ಬೆಂಗಳೂರು : ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಮತ್ತು ಸಚಿವರು ಸೇರಿದಂತೆ ಹಲವು ನಾಯಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಇದು ಸಂಪೂರ್ಣ ನಿಯಮಬಾಹಿರ ನಡೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷ (BJP) ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ಸಲ್ಲಿಸಿದೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ತಕ್ಷಣ ಪ್ರಥಮ ವರ್ತಮಾನ ವರದಿ ದಾಖಲಿಸಿ ಬಂಧನ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಎಸ್.ಐ.ಆರ್ ಹೈಡ್ರಾಮ : ಫಾರಂ-7 ಗೋಲ್ ಮಾಲ್ ವಿರುದ್ಧ ಕ್ರಮಕ್ಕೆ ಸಿಇಒ ಆದೇಶ
ಹೈಕೋರ್ಟ್ ಆದೇಶದ ಪ್ರಕಾರ ಬೆಂಗಳೂರು ನಗರದಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧರಣಿ ಅಥವಾ ಪ್ರತಿಭಟನೆಗೆ ಅವಕಾಶವಿಲ್ಲ. ಆದರೂ ಯಾವುದೇ ಪೂರ್ವಾನುಮತಿ ಪಡೆಯದೆ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಯಾದ ಚುನಾವಣಾ ಆಯೋಗದ ಕಚೇರಿ ಆವರಣದೊಳಗೇ ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿರುವುದು ಸ್ಪಷ್ಟವಾಗಿ ನ್ಯಾಯಾಂಗ ನಿಂದನೆ ಮತ್ತು ಕಾನೂನು ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು, ಪ್ರತಿಭಟನೆಗೆ ಅನುಮತಿ ನೀಡಿದವರು ಯಾರು, ಲಿಖಿತ ಅನುಮತಿ ಇದೆಯೇ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು, ಸ್ಥಳದ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ, ಪೊಲೀಸ್ ಬಂದೋಬಸ್ತ್ ವಿವರ ಮತ್ತು ಕೈಗೊಂಡ ಕ್ರಮಗಳ ವರದಿಯನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ನಿಯೋಗ ಆಗ್ರಹಿಸಿದೆ.
ಎಸ್.ಐ.ಆರ್ ರಾಜಕೀಯ ಹಣಾಹಣಿ !
ಈ ಘಟನೆ ಕೇವಲ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಸೀಮಿತವಾಗಿರದೆ ಚುನಾವಣಾ ಆಯೋಗದ ಘನತೆ ಮತ್ತು ಕಾನೂನಿನ ಸಮಾನ ಅನ್ವಯದ ಪ್ರಶ್ನೆಯನ್ನು ಎತ್ತಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಆಯೋಗದ ಕಚೇರಿ ಆವರಣದಲ್ಲೇ ಆಡಳಿತ ಪಕ್ಷದ ಮುಖ್ಯಸ್ಥರೇ ಪ್ರತಿಭಟನೆ ನಡೆಸುವುದು ಸಂಸ್ಥೆಯ ಘನತೆಗೆ ಧಕ್ಕೆ ತಂದಂತಾಗುತ್ತದೆ. ಸಾಮಾನ್ಯ ನಾಗರಿಕರು ಅದೇ ಜಾಗದಲ್ಲಿ ಪ್ರತಿಭಟನೆ ಮಾಡಿದ್ದರೆ ತಕ್ಷಣ ಪ್ರಕರಣ ದಾಖಲಾಗುತ್ತಿತ್ತು, ಆದರೆ ಅಧಿಕಾರದಲ್ಲಿರುವವರಿಗೆ ವಿನಾಯಿತಿ ಸಿಕ್ಕರೆ ಕಾನೂನಿನ ಮೇಲಿನ ಜನರ ನಂಬಿಕೆ ಕಡಿಮೆಯಾಗುತ್ತದೆ ಎಂಬ ಅರ್ಥದಲ್ಲಿ ಬಿಜೆಪಿ ಪ್ರತಿಪಾದಿಸಿದೆ. ಹೈಕೋರ್ಟ್ ಆದೇಶವನ್ನು ಎಲ್ಲರೂ ಗೌರವಿಸಬೇಕಿದ್ದು, ರಾಜಕೀಯ ಲಾಭಕ್ಕಾಗಿ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಬಾರದು ಎಂಬ ಆಗ್ರಹ ಮಾಡಿದೆ.




