ಗುಜರಾತ್: ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಗುಜರಾತ್ನ ಏಕತಾ ನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ (PM Modi) ದೇಶದ ಏಕತೆಯೇ ಭಾರತವನ್ನು ಮುನ್ನಡೆಸುವ ಶಕ್ತಿ ಎಂದು ಹೇಳುತ್ತಾ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ವರ್ಷ ದೇಶವನ್ನು ನಕ್ಸಲಿಸಂ ಮತ್ತು ಮಾವೋವಾದದಿಂದ ಮುಕ್ತಗೊಳಿಸುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿದ್ದ ಭರವಸೆ ಈಡೇರಿದೆ ಎಂದು ಅವರು ಹೇಳಿದರು. ನಕ್ಸಲರು ನಿರ್ಮೂಲನೆಯಾಗಿದ್ದರೂ ದಿಮಾಗಿ ನಕ್ಸಲರು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಎಚ್ಚರಿಸಿದರು. ಸಾಮಾಜಿಕ ಮಾಧ್ಯಮವನ್ನು ವದಂತಿ ಹರಡಲು ಮತ್ತು ಭಾರತದ ವರ್ಚಸ್ಸಿಗೆ ಮಸಿ ಬಳಿಯಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದ ಅವರು, ಇದನ್ನು ದೇಶದ ನಾಗರಿಕರು ಒಟ್ಟಾಗಿ ಎದುರಿಸಬೇಕು ಎಂದು ಕರೆ ನೀಡಿದರು.
ವಿರೋಧ ಪಕ್ಷ ತನ್ನ ಕರ್ತವ್ಯ ಮರೆತಿದೆ..!
ಸಂವಿಧಾನ ನಮ್ಮನ್ನು ಜನರಿಗೆ ಜವಾಬ್ದಾರರನ್ನಾಗಿ ಮಾಡುತ್ತದೆ ಎಂದ ಮೋದಿ, ವಿರೋಧ ಪಕ್ಷ ತನ್ನ ಕರ್ತವ್ಯವನ್ನು ತೊರೆದು ದೇಶವನ್ನು ವಿಭಜಿಸಲು ಹೊರಟಿರುವ ಅಡ್ಡಗಾಲು ಶಕ್ತಿಯಾಗಿ ಬದಲಾಗಿದೆ ಎಂದು ಆರೋಪಿಸಿದರು. ಇದು ಆರೋಗ್ಯಕರ ವಿರೋಧವಲ್ಲ, ಬರೀ ಅಡ್ಡಿಪಡಿಸುವ ರಾಜಕೀಯವಾಗಿದ್ದು, ಸಂವಿಧಾನದ ಘನತೆ ಮತ್ತು ಮಿತಿಗಳನ್ನೇ ಹಾಳುಗೆಡವುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಭಾರತ ಮಾತೆಯ ಮಕ್ಕಳ ನಡುವೆ ಸಂಘರ್ಷ ಹುಟ್ಟಿಸಿ ವಿಭಜಿಸುವ ಸಂಚುಗಳು ನಡೆಯುತ್ತಿವೆ ಎಂದ ಪ್ರಧಾನಿ, ಅಧಿಕಾರ ಸಿಗದೆ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಹತಾಶೆಯೇ ವಿರೋಧ ಪಕ್ಷಗಳನ್ನು ಕಾಡುತ್ತಿದೆ ಎಂದರು. ವಿದೇಶದಲ್ಲಿ ಯಾರು ಯಾರನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದಾರೆ, ಭಾರತ ವಿರೋಧಿ ಶಕ್ತಿಗಳು ಯಾರಿಗೆ ಬೆಂಬಲ ನೀಡುತ್ತಿವೆ, ಶತ್ರುಗಳ ಭಾಷೆ ಮಾತನಾಡುತ್ತಿರುವವರು ಯಾರು ಎಂಬುದನ್ನು ಗುರುತಿಸಿ ಒಟ್ಟಾಗಿ ಎದುರಿಸಬೇಕೆಂದು ಕರೆ ನೀಡಿದರು. ಗಡಿ ಭದ್ರತೆ, ಒಳನುಸುಳುವಿಕೆ ಮತ್ತು ಜನಸಂಖ್ಯಾ ಬದಲಾವಣೆ ತಡೆ, ಜಾತ್ಯತೀತ ನಾಗರಿಕ ಸಂಹಿತೆಯತ್ತ ಸಾಗುವ ಅಗತ್ಯವನ್ನು ಮೋದಿ ಒತ್ತಿ ಹೇಳಿದರು. ಮಧ್ಯಪ್ರಾಚ್ಯ ಸಂಘರ್ಷದಿಂದ ವಿಶ್ವದಾದ್ಯಂತ ಇಂಧನ ಬೆಲೆ ಏರಿದ್ದರೂ ಭಾರತ ತನ್ನ ನಾಗರಿಕರ ಮೇಲೆ ಜಾಗತಿಕ ಇಂಧನ ಬಿಕ್ಕಟ್ಟಿನ ಹೊರೆ ಬೀಳಲು ಬಿಡಲಿಲ್ಲ ಎಂಬುದು ದೇಶದ ಶಕ್ತಿ ಎಂದು ಮೋದಿ ಹೇಳಿದರು.
ಇದನ್ನೂ ಓದಿ : ದಮ್ಮಿದ್ದರೆ ಮೋದಿ, ಅಮಿತ್ ಶಾ, ನನ್ನ ಜೊತೆ ನೇರ ಸಂವಾದಕ್ಕೆ ಬರಲಿ
ಏಕತಾ ದಿವಸದ ವೇದಿಕೆಯಿಂದ ಪ್ರಧಾನಿ ಮೋದಿ ನೀಡಿರುವ ಈ ಹೇಳಿಕೆ ಮುಂಬರುವ ರಾಜಕೀಯ ಹೋರಾಟದ ದಿಕ್ಕನ್ನು ತೋರಿಸುತ್ತಿದೆ. ನಕ್ಸಲಿಸಂ ಅಂತ್ಯವಾಗಿದೆ ಎಂಬ ಹೇಳಿಕೆ ಸರ್ಕಾರದ ಭದ್ರತಾ ನೀತಿಯ ಯಶಸ್ಸಿನ ಸಂಕೇತವಾದರೂ ದಿಮಾಗಿ ನಕ್ಸಲರು ಎಂಬ ಹೊಸ ಪದದ ಮೂಲಕ ಮೋದಿ ಸೈದ್ಧಾಂತಿಕ ವಿರೋಧವನ್ನು ರಾಷ್ಟ್ರ ವಿರೋಧಿ ಚಟುವಟಿಕೆಯ ಜೊತೆ ಜೋಡಿಸಲು ಯತ್ನಿಸುತ್ತಿದ್ದಾರೆ ಎಂಬ ವಿಮರ್ಶೆಯೂ ಕೇಳಿಬರುತ್ತದೆ. ಸಾಮಾಜಿಕ ಮಾಧ್ಯಮದ ದುರ್ಬಳಕೆ ನಿಜಕ್ಕೂ ಗಂಭೀರ ಸಮಸ್ಯೆಯಾದರೂ ವಿರೋಧ ಪಕ್ಷವನ್ನು ಸಂಪೂರ್ಣವಾಗಿ ಅಡ್ಡಗಾಲು ಶಕ್ತಿ ಎಂದು ಬಣ್ಣಿಸುವುದು ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ಪಾತ್ರದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಗಡಿ ಭದ್ರತೆ ಮತ್ತು ನಾಗರಿಕ ಸಂಹಿತೆಯಂತಹ ವಿಷಯಗಳನ್ನು ಏಕತೆ ಸಂದೇಶದೊಂದಿಗೆ ಜೋಡಿಸುವ ಮೂಲಕ ಮೋದಿ ರಾಷ್ಟ್ರೀಯತೆಯನ್ನು ತಮ್ಮ ರಾಜಕೀಯ ಸಂದೇಶದ ಕೇಂದ್ರವಾಗಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.




