ಉತ್ತರ ಪ್ರದೇಶದ : ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ (Bjp) ರಣತಂತ್ರ ರೂಪಿಸಿದ್ದು, ಮೋದಿ-ಶಾ ನೇತೃತ್ವದಲ್ಲಿ ಮುಂದಿನ ತಿಂಗಳಿಂದ ಭರ್ಜರಿ ಪ್ರಚಾರ ಆರಂಭವಾಗಲಿದೆ. 2027ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪಕ್ಷದ ಹೈಕಮಾಂಡ್ ಈಗಿನಿಂದಲೇ ಮೈದಾನಕ್ಕಿಳಿದಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ಅಧ್ಯಕ್ಷ ನತಿನ್ ನಬಿನ್ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರದ ಮುಂದಾಳತ್ವ ವಹಿಸಲಿದ್ದಾರೆ. ಮಥುರಾದಲ್ಲಿ ನಡೆದ ಎರಡು ದಿನಗಳ ಉನ್ನತ ನಾಯಕರ ಸಭೆಯಲ್ಲಿ ಈ ಕಾರ್ಯತಂತ್ರಕ್ಕೆ ಅಂತಿಮ ರೂಪ ನೀಡಲಾಗಿದೆ. ಸಂಘಟನೆ ಬಲಪಡಿಸುವುದು ಮತ್ತು ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಬ್ರಜ್, ಪಶ್ಚಿಮ ಯುಪಿ, ಕಾನ್ಪುರ-ಬುಂದೇಲ್‌ಖಂಡ್, ಕಾಶಿ, ಅವಧ್ ಮತ್ತು ಗೋರಖಪುರ ಸೇರಿದಂತೆ ಎಲ್ಲಾ ಸಾಂಸ್ಥಿಕ ಪ್ರದೇಶಗಳಲ್ಲಿ ಒಟ್ಟು ಆರು ಜನ ಆಶೀರ್ವಾದ ಯಾತ್ರೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಎಲ್ಲಾ ಯಾತ್ರೆಗಳ ಸಮಾರೋಪ ಸಮಾರಂಭ ಲಕ್ನೋದಲ್ಲಿ ಬೃಹತ್ ಸಭೆಯೊಂದಿಗೆ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಅದರಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ.
ಕಾರ್ಯಕರ್ತನೇ ಮೊದಲು ಎಂಬ ತತ್ವ ..!
ಉತ್ತರಪ್ರದೇಶದಾದ್ಯಂತ ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಬೂತ್ ಮಟ್ಟದ ಸಮ್ಮೇಳನಗಳು ಮತ್ತು ಶಕ್ತಿ ಕೇಂದ್ರಗಳ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಅಮಿತ್ ಶಾ ಅವರು ಇಂತಹ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರದ ಸಚಿವರನ್ನು ಪ್ರತ್ಯೇಕ ಜಿಲ್ಲೆಗಳ ಉಸ್ತುವಾರಿಯನ್ನಾಗಿ ನೇಮಿಸಿ, ಹಿರಿಯ ಕಾರ್ಯಕರ್ತರನ್ನು ಭೇಟಿ ಮಾಡಿ ಸರ್ಕಾರ ಮತ್ತು ಸಂಘಟನೆಯ ಕಾರ್ಯವೈಖರಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿದೆ. ಕಾರ್ಯಕರ್ತ ಮೊದಲು ಎಂಬ ತತ್ವದಡಿ ಕಾರ್ಯಕರ್ತರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಅವರ ಸಲಹೆಗಳನ್ನೇ ಮುಂಬರುವ ಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲೂ ಪರಿಗಣಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಡಿಜಿಟಲ್ ಪ್ರಚಾರಕ್ಕೂ ಒತ್ತು ನೀಡಲಾಗಿದ್ದು, ಪ್ರಮುಖ ಯೂಟ್ಯೂಬರ್‌ಗಳು ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಜಿಲ್ಲಾ ಘಟಕಗಳಿಗೆ ಸೂಚಿಸಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗಿರುವ ಅರ್ಹ ಮತದಾರರನ್ನು ಗುರುತಿಸಿ ಮತ್ತೆ ಸೇರಿಸಲು ವಿಶೇಷ ಅಭಿಯಾನ ನಡೆಸಲು ಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ, ಭದ್ರತೆ, ಬಡವರ ಕಲ್ಯಾಣ ಮತ್ತು ರೈತರ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಈ ಬಾರಿ ಮತಯಾಚಿಸಲಿದೆ.
ಇದನ್ನೂ ಓದಿ : ಹಿರಿಯೂರು ಟಿಕೆಟ್‌ಗಾಗಿ ಮೈತ್ರಿಯಲ್ಲಿ ಪೈಪೋಟಿ, ಇಂದು ದೆಹಲಿಯಲ್ಲಿ ನಿರ್ಣಾಯಕ ಸಭೆ
ಉತ್ತರ ಪ್ರದೇಶ ಬಿಜೆಪಿಗೆ ಕೇವಲ ಒಂದು ರಾಜ್ಯವಲ್ಲ, ಅದು ರಾಷ್ಟ್ರ ರಾಜಕಾರಣದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಕಣವಾಗಿದೆ. ಹೀಗಾಗಿ ಚುನಾವಣೆಗೆ ಇನ್ನೂ ಸಮಯವಿದ್ದರೂ ಈಗಿನಿಂದಲೇ ಪ್ರಚಾರ ಆರಂಭಿಸುವ ಮೂಲಕ ಪಕ್ಷವು ಎದುರಾಳಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಲು ಯತ್ನಿಸುತ್ತಿದೆ. ಯಾತ್ರೆ, ಬೂತ್ ಸಭೆ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮತ್ತು ಡಿಜಿಟಲ್ ಪ್ರಚಾರ ಎಂಬ ನಾಲ್ಕು ಹಂತದ ತಂತ್ರದ ಮೂಲಕ ಪಕ್ಷವು ಎಲ್ಲಾ ವರ್ಗದ ಮತದಾರರನ್ನು ತಲುಪಲು ಹೊರಟಿದೆ. ಆದರೆ ಕೇವಲ ಯಾತ್ರೆ ಮತ್ತು ಸಭೆಗಳಿಂದಲೇ ಗೆಲುವು ಸಿಗುವುದಿಲ್ಲ. ಕ್ಷೇತ್ರದಲ್ಲಿ ಕಾರ್ಯಕರ್ತರ ಅಸಮಾಧಾನ, ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲ ಮತ್ತು ಸ್ಥಳೀಯ ಸಮಸ್ಯೆಗಳನ್ನು ಪಕ್ಷ ಎಷ್ಟು ಸಮರ್ಥವಾಗಿ ಬಗೆಹರಿಸುತ್ತದೆ ಎಂಬುದರ ಮೇಲೆಯೇ ಫಲಿತಾಂಶ ನಿಂತಿದೆ. ಮೋದಿ-ಶಾ ಅವರ ವರ್ಚಸ್ಸು ದೊಡ್ಡ ಶಕ್ತಿಯಾದರೂ, ಕೊನೆಗೆ ಸ್ಥಳೀಯ ನಾಯಕತ್ವ ಮತ್ತು ಜನರ ನಂಬಿಕೆಯೇ ನಿರ್ಣಾಯಕವಾಗಲಿದೆ.




