ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುವ ಸೂಚನೆ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿ ಭೇಟಿ ಮಾಡಲು ಮುಂದಾಗಿದ್ದಾರೆ. ಇತ್ತೀಚಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಭೇಟಿಯ ಸುದ್ದಿ ರಾಜ್ಯದ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಹುಟ್ಟಿಸಿದ್ದು, ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಇದು ನಾಂದಿ ಹಾಡಬಹುದು ಎಂಬ ಚರ್ಚೆ ಆರಂಭವಾಗಿದೆ.
ಸ್ಟಿಂಗ್ ಕುರಿತು ಮಹತ್ವದ ಚರ್ಚೆ ..?
ಈ ಬೆಳವಣಿಗೆಗೆ ಕಾರಣವಾಗಿರುವುದು ಇತ್ತೀಚೆಗೆ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ತೇಜೋವಧೆ ಮಾಡಲು ಮತ್ತು ಬ್ಲಾಕ್ ಮೇಲ್ ಮಾಡಲು ಈ ಕೃತ್ಯ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿ ಈ ಕುತಂತ್ರದ ಹಿಂದೆ ತಮ್ಮದೇ ಪಕ್ಷದ ಒಳಗಿನವರ ಕೈವಾಡ ಇದೆ ಎಂದು ಹೇಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಪರವಾಗಿ ಬಹಿರಂಗವಾಗಿ ಮಾತನಾಡಿದ್ದು, ಅವರನ್ನು ಬೆಂಬಲಿಸಿದ್ದಾರೆ. ಕುಮಾರಸ್ವಾಮಿ ಅವರ ಈ ನಡೆಗೆ ಅವರ ಆಪ್ತ ವಲಯದಿಂದಲೂ ಉತ್ತಮ ಬೆಂಬಲ ಸಿಕ್ಕಿದ್ದು, ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಮಾತನಾಡುವಂತೆ ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಸ್ಟಿಂಗ್ ಗದ್ದಲದ ನಡುವೆಯೇ ಮಂಡ್ಯ ಭೂಮಿ ವಿವಾದ ಕೆದಕಿದ ಹೆಚ್.ಡಿ.ಕೆ
ಈ ಭೇಟಿ ಕೇವಲ ಸಾಂತ್ವನದ ಭೇಟಿಯಾಗಿ ಉಳಿಯುತ್ತದೆಯೋ ಅಥವಾ ದೊಡ್ಡ ರಾಜಕೀಯ ಸಂದೇಶವನ್ನು ರವಾನೆ ಮಾಡಲಿದ್ಯೋ ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಹಲವು ವರ್ಷಗಳಿಂದ ರಾಜಕೀಯವಾಗಿ ಎದುರಾಳಿಗಳಾಗಿದ್ದರೂ, ಈಗ ಒಂದೇ ವಿಚಾರದಲ್ಲಿ ಒಂದೇ ದಿಕ್ಕಿನಲ್ಲಿ ನಿಂತಿರುವುದು ಗಮನಾರ್ಹ. ಆಡಳಿತ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಬಿರುಕು ಮತ್ತು ಒತ್ತಡದ ನಡುವೆ ಕುಮಾರಸ್ವಾಮಿ ಅವರ ಬೆಂಬಲ ಸಿದ್ದರಾಮಯ್ಯ ಅವರಿಗೆ ರಾಜಕೀಯ ಶಕ್ತಿ ತಂದುಕೊಡಬಹುದು.
ಇನ್ನು ಮತ್ತೊಂದೆಡೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಭಾಗವಾಗಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವುದು ಮೈತ್ರಿ ರಾಜಕಾರಣದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಈ ಭೇಟಿ ಯಾವಾಗ ನಡೆಯುತ್ತದೆ, ಯಾವ ವಿಷಯಗಳು ಚರ್ಚೆಯಾಗುತ್ತವೆ ಎಂಬುದನ್ನು ಕುತೂಹಲ ಹುಟ್ಟುಹಾಕಿದೆ.




