ಶಿವಮೊಗ್ಗ : ರಾಜ್ಯದಲ್ಲಿ ಇಂದಿನಿಂದ 84 ಕ್ಷೇತ್ರಗಳಲ್ಲಿ 84 ದಿನಗಳ ಕಾಲ ಕಾಂಗ್ರೆಸ್ (Congress) ಬೃಹತ್ ಭಾರತ್ ಜೋಡೋ 2.0 ಪಾದಯಾತ್ರೆ ಆರಂಭವಾಗಲಿದೆ. ಕೇಂದ್ರ ಚುನಾವಣಾ ಆಯೋಗದ ಲೋಪಗಳು ಮತ್ತು ಕಾರ್ಯನಿರ್ವಹಣೆಯಲ್ಲಿನ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಒಟ್ಟು 84 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಗುರಿ ಹೊಂದಿದೆ.
ಈ ಯಾತ್ರೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಅಧಿಕೃತ ಚಾಲನೆ ಸಿಗಲಿದ್ದು, ಮೊದಲ ದಿನದ ನಡಿಗೆಯಲ್ಲಿ ಸಚಿವರಾದ ಮಧು ಬಂಗಾರಪ್ಪ, ರುದ್ರಪ್ಪ ಲಮಾಣಿ, ಜಮೀರ್ ಅಹ್ಮದ್ ಖಾನ್ ಮತ್ತು ಹಿರಿಯ ನಾಯಕ ಬಿ ಎಲ್ ಶಂಕರ್ ಸೇರಿದಂತೆ ಪ್ರಮುಖ ನಾಯಕರು ಹೆಜ್ಜೆ ಹಾಕಲಿದ್ದಾರೆ. ಅಕ್ಟೋಬರ್ 4 ಮತ್ತು 5 ರಿಂದ ಈ ಯಾತ್ರೆ ಇತರೆ ಕ್ಷೇತ್ರಗಳಿಗೆ ವಿಸ್ತರಣೆಯಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವ 84 ಕ್ಷೇತ್ರಗಳನ್ನು ಮಾತ್ರ ಈ ಬಾರಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ಹಿಂದೆ ರಾಹುಲ್ ಗಾಂಧಿ ನಡೆಸಿದ್ದ ಮೊದಲ ಭಾರತ್ ಜೋಡೋ ಯಾತ್ರೆ ಸಾಗಿದ್ದ ಕ್ಷೇತ್ರಗಳನ್ನು ಹೊರಗಿಡಲಾಗಿದೆ. ಪ್ರತಿದಿನ ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆಯವರೆಗೆ ಪಾದಯಾತ್ರೆ ನಡೆಸಿ ನಂತರ ಬೃಹತ್ ಸಾರ್ವಜನಿಕ ಸಭೆ ಆಯೋಜಿಸುವ ಯೋಜನೆ ಇದೆ.
ಇದನ್ನೂ ಓದಿ: ಕಾಂಗ್ರೆಸ್ ಜೊತೆ ಸಖ್ಯ ಕಡಿದುಕೊಂಡ ಡಿಎಂಕೆ, ಇಂಡಿಯಾ ಒಕ್ಕೂಟದಿಂದ ವಾಕ್ ಔಟ್ !
ರಾಹುಲ್ ಗಾಂಧಿ 2022ರ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭಿಸಿದ ಐತಿಹಾಸಿಕ ಯಾತ್ರೆ 2022ರ ಸೆಪ್ಟೆಂಬರ್ 30 ರಂದು ಗುಂಡ್ಲುಪೇಟೆ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿದ್ದ ಸ್ಮರಣಾರ್ಥವಾಗಿ ಇದೇ ಸೆಪ್ಟೆಂಬರ್ 30 ರಂದೇ 2.0 ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಚುನಾವಣಾ ಆಯೋಗದ ಸಾಂವಿಧಾನಿಕ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ತಿಳಿಸಿದ್ದು, ಪಕ್ಷ ಬಲವರ್ಧನೆ ಮತ್ತು ಬಿಜೆಪಿ ನ್ಯೂನತೆಗಳನ್ನು ಜನರಿಗೆ ತಿಳಿಸುವ ಗುರಿಯೂ ಇದರ ಹಿಂದಿದೆ.
84 ಕ್ಷೇತ್ರಗಳೇ ಟಾರ್ಗೆಟ್ !
ಇದು ಕೇವಲ ಜಾಗೃತಿ ಅಭಿಯಾನವಾಗಿ ಕಾಣುವುದಿಲ್ಲ, ಬದಲಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜುಗೊಳಿಸುತ್ತಿರುವ ಸುದೀರ್ಘ ಸಿದ್ಧತೆಯಾಗಿದೆ. ಕಳೆದ ಬಾರಿ ಸೋತ 84 ಕ್ಷೇತ್ರಗಳನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಇದಕ್ಕೆ ಸ್ಪಷ್ಟ ನಿದರ್ಶನ, ಏಕೆಂದರೆ ಗೆದ್ದ ಕ್ಷೇತ್ರಗಳಲ್ಲಿ ಸಂಘಟನೆ ಈಗಾಗಲೇ ಬಲವಾಗಿದೆ, ಆದರೆ ಸೋತ ಕಡೆ ಕಾರ್ಯಕರ್ತರಲ್ಲಿ ನಿರಾಸೆ ಮತ್ತು ಸಂಪರ್ಕ ಕೊರತೆ ಇದೆ. ಈ ನಡಿಗೆಯ ಮೂಲಕ ಬೂತ್ ಮಟ್ಟದವರೆಗೆ ಪಕ್ಷವನ್ನು ಪುನರುಜ್ಜೀವನಗೊಳಿಸುವುದು ಪಕ್ಷದ ಉದ್ದೇಶ. ಚುನಾವಣಾ ಆಯೋಗದ ವೈಫಲ್ಯ ಮತ್ತು ಸಾಂವಿಧಾನಿಕ ಜವಾಬ್ದಾರಿ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡಿರುವುದು ರಾಷ್ಟ್ರ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸುತ್ತಿರುವ ಮತಗಳ್ಳತನ ಆರೋಪಕ್ಕೆ ರಾಜ್ಯದಲ್ಲಿ ಪೂರಕ ವಾತಾವರಣ ಸೃಷ್ಟಿಸುವ ಪ್ರಯತ್ನ ಎನ್ನಬಹುದು.
ಬಿಜೆಪಿಯು ಕೇಂದ್ರ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ನಿರೂಪಣೆಯನ್ನು ಮತದಾರರ ಮನಸ್ಸಿನಲ್ಲಿ ನಾಟಿ ಮಾಡುವ ಲೆಕ್ಕಾಚಾರ ಇದರ ಹಿಂದೆ ಇದೆ. ಶಿಕಾರಿಪುರದಿಂದ ಆರಂಭಿಸುವುದು ಕೂಡ ಸಂಕೇತಾತ್ಮಕ, ಇದು ಬಿಜೆಪಿಯ ಭದ್ರಕೋಟೆ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಪ್ರಭಾವದ ಕೇಂದ್ರ, ಅಲ್ಲಿಂದಲೇ ಸವಾಲು ಹಾಕುವ ಮೂಲಕ ಕಾಂಗ್ರೆಸ್ ತನ್ನ ಆತ್ಮವಿಶ್ವಾಸವನ್ನು ತೋರಿಸಲು ಬಯಸಿದೆ. ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಇದು ನಾಯಕತ್ವ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೊದಲ ಅಗ್ನಿಪರೀಕ್ಷೆ.




