☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

CABINET : ಮಹಿಳಾ ಕೋಟಾದ ಒಂದು ಸ್ಥಾನ ಯಾರ ಪಾಲು? ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮತ್ತೆ ಸಚಿವ ಪಟ್ಟ..?

Image of Laxmi Hebbalkar about Cabinet
ಸಂಪುಟ ವಿಸ್ತರಣೆ (Cabinet) ಚರ್ಚೆ ಮತ್ತೆ ರಾಜ್ಯ ರಾಜಕಾರಣದ ಮುನ್ನೆಲೆಗೆ ಬಂದಿದೆ. ಖಾಲಿ ಇರುವ 2 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಚಟುವಟಿಕೆಗಳು ಬಿರುಸುಗೊಂಡಿವೆ

ಮುಖ್ಯಾಂಶಗಳು

  • ಲಕ್ಷ್ಮಿಗೆ ಒಲಿಯಲಿದ್ಯಾ ಅದೃಷ್ಟ..?
  • ಹೆಬ್ಬಾಳ್ಕರ್ ಗೆ ಮತ್ತೆ ಮಂತ್ರಿ ಸ್ಥಾನ ?

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ (Cabinet) ಚರ್ಚೆ ಮತ್ತೆ ರಾಜ್ಯ ರಾಜಕಾರಣದ ಮುನ್ನೆಲೆಗೆ ಬಂದಿದೆ. ಖಾಲಿ ಇರುವ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಚಟುವಟಿಕೆಗಳು ಬಿರುಸುಗೊಂಡಿವೆ. ಡಿಸೆಂಬರ್ 2ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿ ಹೈಕಮಾಂಡ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಹತ್ವದ ಮಾತುಕತೆಗಳು ನಡೆಯುತ್ತಿವೆ. ಖಾಲಿ ಸ್ಥಾನಗಳಿಗೆ ಹಲವು ಶಾಸಕರು ಪ್ರಯತ್ನ ನಡೆಸುತ್ತಿದ್ದರೂ, ಮಹಿಳಾ ಪ್ರಾತಿನಿಧ್ಯದ ದೃಷ್ಟಿಯಿಂದ ಒಂದು ಸ್ಥಾನ ಮಹಿಳಾ ಶಾಸಕರಿಗೆ ಸಿಗಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಗಟ್ಟಿಯಾಗುತ್ತಿದೆ.

ಹೆಬ್ಬಾಳ್ಕರ್ ಹೆಸರು ಮುಂಚೂಣಿಯಲ್ಲಿ..!

ಮಹಿಳಾ ಕೋಟಾದ ಆಕಾಂಕ್ಷಿಗಳ ಸಾಲಿನಲ್ಲಿ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅನ್ನಪೂರ್ಣ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಬೆಂಗಳೂರಿನಲ್ಲಿ ಮಾತನಾಡಿರುವ ಹೆಬ್ಬಾಳ್ಕರ್, ಮತ್ತೆ ಸಚಿವೆಯಾಗುವ ಬಗ್ಗೆ ಸ್ಪಷ್ಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮೂರು ವರ್ಷಗಳ ಕಾಲ ಸಚಿವೆಯಾಗಿ ಪ್ರಾಮಾಣಿಕವಾಗಿ ಮತ್ತು ಉತ್ತಮವಾಗಿ ಕೆಲಸ ಮಾಡಿದ್ದೇನೆ. ಆ ಕಾರ್ಯವೈಖರಿ ಬಗ್ಗೆ ತಮಗೆ ತೃಪ್ತಿ ಇದೆ. ಆದ್ದರಿಂದ ಮುಖ್ಯಮಂತ್ರಿಗಳು ತಮ್ಮ ಹೆಸರನ್ನೇ ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಸಂಪುಟ ವಿಸ್ತರಣೆ ಚರ್ಚೆಯನ್ನು ಮತ್ತಷ್ಟು ಬಿಸಿಯಾಗಿಸಿದೆ. ಹಿಂದಿನ ಆಡಳಿತ ಅನುಭವ ಮತ್ತು ಪಕ್ಷದ ಸೇವೆ ತಮಗೆ ನೆರವಾಗಲಿದೆ ಎಂಬ ನಿರೀಕ್ಷೆ ಅವರಲ್ಲಿದೆ.

ಇದನ್ನೂ ಓದಿ : ಕಾಂಗ್ರೆಸ್ ಇತಿಹಾಸವೇ ಹಾಗೆ – ಸೋನಿಯಾ ಆತ್ಮಚರಿತ್ರೆ ಓದಲ್ಲ ಎಂದ ಯದುವೀರ್

ಈ ಬೆಳವಣಿಗೆ ಕೇವಲ ಒಬ್ಬರ ಸಚಿವ ಆಕಾಂಕ್ಷೆಯ ವಿಚಾರವಲ್ಲ. ಮಹಿಳಾ ಪ್ರಾತಿನಿಧ್ಯ, ಪ್ರಾದೇಶಿಕ ಸಮತೋಲನ, ಅನುಭವ ಮತ್ತು ಪಕ್ಷದೊಳಗಿನ ನಿಷ್ಠೆ ಎಲ್ಲವೂ ಇಲ್ಲಿ ಲೆಕ್ಕಕ್ಕೆ ಬರುತ್ತದೆ. ಹೆಬ್ಬಾಳ್ಕರ್ ಪರವಾಗಿ ಅನುಭವದ ಬಲವಿದ್ದರೆ, ಅನ್ನಪೂರ್ಣ ಪರವಾಗಿ ಹೊಸ ಮುಖಕ್ಕೆ ಅವಕಾಶ ನೀಡುವ ವಾದ ಕೇಳಿಬರುತ್ತಿದೆ. ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿರುವುದರಿಂದ, ಸ್ಥಳೀಯ ಒತ್ತಡಕ್ಕಿಂತ ರಾಷ್ಟ್ರೀಯ ನಾಯಕತ್ವದ ರಾಜಕೀಯ ಲೆಕ್ಕಾಚಾರವೇ ನಿರ್ಣಾಯಕವಾಗಲಿದೆ. ಅಧಿವೇಶನಕ್ಕೂ ಮುನ್ನ ವಿಸ್ತರಣೆ ಆದರೆ ಸರ್ಕಾರಕ್ಕೆ ರಾಜಕೀಯ ಲಾಭ ಸಿಗಬಹುದು. ಆದರೆ ಒಬ್ಬರಿಗೆ ಸಿಕ್ಕರೆ ಮತ್ತೊಬ್ಬರ ಬೆಂಬಲಿಗರಲ್ಲಿ ಅಸಮಾಧಾನ ಮೂಡುವ ಅಪಾಯವೂ ಇದೆ. ಹೀಗಾಗಿ ಈ ಒಂದು ಸ್ಥಾನದ ನಿರ್ಧಾರ, ಮುಂದಿನ ದಿನಗಳಲ್ಲಿ ಪಕ್ಷದ ಒಗ್ಗಟ್ಟು ಮತ್ತು ಸರ್ಕಾರದ ಚಿತ್ರಣದ ಮೇಲೂ ಪರಿಣಾಮ ಬೀರಲಿದೆ.