DK SHIVAKUMAR: ಕನಕಪುರದ ಅಂಬೇಡ್ಕರ್ ಹಾಸ್ಟೆಲ್‌ಗೆ ಸಿಎಂ ಧಿಡೀರ್ ವಿಸಿಟ್ – ಸ್ಟುಡೆಂಟ್ಸ್ ಸಮಸ್ಯೆ ಆಲಿಸಿದ ಡಿಕೆ

ಕನಕಪುರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ವಿದ್ಯಾರ್ಥಿಗಳೊಂದಿಗೆ ಸಹಭೋಜನ ಮಾಡಿದ ಅವರು, ಅವರ ಸಮಸ್ಯೆಗಳನ್ನು ಆಲಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸಿ ಮರು ಪರಿಶೀಲನೆ ನಡೆಸಿ ಸರಿಪಡಿಸುವ ಭರವಸೆ ನೀಡಿದರು.

ಈ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾಸ್ಟೆಲ್‌ನ ಕೊಠಡಿ ಮತ್ತು ಶೌಚಾಲಯಗಳನ್ನು ವೀಕ್ಷಿಸಿದ್ದು, ವಿದ್ಯಾರ್ಥಿಗಳಿಗೆ ಹಾಸಿಗೆ ಹೊದಿಕೆಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ ಎಂದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅವರಿಂದಲೇ ಬರೆಸಿಕೊಂಡಿರುವುದಾಗಿ ತಿಳಿಸಿದರು. ಕಲಬುರಗಿ, ರಾಯಚೂರು, ಬೀದರ್, ಹಾವೇರಿ, ಬೆಂಗಳೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲರಿಗೂ ಉಚಿತ ಬಸ್ ಪಾಸ್ ಸಿಕ್ಕಿದೆ ಎಂದು ಹೇಳಿದರು. ಕೆಂಪು ಬಸ್ ನಿಲುಗಡೆ ಆಗುತ್ತಿಲ್ಲ ಎಂಬ ದೂರು ಬಂದಿದ್ದು, ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನಕಪುರಕ್ಕೆ ಬಂದಿದ್ದು, ಹಾಸ್ಟೆಲ್ ಭೇಟಿಗಾಗಿಯೇ ಒಂದು ದಿನ ಮುಂಚಿತವಾಗಿ ಆಗಮಿಸಿದ್ದಾಗಿ ಡಿಕೆ ಶಿವಕುಮಾರ್ ಹೇಳಿದರು. ಹಬ್ಬದ ಕಾರಣ ಮೊರಾರ್ಜಿ ದೇಸಾಯಿ ವಸತಿ ನಿಲಯ ಖಾಲಿ ಇದ್ದ ಕಾರಣ ಅಲ್ಲಿಗೆ ಹೋಗಿಲ್ಲ ಎಂದ ಅವರು, ಪ್ರಸ್ತುತ ಹಾಸ್ಟೆಲ್‌ನಲ್ಲಿ ಶೇ.75 ರಷ್ಟು ವ್ಯವಸ್ಥೆ ಚೆನ್ನಾಗಿದ್ದು ಉಳಿದದ್ದನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಹೀಗೆ ಮುಖ್ಯಮಂತ್ರಿಗಳು ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿಯೇ ಊಟ ಮಾಡಿ ಸಮಸ್ಯೆಗಳನ್ನು ಆಲಿಸುವ ಕ್ರಮ ಆಡಳಿತದಲ್ಲಿ ಹೊಸ ಎಚ್ಚರಿಕೆಯನ್ನು ಹುಟ್ಟುಹಾಕುತ್ತದೆ. ರಾಜ್ಯದ ಬಹುತೇಕ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕಟ್ಟಡದ ಗುಣಮಟ್ಟ, ಕೊಠಡಿಗಳ ದಟ್ಟಣೆ, ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್, ಹಾಸಿಗೆ ಹೊದಿಕೆ, ಊಟದ ಗುಣಮಟ್ಟದ ಬಗ್ಗೆ ನಿರಂತರ ದೂರುಗಳಿವೆ. ಅಧಿಕಾರಿಗಳ ವರದಿಯಲ್ಲಿ ಎಲ್ಲವೂ ಸರಿಯಿದೆ ಎಂದು ಕಾಣಿಸಿದರೂ ನೆಲದ ವಾಸ್ತವ ಭಿನ್ನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದಲೇ ಲಿಖಿತವಾಗಿ ಅಹವಾಲು ಪಡೆದಿರುವುದು ಉತ್ತಮ ಬೆಳವಣಿಗೆ. ಬೆಡ್ ಶೀಟ್‌ನಂತಹ ಅತ್ಯಂತ ಮೂಲಭೂತ ಸೌಲಭ್ಯವೂ ಇಲ್ಲದಿರುವುದು ಸಣ್ಣ ಲೋಪವಲ್ಲ, ಅದು ನಿರ್ವಹಣಾ ವ್ಯವಸ್ಥೆಯ ಬೇಜವಾಬ್ದಾರಿಯನ್ನು ತೋರಿಸುತ್ತದೆ.