☔ Weather
Bengaluru: ☁️ 22°C | AQI 53
Mysore: ☁️ 22°C | AQI 55
Mangalore: ☁️ 26°C | AQI 87
Bengaluru: ☁️ 22°C | AQI 53

DK SHIVAKUMAR: ನಂದಿನಿ ದರ ಏರಿಕೆ ಪ್ರಸ್ತಾವನೆ – ಲೀಟರ್ ಗೆ 10 ರೂಪಾಯಿ ಹೆಚ್ಚಳ..?

Image of DK Shivakumar

ಬೆಂಗಳೂರು : ನಂದಿನಿ ಹಾಲಿನ ಬೆಲೆಯನ್ನು ಹೆಚ್ಚಿಸಬೇಕೆಂಬ ಹಾಲು ಒಕ್ಕೂಟಗಳ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ಸಮತೋಲನದ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಭರವಸೆ ನೀಡಿದ್ದಾರೆ.

ಇಂದು ಬೆಳಗ್ಗೆ ಜಿಲ್ಲಾ ಹಾಲು ಒಕ್ಕೂಟಗಳ ಮುಖ್ಯಸ್ಥರು ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕರ ತಂಡ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿತು. ಮಾಜಿ ಸಂಸದ ಮತ್ತು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ ಕೋಲಾರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಸಕ ಕೆ.ವೈ. ನಂಜೇಗೌಡ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಪಾವಗಡ ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ವೆಂಕಟೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಈ ವೇಳೆ ನಿಯೋಗದ ಮುಖ್ಯ ಬೇಡಿಕೆ ಪ್ರತಿ ಲೀಟರ್ ಗೆ ಸರಾಸರಿ ಹತ್ತು ರೂಪಾಯಿ ಏರಿಕೆ ಮಾಡಬೇಕು ಎಂಬುದು. ಏರಿಕೆಯಾಗುವ ಮೊತ್ತದಲ್ಲಿ ಏಳು ರೂಪಾಯಿಯನ್ನು ನೇರವಾಗಿ ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸಿ, ಉಳಿದ ಮೂರು ರೂಪಾಯಿಯನ್ನು ಒಕ್ಕೂಟಗಳು ಎದುರಿಸುತ್ತಿರುವ ಆರ್ಥಿಕ ನಷ್ಟವನ್ನು ತುಂಬಲು ಬಳಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಅನ್ನದಾತರಿಗೆ 2500/-ರೂ. ಪರಿಹಾರ ಯಾವುದಕ್ಕೂ ಸಾಲಲ್ಲ – ಸಾಲ ಮನ್ನಾ ಮಾಡಿ

ಈ ಬೇಡಿಕೆಗೆ ಕಾರಣಗಳನ್ನು ವಿವರಿಸಿದ ನಿಯೋಗ, ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳು ಶೇಕಡಾ 40 ರಷ್ಟು ಪಾಲು ಹೊಂದಿದ್ದು, ಅವುಗಳ ದರ ನಂದಿನಿಗಿಂತ ಹೆಚ್ಚಿದೆ. ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಸಾಗಣೆ ವೆಚ್ಚ ವಿಪರೀತವಾಗಿದೆ. ಜೊತೆಗೆ ಜೋಳ, ಹಿಂಡಿ, ಬೂಸಾ ಸೇರಿದಂತೆ ಮೇವಿನ ಬೆಲೆ ಗಗನಕ್ಕೇರಿದ್ದರಿಂದ ಉತ್ಪಾದನಾ ವೆಚ್ಚ ನಿಭಾಯಿಸುವುದು ಕಷ್ಟವಾಗಿದೆ ಎಂದಿದೆ.

ಮತ್ತೆ ಮತ್ತೆ ಬೆಲೆ ಏರಿಕೆ !

ಈ ಹಿಂದೆ ಎರಡು ಬಾರಿ ಮೂರು ರೂಪಾಯಿ ಮತ್ತು ನಾಲ್ಕು ರೂಪಾಯಿಯಂತೆ ದರ ಹೆಚ್ಚಿಸಲಾಗಿತ್ತಾದರೂ ಆ ಸಂಪೂರ್ಣ ಹಣ ರೈತರಿಗೆ ಹೋಯಿತು. ಒಕ್ಕೂಟಗಳ ನಷ್ಟಕ್ಕೆ ಪರಿಹಾರ ಸಿಗಲಿಲ್ಲ. ಈಗ ದಿನಕ್ಕೆ ಒಂದು ಕೋಟಿ ಲೀಟರ್ ಸಂಗ್ರಹವಾಗುತ್ತಿದ್ದು, ಅದರಲ್ಲಿ 60 ಲಕ್ಷ ಲೀಟರ್ ಮಾತ್ರ ನೇರ ಮಾರಾಟವಾಗುತ್ತಿದೆ. ಉಳಿದ 40 ಲಕ್ಷ ಲೀಟರ್ ನಿಂದ ಉಪ ಉತ್ಪನ್ನ ತಯಾರಿಸಿ ಮಾರಾಟ ಮಾಡಿ ಹಣ ಹೊಂದಿಸಿ ರೈತರಿಗೆ ಪಾವತಿಸಬೇಕಾಗಿದೆ ಎಂದು ಒಕ್ಕೂಟಗಳು ಹೇಳಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಏಕಾಏಕಿ ಹತ್ತು ರೂಪಾಯಿ ಏರಿಸುವುದು ಕಷ್ಟ. ಗ್ರಾಹಕರ ಮೇಲೆ ಹೆಚ್ಚು ಹೊರೆ ಬೀಳದಂತೆ ಮತ್ತು ರೈತರು ಹಾಗೂ ಒಕ್ಕೂಟಗಳಿಗೂ ಅನುಕೂಲವಾಗುವಂತೆ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ. ಇತ್ತೀಚಿನ ವಿಶೇಷ ಅಧಿವೇಶನದಲ್ಲಿ ಎಲ್ಲ ಪಕ್ಷಗಳ ಶಾಸಕರು ದರ ಏರಿಕೆಗೆ ಒತ್ತಾಯಿಸಿರುವುದು ತಮಗೆ ನೈತಿಕ ಬಲ ತಂದಿದೆ ಎಂದಿದ್ದಾರೆ.

ಈ ಭೇಟಿ ನಂತರ ಮಾತನಾಡಿದ ಡಿ.ಕೆ. ಸುರೇಶ್, ಪೆಟ್ರೋಲ್, ಡೀಸೆಲ್, ಕುಡಿಯುವ ನೀರಿನ ಬಾಟಲಿಗೆ ಲೀಟರ್ ಗೆ 20 ರೂಪಾಯಿ ಕೊಟ್ಟರೂ ಜನರು ಪ್ರಶ್ನಿಸುವುದಿಲ್ಲ. ಹಾಲಿನ ವಿಷಯ ಬಂದಾಗ ಮಾತ್ರ ಗ್ರಾಹಕರ ಹೊರೆ ಎಂಬ ಚರ್ಚೆ ಶುರುವಾಗುತ್ತದೆ. ಇಸ್ರೇಲ್-ಇರಾನ್ ಸಂಘರ್ಷದ ನಂತರ ಎಲ್ಲ ವಸ್ತುಗಳ ಬೆಲೆ ಏರಿದೆ. ಕಳೆದ ನಾಲ್ಕೈದು ತಿಂಗಳಿಂದ ದರ ಏರಿಕೆ ಬೇಡಿಕೆ ಇದೆ. ರಾಜ್ಯದ ರೈತರು ಬೆಂಗಳೂರಿಗೆ ಬಂದು 224 ಶಾಸಕರು ಮತ್ತು 75 ಪರಿಷತ್ ಸದಸ್ಯರಿಗೆ ಮನವಿ ನೀಡಿದ ಬಳಿಕ ವಿಧಾನಮಂಡಲದಲ್ಲಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ. ಸದ್ಯಕ್ಕೆ ಸರ್ಕಾರ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹಧನ ಹೆಚ್ಚಳದ ವಿಷಯ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.