ಮೈಸೂರು ಜಿಲ್ಲೆಯ ಟಿ. ನರಸೀಪುರದ ಲಿಂಕ್ ರಸ್ತೆಯಲ್ಲಿರುವ ಮಸೀದಿಯ ಮುಂಭಾಗದಲ್ಲಿ ಗಣೇಶ ಮೆರವಣಿಗೆ ನಡೆಸಬಾರದು ಮತ್ತು ಪಟಾಕಿ ಸಿಡಿಸಬಾರದು ಎಂದು ಸ್ಥಳೀಯ ಪೋಲಿಸ್ ಇನ್ಸ್ಪೆಕ್ಟರ್ ಧನಂಜಯ ನೀಡಿದ್ದರೆನ್ನಲಾದ ಎಚ್ಚರಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಮೈಸೂರು ಸಂಸದ ಯದುವೀರ್ ಒಡೆಯರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಹಿಂದುಗಳ ಹಬ್ಬಗಳ ಆಚರಣೆಗೆ ಕಾಂಗ್ರೆಸ್ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಅನಗತ್ಯ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು, ಸಂಬಂಧಪಟ್ಟ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಈ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದು, ಅದೇ ಸಮಯದಲ್ಲಿ ದಲಿತ ಸಂಘಟನೆಗಳು ಕೂಡ ಪ್ರತಾಪ್ ಸಿಂಹ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಆರೋಪ ಹೊರಿಸಿ ಪ್ರತಿಭಟನೆ ನಡೆಸಿದವು.
ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರ ಯಾವುದೇ ಹಬ್ಬಕ್ಕೆ ಅಡ್ಡಿಪಡಿಸುತ್ತಿಲ್ಲ, ಕೇವಲ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಗಣೇಶ ಮೂರ್ತಿ ವಿಸರ್ಜನೆಯ ಸಾಂಪ್ರದಾಯಿಕ ಮಾರ್ಗಕ್ಕೆ ಯಾವುದೇ ನಿಷೇಧ ಹೇರಿಲ್ಲ ಮತ್ತು ಕಳೆದ ವರ್ಷ ಮುನ್ನೆಚ್ಚರಿಕೆ ಇಲ್ಲದೆ ನಡೆದ ಮೆರವಣಿಗೆಯ ಹಿನ್ನೆಲೆಯಲ್ಲಿ ಈ ಬಾರಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಹಬ್ಬ ಆಚರಿಸಲು ಸೂಚಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಸಿಎಂ ಡಿಕೆ ಹೇಳಿದ್ದಾರೆ.
ಸಮಾಜದಲ್ಲಿ ಶಿಸ್ತು ಕಾಪಾಡುವುದು ಹಾಗೂ ವಿದ್ಯುತ್ ಕಂಬಗಳಂತಹ ಅಪಾಯಗಳಿಂದ ಸುರಕ್ಷತೆ ವಹಿಸುವುದು ಇಲಾಖೆಯ ಕರ್ತವ್ಯವಾಗಿದ್ದು, ಬಿಜೆಪಿ ನಾಯಕರು ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಹಾಗೂ ಕೋಮು ಭಾವನೆಗಳನ್ನು ಪ್ರಚೋದಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್, ಇನ್ಸ್ಪೆಕ್ಟರ್ ಮಾತನಾಡಿರೋದ್ರಲ್ಲಿ ತಪ್ಪೇನಿದೆ..? ಎಂದಿದ್ದಾರೆ.
ರಾಜ್ಯದಲ್ಲಿ ಧಾರ್ಮಿಕ ಉತ್ಸವಗಳು ಮತ್ತು ಕಾನೂನು ಸುವ್ಯವಸ್ಥೆಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಸದಾ ಸವಾಲಿನ ಕೆಲಸವಾಗಿದೆ. ಟಿ. ನರಸೀಪುರದಲ್ಲಿ ನಡೆದ ಈ ಘಟನೆ ಸ್ಥಳೀಯ ಪೋಲಿಸ್ ಅಧಿಕಾರಿಗಳು ಕಟ್ಟುನಿಟ್ಟಿನ ಶಾಂತಿ ಪಾಲನೆಗಾಗಿ ನೀಡಿದ ಸೂಚನೆಯನ್ನು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಹೇಗೆ ಬಳಸಿಕೊಳ್ಳುತ್ತವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಒಂದು ಕಡೆ, ಯಾವುದೇ ಧಾರ್ಮಿಕ ಮೆರವಣಿಗೆ ಸಾರ್ವಜನಿಕ ರಸ್ತೆಗಳಲ್ಲಿ ಸಾಗುವ ಮೂಲಭೂತ ಹಕ್ಕನ್ನು ಹೊಂದಿದೆ ಎಂದು ಪ್ರತಿಪಕ್ಷಗಳು ಪ್ರತಿಪಾದಿಸುತ್ತಿದ್ದರೆ, ಇನ್ನೊಂದೆಡೆ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯುವುದು ಪೋಲಿಸ್ ಇಲಾಖೆಯ ಕರ್ತವ್ಯವಾಗಿದೆ.
ಆದ್ರೆ ಪೊಲೀಸ್ ಅಧಿಕಾರಿಗಳು ಮಾತನಾಡುವಾಗ ಸಾರ್ವಜನಿಕರಲ್ಲಿ ಗೊಂದಲ ಮೂಡದಂತೆ, ದರ್ಪದ ಭಾವ ಬಾರದಂತೆ ಎಚ್ಚರವಹಿಸುವುದು ಎಷ್ಟು ಮುಖ್ಯವೋ, ರಾಜಕೀಯ ನಾಯಕರು ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವುದನ್ನು ತಡೆಯುವುದು ಅಷ್ಟೇ ಅಗತ್ಯವಾಗಿದೆ. ಸುಗಮ ಹಬ್ಬದ ಆಚರಣೆಗೆ ಶಾಂತಿ ಮತ್ತು ಪೋಲಿಸ್ ನಿಯಮಗಳ ಪಾಲನೆ ಪ್ರತಿಯೊಬ್ಬರ ನಾಗರೀಕರು ಕರ್ತವ್ಯವಾಗಿದೆ.




