☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

CONGRESS: ಕಾಂಗ್ರೆಸ್ ಸರ್ಕಾರದಲ್ಲಿ ಬಿಜೆಪಿ ಅವಧಿಗಿಂತ ಅತಿ ಹೆಚ್ಚು ಕಮಿಷನ್ ದಂಧೆ – ಗುತ್ತಿಗೆದಾರರ ಆಕ್ರೋಶ ಸ್ಫೋಟ

Image of Contracter allegations on Congress

ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ಅವಧಿಯಲ್ಲಿ ಕಮಿಷನ್ ದಂಧೆ ಹಿಂದಿನ ಸರ್ಕಾರಕ್ಕಿಂತಲೂ ಹೆಚ್ಚಾಗಿದ್ದು ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪದೊಂದಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ರಾಜ್ಯಾದ್ಯಂತ ಸುಮಾರು ಒಂದೂವರೆ ಲಕ್ಷ ಗುತ್ತಿಗೆದಾರರು ಮತ್ತು ಅವರ ಕುಟುಂಬಗಳು ಬಾಕಿ ಹಣ ಸಿಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಬೇಕು ಎಂದು ಸಂಘ ಆಗ್ರಹಿಸಿದೆ.

ಇದನ್ನೂ ಓದಿ : ಕಾಂಗ್ರೆಸ್ ಜೊತೆ ಸಖ್ಯ ಕಡಿದುಕೊಂಡ ಡಿಎಂಕೆ, ಇಂಡಿಯಾ ಒಕ್ಕೂಟದಿಂದ ವಾಕ್ ಔಟ್ !

ಈ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬಾಕಿ ಇರುವ ಎಲ್ಲ ಬಿಲ್‌ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರೂ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು. ಲೋಕೋಪಯೋಗಿ ಇಲಾಖೆಯನ್ನು ಹೊರತುಪಡಿಸಿದರೆ ಉಳಿದ ಯಾವ ಇಲಾಖೆಗಳಲ್ಲೂ ಹಣ ಪಾವತಿಯಾಗುತ್ತಿಲ್ಲ, ಗುತ್ತಿಗೆದಾರರಿಗೆ ಕೊಡಬೇಕಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಲಾಗುತ್ತಿದೆ ಎಂಬುದು ಅವರ ದೂರು. ಚುನಾವಣೆಗೆ ಮುನ್ನ ತಮ್ಮನ್ನು ಕರೆದು ಮಾತುಕತೆ ನಡೆಸಿದ್ದ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಬಾಕಿ ಪಾವತಿಸುವ ಭರವಸೆ ನೀಡಿದ್ದರು, ಆದರೆ ಮೂರು ವರ್ಷ ಕಳೆದರೂ ಹಣ ಬಂದಿಲ್ಲ. ಹಣ ಬಿಡುಗಡೆ ಮಾಡದಿದ್ದರೆ ದಾಖಲೆಗಳ ಸಮೇತ ಭ್ರಷ್ಟಾಚಾರವನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದ ಅವರು, ತಮ್ಮ ಬೆಂಬಲದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಸುಮಾರು 40 ಸಾವಿರ ಕೋಟಿ ರೂಪಾಯಿ ಉಳಿಸಿಕೊಂಡಿದೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೌನ ವಹಿಸಿದ್ದಾರೆ ಎಂದು ಕಿಡಿಕಾರಿದರು.

ಮತ್ತೆ ನೆನಪಾದ 40 ಪರ್ಸೆಂಟ್ ಕಮಿಷನ್ !

ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ತಿರುವು ಪಡೆದಿದೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಇದೇ ಗುತ್ತಿಗೆದಾರರ ಸಂಘ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿತ್ತು, ಅದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಈಗ ಅದೇ ಸಂಘ ಕಾಂಗ್ರೆಸ್ ಅವಧಿಯಲ್ಲಿ ಕಮಿಷನ್ ಇನ್ನೂ ಜಾಸ್ತಿಯಾಗಿದೆ ಎಂದು ಹೇಳುತ್ತಿರುವುದು ಆಡಳಿತ ಪಕ್ಷಕ್ಕೆ ನೈತಿಕ ಹಿನ್ನಡೆಯಾಗಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕ 60 ಸಾವಿರ ಕೋಟಿಗೂ ಹೆಚ್ಚು ಹಣ ಬೇಕಾಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳ ಬಿಲ್ ಬಾಕಿ ಉಳಿಯುತ್ತಿದೆ ಎಂಬ ಚರ್ಚೆ ಈಗಾಗಲೇ ಇದೆ. ಗುತ್ತಿಗೆದಾರರ ವ್ಯವಸ್ಥೆ ಕುಸಿದರೆ ಕಾಮಗಾರಿಗಳ ಗುಣಮಟ್ಟ ಕುಸಿಯುತ್ತದೆ, ಸಾಲದ ಸುಳಿಗೆ ಸಿಲುಕಿ ಸಣ್ಣ ಗುತ್ತಿಗೆದಾರರು ಅಪಾಯದಲ್ಲಿದ್ದಾರೆ. ಸರ್ಕಾರ ಪಾರದರ್ಶಕ ಬಿಲ್ ಟ್ರ್ಯಾಕಿಂಗ್ ವ್ಯವಸ್ಥೆ, ಕಾಲಮಿತಿಯ ಪಾವತಿ ನಿಯಮ ಮತ್ತು ಕಮಿಷನ್ ಜಾಲದ ವಿರುದ್ಧ ಸ್ವತಂತ್ರ ತನಿಖೆ ಜಾರಿಗೆ ತರದಿದ್ದರೆ, ಇದು ಕೇವಲ ಆರ್ಥಿಕ ಬಾಕಿಯ ಸಮಸ್ಯೆಯಾಗಿ ಉಳಿಯದೆ ಆಡಳಿತದ ವಿಶ್ವಾಸಾರ್ಹತೆಯ ಪ್ರಶ್ನೆಯಾಗುತ್ತದೆ. ಈಗಾಗಲೇ ಗ್ಯಾರೆಂಟಿ ಯೋಜನೆಗಳ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಕ್ಕೆ ಗುತ್ತಿಗೆದಾರರ ಈ ಆಕ್ರೋಶ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.