ನೆಲೆಯಲ್ಲಿ ಖರ್ಗೆ ಅವರು ಒಗ್ಗಟ್ಟು ಮತ್ತು ಸಾಮೂಹಿಕ ಹೊಣೆಯನ್ನು ಒತ್ತಿ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಮಾತು ಪಕ್ಷದಲ್ಲಿ ಆತ್ಮವಿಶ್ವಾಸ ತುಂಬುವ ಯತ್ನವಾಗಿದ್ದು, ಮೋದಿ ಅವರ ಹೇಳಿಕೆಯನ್ನು ಬಳಸಿಕೊಂಡು ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಭರವಸೆಯನ್ನು ಮೂಡಿಸಲು ಪ್ರಯತ್ನಿಸಿದ್ದಾರೆ. ಒಟ್ಟಾರೆ ಲೇಖನ ರಾಜಕಾರಣದಿಂದ ಹೋರಾಟದ ರಾಜಕಾರಣದತ್ತ ಪಕ್ಷ ಹೆಚ್ಚು ಗಮನ ಹರಿಸಬೇಕೆಂಬ ನಾಯಕತ್ವದ ಸೂಚನೆ ಇದರಲ್ಲಿದೆ.




