PAKISTAN: ಸೌದಿ, ಪಾಕಿಸ್ತಾನ & ಟರ್ಕಿ ನಡುವೆ ಮಿಲಿಟರಿ ಮೈತ್ರಿ – ಭಾರತ ಹೈಅಲರ್ಟ್

ಮೆಕ್ಕಾದ ಅಲ್-ಸಫಾ ಅರಮನೆಯಲ್ಲಿ ನಡೆದ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳು ಐತಿಹಾಸಿಕ ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ಕ್ಕೆ ಅಂಕಿತ ಹಾಕಿವೆ. ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಶರೀಫ್, ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಈ ಒಪ್ಪಂದವನ್ನು ಪೂರ್ಣಗೊಳಿಸಿದ್ದಾರೆ. ಈ ಭದ್ರತಾ ಚೌಕಟ್ಟಿನ ಪ್ರಕಾರ, ಮೂರು ದೇಶಗಳಲ್ಲಿ ಯಾವುದಾದರೂ ಒಂದರ ಮೇಲೆ ಸಶಸ್ತ್ರ ಆಕ್ರಮಣ ನಡೆದರೆ, ಅದನ್ನು ಮೂರೂ ರಾಷ್ಟ್ರಗಳ ಮೇಲಿನ ಜಂಟಿ ದಾಳಿ ಎಂದು ಪರಿಗಣಿಸಿ ಒಟ್ಟಾಗಿ ಎದುರಿಸಲಾಗುತ್ತದೆ.

ಮಧ್ಯಪ್ರಾಚ್ಯ ಹಾಗೂ ಕೆಂಪು ಸಮುದ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸೃಷ್ಟಿಯಾಗಿರುವ ತೀವ್ರ ಭದ್ರತಾ ಅಭದ್ರತೆಯನ್ನು ನಿಯಂತ್ರಿಸಲು ಈ ಮೈತ್ರಿಕೂಟ ರಚನೆಯಾಗಿದೆ. ಪಾಕಿಸ್ತಾನ ಈಗಾಗಲೇ ಸೌದಿಗೆ ತನ್ನ ಮಿಲಿಟರಿ ಪಡೆ ಹಾಗೂ ಯುದ್ಧ ವಿಮಾನಗಳನ್ನು ಜಂಟಿ ಅಭ್ಯಾಸಕ್ಕಾಗಿ ರವಾನಿಸಿದೆ. ಈ ಹೊಸ ತ್ರಿಪಕ್ಷೀಯ ಪಾಲುದಾರಿಕೆ ಸೈನ್ಯದ ಸಾಮರ್ಥ್ಯ ವೃದ್ಧಿ, ಗುಪ್ತಚರ ಮಾಹಿತಿ ವಿನಿಮಯ ಮತ್ತು ರಕ್ಷಣಾ ತಂತ್ರಜ್ಞಾನದ ಹಂಚಿಕೆಗೆ ಉತ್ತೇಜನ ನೀಡಲಿದೆ. ಈ ಮಹತ್ವದ ಬದಲಾವಣೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದೇಶದ ಹಿತಾಸಕ್ತಿಗೆ ತಕ್ಕಂತೆ ಅಧ್ಯಯನ ನಡೆಸುತ್ತಿದೆ.

ಇದು ಭಾರತದ ಕಡುವೈರಿ ಪಾಕಿಸ್ತಾನಕ್ಕೆ ಆರ್ಥಿಕ ಹಾಗೂ ರಾಜತಾಂತ್ರಿಕವಾಗಿ ಹೊಸ ಬಲ ನೀಡುವ ಸಾಧ್ಯತೆಯಿದೆ. ರಕ್ಷಣಾ ಕ್ಷೇತ್ರದಲ್ಲಿ ಟರ್ಕಿಯ ಸುಧಾರಿತ ಡ್ರೋನ್ ತಂತ್ರಜ್ಞಾನ ಮತ್ತು ಸೌದಿಯ ಅಪಾರ ಆರ್ಥಿಕ ಸಂಪನ್ಮೂಲದೊಂದಿಗೆ ಪಾಕಿಸ್ತಾನದ ಸೇನಾ ಬಲ ಸಂಯೋಜನೆಗೊಳ್ಳುತ್ತಿರುವುದು ದಕ್ಷಿಣ ಏಷ್ಯಾದ ಭದ್ರತಾ ಸಾಮರ್ಥ್ಯದ ಮೇಲೆ ಗಮನಾರ್ಹ ಪ್ರಭಾವ ಬೀರಬಹುದು. ಈ ಬೆಳವಣಿಗೆ ಇಸ್ಲಾಮಿಕ್ ರಾಷ್ಟ್ರಗಳ ನಡುವೆ ಒಂದು ಹೊಸ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವ, ತಿರುಕನ ಕನಸಿನಂತೆ ಪ್ರಯತ್ನ ಮಾಡುತ್ತಿದೆ.

ಜಾಗತಿಕವಾಗಿ ರಾಜಕೀಯದ ದೃಷ್ಟಿಯಿಂದ, ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕಾದ ಅಗತ್ಯವಿದೆ. ಸೌದಿ ಅರೇಬಿಯಾ ಜೊತೆ ಭಾರತ ಅತ್ಯುತ್ತಮ ವಾಣಿಜ್ಯ ಮತ್ತು ರಕ್ಷಣಾ ಬಾಂಧವ್ಯ ಹೊಂದಿದ್ದರೂ, ಪಾಕಿಸ್ತಾನದೊಂದಿಗಿನ ಸೌದಿಯ ಈ ಮಿಲಿಟರಿ ಬದ್ಧತೆ ಭಾರತಕ್ಕೆ ಹೊಸ ಸವಾಲನ್ನು ಒಡ್ಡಬಹುದು. ಹೀಗಾಗಿ, ದಕ್ಷಿಣ ಏಷ್ಯಾದಲ್ಲಿ ತನ್ನ ಭದ್ರತಾ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಭಾರತ ಅರಬ್ ರಾಷ್ಟ್ರಗಳೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕಾಗಿದೆ.